‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’-2017’ ಅಡಿ ಹೊಸ ಮತ್ತು ಸಮಗ್ರ ಮಾರ್ಗಸೂಚಿ ಹೊರಡಿಸುವುದು ಸೂಕ್ತ ಎಂದು ಸರ್ಕಾರಕ್ಕೆ ಆದೇಶಿಸಿದ ಹೈಕೋರ್ಟ್‌. 

ಬೆಂಗಳೂರು(ಜ.25):  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ವಿಚಾರದಲ್ಲಿ ಉಂಟಾಗುತ್ತಿರುವ ಗೊಂದಲ ನಿವಾರಿಸಲು ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’-2017’ ಅಡಿ ಹೊಸ ಮತ್ತು ಸಮಗ್ರ ಮಾರ್ಗಸೂಚಿ ಹೊರಡಿಸುವುದು ಸೂಕ್ತ ಎಂದು ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ. ಕರ್ನಾಟಕ ನಾಗರಿಕ ಸೇವಾ ಕಾಯ್ದೆ-2017 ಕಾನೂನುಬದ್ಧತೆ ಮತ್ತು ಈ ಕಾಯ್ದೆ ಜಾರಿಗೆ ಹೊರಡಿಸಿದ ಆದೇಶ ಪ್ರಶ್ನಿಸಿ ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್‌) ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ವಿದ್ಯುತ್‌ ಸಂಸ್ಥೆಗಳ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರ ಪೀಠ ಈ ಆದೇಶ ಮಾಡಿದೆ.

2017ರ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ 2019ರ ಜೂ.24ರಂದು ಹೊರಡಿಸಿದ ಆದೇಶದಲ್ಲಿ ಬಡ್ತಿಯಲ್ಲಿನ ಬ್ಯಾಕ್‌ಲಾಗ್‌ ಖಾಲಿ ಹುದ್ದೆಗಳ ಭರ್ತಿ, ಮೀಸಲಾತಿ ವರ್ಗದವರು ಸಾಮಾನ್ಯ ಅಭ್ಯರ್ಥಿಗಳ ಕೋಟಾದಡಿ ಪರಿಗಣಿಸುವ ವಿಚಾರ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸ್ಪಷ್ಟತೆಗಳು ಇಲ್ಲ. ಈ ಎಲ್ಲ ಗೊಂದಲ ಪರಿಹರಿಸಲು ಸರ್ಕಾರ ತನ್ನ ಆದೇಶ ಹಿಂಪಡೆಯುವುದು ಸೂಕ್ತ ಎಂದು ತಿಳಿಸಿರುವ ಹೈಕೋರ್ಟ್‌, ಹೊಸದಾಗಿ ಸಮಗ್ರ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ಇಲ್ಲ: ಹೈಕೋರ್ಟ್‌

ಅಲ್ಲದೆ, ಹೊಸ ಮಾರ್ಗಸೂಚಿಗಳನ್ನು ರೂಪಿಸುವಾಗ ನಾಗರಿಕ ಸೇವಾ ನಿಯಮಗಳು, ನೇಮಕಾತಿ ಅರ್ಹತೆ, ಬಡ್ತಿ ಮತ್ತು ಮೀಸಲು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಎಲ್ಲತೀರ್ಪುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರಿಂದ ಕಾಯ್ದೆಯ ಅನುಷ್ಠಾನದಲ್ಲಿ ಆಗಬಹುದಾದ ಗೊಂದಲ ನಿವಾರಣೆಯಾಗುತ್ತದೆ. ಸರ್ಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆ ಮೇಲೆ ಬೀರಬಹುದಾದ ಪರಿಣಾಮ ಹಾಗೂ ಉದ್ಭವವಾಗುವ ಅನಗತ್ಯ ವಾಜ್ಯಗಳು ತಪ್ಪಿಸಬಹುದು ಎಂದು ಆದೇಶದಲ್ಲಿ ಹೈಕೋರ್ಟ್‌ ಹೇಳಿದೆ.

ಕರ್ನಾಟಕ ನಾಗರಿಕ ಸೇವಾ ಕಾಯ್ದೆ-2017 ಮತ್ತು ಈ ಕಾಯ್ದೆ ಜಾರಿಗೆ ಸರ್ಕಾರ ಹೊರಡಿಸಿದ ಆದೇಶ ಆಧರಿಸಿ ಪ್ರಕಟಿಸಿದ ಕೆಪಿಟಿಸಿಎಲ್‌ ಅಧಿಕಾರಿಗಳ ಬಡ್ತಿಯ ತಾತ್ಕಾಲಿಕ ಮತ್ತು ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಕೆಲವು ಅಧಿಕಾರಿಗಳಿಗೆ ಕೆಪಿಟಿಸಿಎಲ್‌ ನೀಡಿರುವ ಬಡ್ತಿ ಕಾನೂನಿಗೆ ವಿರುದ್ಧವಾಗಿದೆ. 2017ರ ಕಾಯ್ದೆಯು ಅನಾವಶ್ಯಕ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಿದೆ ಎಂದು ಆಕ್ಷೇಪಿಸಿದ್ದರು.