Halal Row: ಕರ್ನಾಟಕದ ಮತ್ತಷ್ಟು ಕಡೆ ಹಲಾಲ್ ಬಾಯ್ಕಾಟ್ ಕೂಗು: ಕರಪತ್ರ, ವಿಡಿಯೋ ಅಭಿಯಾನ
* ಯುಗಾದಿ ಹಬ್ಬಕ್ಕೆ ಹಲಾಲ್ ಮಾಂಸ ಬಹಿಷ್ಕರಿಸಲು ಕರೆ
* ‘ಹಲಾಲ್ ಮಾಡಿರದ’ ಆಯ್ಕೆ: ಕಂಪನಿಗಳಿಗೆ ಪ್ರಶಾಂತ ಸಂಬರಗಿ ಪತ್ರ
* ಬಹುಸಂಖ್ಯಾತ ಹಿಂದೂಗಳು ಹಲಾಲ್ ನಿಯಮ ಪಾಲಿಸುವುದಿಲ್ಲ
ಬೆಂಗಳೂರು(ಏ.01): ಕೆಲ ಹಿಂದೂ ಪರ ಸಂಘಟನೆಗಳು(Pro-Hindu Organizations) ಕರೆ ಕೊಟ್ಟಿರುವ ‘ಹಲಾಲ್ ಬಾಯ್ಕಾಟ್’(Halal Boycott) ಅಭಿಯಾನ ಗುರುವಾರ ಮತ್ತಷ್ಟು ಜಿಲ್ಲೆಗಳಿಗೆ ವ್ಯಾಪಿಸಿದೆ. ಶಿವಮೊಗ್ಗ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲೂ ಅಭಿಯಾನ ಶುರುವಾಗಿದೆ.
ರಾಮನಗರದಲ್ಲಿ ಬಿಜೆಪಿ(BJP) ಮುಖಂಡ ಮಂಜು ಎಂಬುವರು ಹಲಾಲ್ ಮಾಡಿದ ಮಾಂಸ(Meat) ಖರೀದಿಸಬೇಡಿ, ಜಟ್ಕಾ(Jatka) ಕಟ್ ಮಾಂಸ ಖರೀದಿಸಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿಯಬಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಜರಂಗ ದಳದ ಕಾರ್ಯಕರ್ತರು ಮಾಂಸದಂಗಡಿ, ಹೋಟೆಲ್‌ಗಳಿಗೆ ತೆರಳಿ ಹಲಾಲ್ ಮಾಂಸ ಬಳಸದಂತೆ ಅಭಿಯಾನ ನಡೆಸಿದ್ದಾರೆ. ಈ ಸಂಬಂಧ ಬಿ.ಎಚ್.ರಸ್ತೆಯ ಜನತಾ ಹೋಟೆಲ್ ಮಾಲಿಕರೊಂದಿಗೆ ಮಾತನಾಡುವಾಗ, ಕೆಲವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಬಜರಂಗ ದಳದ 7 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಸಿಎಂ ಬೊಮ್ಮಾಯಿಯವರೇ, ಗಂಡಸ್ತನ ಇದ್ದರೆ ಇದನ್ನೆಲ್ಲಾ ತಡೆಯಿರಿ: ಎಚ್‌ಡಿಕೆ
ಮಂಡ್ಯದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಹಿಂದೂಗಳ(Hindu) ಬಳಿಯೇ ಮಾಂಸ ಖರೀದಿಸಿ ಎಂದು ಕರಪತ್ರ ಹಂಚಿದ್ದರೆ, ಮೈಸೂರಿನಲ್ಲಿ ಯುಗಾದಿ(Yugadi) ಹಬ್ಬದ ವೇಳೆ ಹಲಾಲ್ ಮಾಂಸ ಮತ್ತು ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
‘ಹಲಾಲ್ ಮಾಡಿರದ’ ಆಯ್ಕೆ: ಕಂಪನಿಗಳಿಗೆ ಪ್ರಶಾಂತ ಸಂಬರಗಿ ಪತ್ರ
ಆನ್‌ಲೈನ್ ಮಾರ್ಕೆಟ್ ಅಥವಾ ವೆಬ್‌ಸೈಟ್‌ಗಳಲ್ಲಿ ಹಲಾಲ್ ಮಾಡಿರದ ಮಾಂಸ /ಉತ್ಪನ್ನಗಳ ಖರೀದಿಗೆ ಪ್ರತ್ಯೇಕ ಆಯ್ಕೆಯನ್ನು ನೀಡುವಂತೆ ಸಂಬಂಧಪಟ್ಟ ಮಾರಾಟ ಸಂಸ್ಥೆಗಳಿಗೆ ಆದೇಶ ಹೊರಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಹಿಂದೂಪರ ಮುಖಂಡ ಪ್ರಶಾಂತ್ ಸಂಬರಗಿ(Prashant Sambaragi) ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಗೆ ಪತ್ರ ಬರೆದಿದ್ದಾರೆ.
‘ರಾಜ್ಯದಲ್ಲಿ(Karnataka) ಬಹುಸಂಖ್ಯಾತರು ಹಿಂದೂಗಳಾಗಿದ್ದಾರೆ. ಅವರುಗಳು ಹಲಾಲ್ ನಿಯಮ ಪಾಲಿಸುವುದಿಲ್ಲ. ಆದರೂ, ರೆಸ್ಟೋರೆಂಟ್, ಹೋಟೆಲ್, ಮಾಂಸ ಮಾರಾಟ ವೆಬ್‌ಸೈಟ್, ಸೌಂದರ್ಯ ವರ್ಧಕ ವೆಬ್‌ಸೈಟ್‌ಗಳಲ್ಲಿ ಬರುವ ಹಲಾಲ್ ಮಾಡಿದ ಉತ್ಪನ್ನಗಳನ್ನು ಬಳಸಬೇಕಿದೆ. ಇದು ಗ್ರಾಹಕರ ಹಕ್ಕುಗಳ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ. ಜತೆಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಮಾಂಸ/ ಉತ್ಪನ್ನಗಳ ಖರೀದಿಯ ವೇಳೆ ಹಲಾಲ್ ಮಾಡಿರದ ಆಯ್ಕೆಯನ್ನು ಕೊಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರ ಹಲಾಲ್ ಖರೀದಿಸಬೇಡಿ ಎಂದು ಹೇಳಿಲ್ಲ, ಎರಡೂ ಸಮುದಾಯಕ್ಕೂ ಬುದ್ದಿ ಹೇಳಬೇಕು
ಬೆಂಗಳೂರು: ಹಲಾಲ್ ಮಾಡಿ ಕತ್ತರಿಸಿದ ಮಾಂಸ (Halal Meat) ಬಹಿಷ್ಕಾರಿಸಲು ಹಿಂದು ಸಂಘಟನೆಗಳು ಕರೆ ಕೊಟ್ಟಿದೆ. ಈ ವಿಚಾರದ ಬಗ್ಗೆ ಈಗ ಎಲ್ಲೆಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದೆ. ಈ ನಡುವೆ ಕಲಾಪದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ (R Ashoka), ಸರ್ಕಾರ ಹಲಾಲ್ ಮಾಂಸ ಖರೀದಿಸಬೇಡಿ ಎಂದು ಎಲ್ಲೂ ಹೇಳಿಲ್ಲ. ಎರಡೂ ಸಮುದಾಯಕ್ಕೆ ಬುದ್ದಿ ಹೇಳುವ ಕೆಲಸವಾಗಬೇಕು ಎಂದು ಹೇಳಿದ್ದರು.
ಕಲಾಪದಲ್ಲೂ ಹಲಾಲ್ ಪ್ರತಿಧ್ವನಿ.. ಇಬ್ರಾಂ ಹೇಳಿದ ವಿಧಾನ!
ಮಾ.30 ರಂದು ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಈ ವಿಚಾರ ಪ್ರಸ್ತಾಪ ಮಾಡಿದ ಬೆನ್ನಲ್ಲಿಯೇ ಮಧ್ಯಪ್ರವೇಶಿಸಿ ಮಾತನಾಡಿದ ಅಶೋಕ್, "ಯಾರು ಎಲ್ಲಿ ಖರೀದಿಸಬೇಕು ಅನ್ನೋದು ಅವರ ಹಕ್ಕು. ಇಲ್ಲೇ ತೆಗೆದುಕೊಳ್ಳಿ, ಅಲ್ಲೇ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುವುದು ತಪ್ಪು. ಹಲಾಲ್ ಖರೀದಿಸಬೇಡಿ ಎಂದು ಸರ್ಕಾರ ಎಲ್ಲೂ ಹೇಳಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದರು.
ಎರಡೂ ಸಮುದಾಯಕ್ಕೂ ಬುದ್ಧಿವಾದ ಹೇಳುವ ಕೆಲಸವಾಗಬೇಕು. ಈ ವಿಚಾರದಲ್ಲಿ ಸರ್ಕಾರ ಯಾರದೋ ಒಬ್ಬರ ಪರವಾಗಿ ಮಾತನಾಡುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ. ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ, ಎಲ್ಲಾ ಸಂಘಟನೆಗಳು ಹಲವಾರು ವಿಚಾರದಲ್ಲಿ ಬ್ಯಾನ್ ಮಾಡುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ಸರ್ಕಾರ ತನ್ನ ನಿಲುವನ್ನು ಹೇಳುತ್ತಾ ಇರಲು ಆಗಲ್ಲ, ಯಾವಾಗ ಏನು ಹೇಳಬೇಕೋ ಆಗ ಹೇಳಲಿದ್ದೇವೆ. ಯಾವಾಗ ನಿಲುವು ವ್ಯಕ್ತಪಡಿಸಬೇಕೋ ಆಗ ವ್ಯಕ್ತಪಡಿಸಲಿದ್ದೇವೆ ಎಂದು ಹೇಳುವ ಮೂಲಕ ತಮ್ಮ ನಿಲವನ್ನು ಸ್ಪಷ್ಟಪಡಿಸಿದ್ದರು.