ಹಂಪಿ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆದರೆ, ಪ್ರಮುಖ ಪ್ರವೇಶ ದ್ವಾರವಾದ ಕಡ್ಡಿರಾಂಪುರದ ಕಮಾನಿಗೆ ಬಣ್ಣ ಬಳಿಯದೆ, ಲೈಟಿಂಗ್ ವ್ಯವಸ್ಥೆಯಿಲ್ಲದೆ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ಉತ್ಸವದಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಹಾಗೂ ಲೈಟಿಂಗ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಹೊಸಪೇಟೆ (ಫೆ.24): ಒಂದೆಡೆ ಹಂಪಿ ಉತ್ಸವಕ್ಕೆ ಐದು ವೇದಿಕೆಗಳನ್ನು ನಿರ್ಮಾಣ ಮಾಡಿ ಭರದ ಸಿದ್ಧತೆ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಹಂಪಿಗೆ ಪ್ರಮುಖ ಪ್ರವೇಶ ದ್ವಾರವಾಗಿರುವ ಕಡ್ಡಿರಾಂಪುರದ ಕಮಾನಿಗೆ ಬಣ್ಣ ಕೂಡ ಬಳಿಯದೇ ಹಂಪಿ ಉತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಹಂಪಿ ಉತ್ಸವದ ಪ್ರಮುಖ ಪ್ರವೇಶ ದ್ವಾರ ಆಗಿರುವ ಕಡ್ಡಿರಾಂಪುರ ಕ್ರಾಸ್‌ನ ಕಮಾನಿಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಉತ್ಸವಕ್ಕೂ ಬಣ್ಣ ಬಳಿದು, ಉತ್ಸವದ ಮೆರಗು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಆದರೆ, ಈ ಬಾರಿ ಉತ್ಸವದ ತಯಾರಿ ಸಾಗಿದರೂ ಕಮಾನಿಗೆ ಮಾತ್ರ ಇದುವರೆಗೆ ಬಣ್ಣ ಕೂಡ ಬಳಿದಿಲ್ಲ.
ಶ್ರೀವಿರೂಪಾಕ್ಷೇಶ್ವರ ದೇವಾಲಯದ ಗೋಪುರದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ಕಮಾನಿಗೆ ಈ ಹಿಂದೆ ಸುಣ್ಣ ಬಳಿಯಲಾಗುತ್ತಿತ್ತು. ಮಾಧ್ಯಮಗಳ ವರದಿಗಳ ಹಿನ್ನೆಲೆ ಬಣ್ಣ ಬಳಿಯಲಾಯಿತು. ಈಗ ಮತ್ತೆ ಉತ್ಸವದ ಸಮಯದಲ್ಲಿ ನಿರ್ಲಕ್ಷ್ಯ ಮಾಡಿ ಕಳೆದ ವರ್ಷ ಬಳಿದ ಬಣ್ಣ ಇದೇ ಎಂದು ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಸಂಬಂಧಿಸಿದ ಇಲಾಖೆ ಈ ಕಮಾನಿಗೆ ಬಣ್ಣ ಬಳಿಯಬೇಕು. ಅಲ್ಲದೇ ಉತ್ಸವಕ್ಕೆ ಏಕಮುಖ ರಸ್ತೆ ಅಳವಡಿಕೆ ಮಾಡುವ ಹಿನ್ನೆಲೆ ಈ ಕಮಾನು ಮೂಲಕವೇ ಹಂಪಿ ಪ್ರವೇಶ ಮಾಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಲೈಟಿಂಗ್ ವ್ಯವಸ್ಥೆಗೆ ಒತ್ತಾಯ:
ಹಂಪಿ ಉತ್ಸವದಲ್ಲಿ ಬೀದಿದೀಪಗಳ ವ್ಯವಸ್ಥೆ ಮಾಡಬೇಕು. ಕಡ್ಡಿರಾಂಪುರ ಕ್ರಾಸ್‌ನಿಂದ ಮುಖ್ಯವೇದಿಕೆಯವರೆಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು. ಈ ಭಾಗದಲ್ಲಿ ಚಿರತೆ ಹಾಗೂ ಕರಡಿಗಳ ಹಾವಳಿ ಇರುವ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗುವ ಹಿನ್ನೆಲೆ ನಡೆದುಕೊಂಡೇ ತಮ್ಮ ವಾಹನಗಳ ಬಳಿ ಬರುವವರಿಗೆ ಲೈಟಿಂಗ್ ವ್ಯವಸ್ಥೆ ಅನುಕೂಲ ಆಗಲಿದೆ. ಇನ್ನೂ ಉದ್ದಾನ ವೀರಭದ್ರೇಶ್ವರ ದೇವಾಲಯದಿಂದ ಕಮಲಾಪುರದ ಹಳೇ ಐಬಿಯವರೆಗೂ ಉತ್ಸವದ ವೇಳೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.
ಇದನ್ನೂ ಓದಿ: Hampi Utsav 2025 | ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ | Suvarna News | Kannada News
ಭಾರೀ ಬಿಸಿಲು ಅಲ್ಲಲ್ಲಿ ನೀರಿನ ವ್ಯವಸ್ಥೆ ಇರಲಿ:
ಈ ಬಾರಿ ಹಂಪಿ ಉತ್ಸವ ಇದೇ ಮೊದಲ ಬಾರಿ ಫೆ. 28 ಮತ್ತು ಮಾರ್ಚ್ 1 ಮತ್ತು 2ರಂದು ಮೂರು ದಿನಗಳವರೆಗೆ ನಡೆಸಲಾಗುತ್ತದೆ. ಎಂ.ಪಿ. ಪ್ರಕಾಶ ಅವರ ಕಾಲದಲ್ಲಿ ಉತ್ಸವವನ್ನು ನ. 3,4,5ರಂದು ನಡೆಸಲಾಗುತ್ತಿತ್ತು. ಕಬ್ಬು ಕಟಾವಿನ ಬಳಿಕ ರೈತರಿಗೂ ಅನುಕೂಲ ಆಗಲಿದೆ. ಶಾಲಾ, ಕಾಲೇಜ್ ಮಕ್ಕಳಿಗೂ ಅನುಕೂಲ ಆಗಲಿದ್ದು, ಮೈಸೂರು ದಸರೆ ಬಳಿಕ ಹಂಪಿ ಉತ್ಸವ ನವೆಂಬರ್‌ನಲ್ಲೇ ನಡೆಸುವುದು ಸೂಕ್ತ ಎಂದು ಅವರು ಆದೇಶ ಕೂಡ ಮಾಡಿಸಿದ್ದರು. ಅಲ್ಲದೇ ಸರ್ಕಾರದ ಮಟ್ಟದಲ್ಲಿ ₹30 ಲಕ್ಷ ಅನುದಾನ ಕೂಡ ಬಿಡುಗಡೆ ಮಾಡಿಸಿದ್ದರು. ಅವರು ಉತ್ಸವ ನಡೆಸಿದಾಗ ₹36 ಲಕ್ಷ ಖರ್ಚು ಬಂದಿತ್ತು. ಆರು ಲಕ್ಷ ರು. ದೇಣಿಗೆ ಪಡೆದು ಉತ್ಸವ ನಡೆಸಿದ್ದರು. ಈಗ ಉತ್ಸವದ ಸ್ವರೂಪ ಕೂಡ ಬದಲಾಗಿದ್ದು, ಜಾಗತಿಕ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ₹20 ಕೋಟಿ ವೆಚ್ಚದಲ್ಲಿ ಉತ್ಸವ ನಡೆಸಲು ಉದ್ದೇಶಿಸಲಾಗಿದೆ. ಈಗ ಬಿಸಿಲು ಕೂಡ ಇರುವುದರಿಂದ ಹಂಪಿಯಲ್ಲಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೇ ರೈತರನ್ನು ಬಳಸಿಕೊಂಡು ರಸ್ತೆಗಳಲ್ಲಿ ಎಳ ನೀರು ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಪೊಲೀಸರು ರೈತರಿಗೆ ಕಿರಿಕಿರಿ ಮಾಡಬಾರದು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಹಂಪಿ ಉತ್ಸವದಲ್ಲಿ ಈ ಬಾರಿ ಪ್ರಧಾನ ವೇದಿಕೆಗೆ ಎಂ.ಪಿ. ಪ್ರಕಾಶ್ ಅವರ ಹೆಸರನ್ನು ನಾಮಕರಣ ಮಾಡಿರುವುದರಿಂದ ಅವರ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಹಂಪಿ ಉತ್ಸವದ ರೂವಾರಿ ಆಗಿರುವ ಎಂ.ಪಿ. ಪ್ರಕಾಶ್ ಅವರಿಗೆ ಜಿಲ್ಲಾಡಳಿತ ಗೌರವ ನೀಡಿರುವುದಕ್ಕೆ ನಾವು ಅಭಿನಂದಿಸುತ್ತೇವೆ ಎಂದು ಎಂ.ಪಿ. ಪ್ರಕಾಶ್ ಅವರ ಅಭಿಮಾನಿ ಉತ್ತಂಗಿ ಕೊಟ್ರೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ
