Asianet Suvarna News Asianet Suvarna News

ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ಇಲ್ಲ: ಹೈಕೋರ್ಟ್‌

ಸಂವಿಧಾನದಲ್ಲೇ ವಿನಾಯಿತಿ ಇದೆ, ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ವಿಧಿಸಬಾರದು, ಗಣಿ, ಭೂವಿಜ್ಞಾನ ಇಲಾಖೆ ವಸತಿ ಗೃಹಕ್ಕೆ ಮಂಗಳೂರು ಪಾಲಿಕೆ ನೀಡಿದ್ದ 2 ನೋಟಿಸ್‌ಗಳು ರದ್ದು. 

No Property Tax on Central Government Buildings Says High Court of Karnataka grg
Author
First Published Jan 24, 2023, 2:35 PM IST

ಬೆಂಗಳೂರು(ಜ.24): ಕೇಂದ್ರ ಸರ್ಕಾರದ ಒಡೆತನದ ಆಸ್ತಿಗೆ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಮಂಗಳೂರು ನಗರದಲ್ಲಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಸಿಬ್ಬಂದಿ ವಸತಿ ಗೃಹಕ್ಕೆ ಆಸ್ತಿ ತೆರಿಗೆ ಪಾವತಿಸಲು ಸೂಚಿಸಿ ನಗರ ಪಾಲಿಕೆ ನೀಡಿದ್ದ ಎರಡು ನೋಟಿಸ್‌ಗಳನ್ನು ರದ್ದುಪಡಿಸಿದೆ. ಮಂಗಳೂರು ನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ 2010ರ ಜೂ.4ರಂದು ಮತ್ತು 2011ರ ಜು.16ರಂದು ಜಾರಿ ಮಾಡಿದ್ದ ನೋಟಿಸ್‌ ರದ್ದು ಕೋರಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಪಾಲಿಕೆಯು 1991ರ ಏ.26ರಂದು ಕೇಂದ್ರ ಸರ್ಕಾರಕ್ಕೆ ನಕ್ಷೆ ಮಂಜೂರಾತಿ ನೀಡಿದ ನಂತರ ನಿರ್ಮಿಸಿದ ಕಟ್ಟಡಕ್ಕೆ 1994ರ ಜೂ.10ರಂದು ಸ್ವಾಧೀನಾನುಭವ ಪತ್ರವನ್ನು ಪಾಲಿಕೆ ನೀಡಿದೆ. ಸಂವಿಧಾನದ ಪರಿಚ್ಛೇದ 285 ಪ್ರಕಾರ ಕೇಂದ್ರ ಸರ್ಕಾರದ ಆಸ್ತಿಗೆ ರಾಜ್ಯಕ್ಕೆ ತೆರಿಗೆ ಪಾವತಿಸುವುದರಿಂದ ವಿನಾಯ್ತಿಯಿದೆ. ಅದರಂತೆ ಕೇಂದ್ರ ಸರ್ಕಾರದ ಆಸ್ತಿಗೆ ರಾಜ್ಯ ಸರ್ಕಾರ ಅಥವಾ ಅದರ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಶಿಕ್ಷೆ ಕಡಿತ ಅಧಿಕಾರ ಪೋಕ್ಸೋ ನ್ಯಾಯಾಲಯಕ್ಕಿಲ್ಲ: ಹೈಕೋರ್ಟ್‌ ಆದೇಶ

ಅಲ್ಲದೆ, ಕೇಂದ್ರ ಸರ್ಕಾರದ ಗಣಿ ಮತ್ತು ಕರಾವಳಿ ಸರ್ವೇ (ಮಂಗಳೂರು) ವಲಯದ ಉಪ ಪ್ರಧಾನ ನಿರ್ದೇಶಕರು ತಮ್ಮ ಒಡೆತನದಲ್ಲಿ ಇರುವ ಸಿಬ್ಬಂದಿ ವಸತಿ ಗೃಹಕ್ಕೆ ಸಂಬಂಧಿಸಿದಂತೆ 1994-95ರಿಂದ 2008ರವರೆಗಿನ ಅಂದರೆ ಒಟ್ಟು 13 ವರ್ಷಗಳಿಗೆ 2007 ಮತ್ತು 2008ರಲ್ಲಿ ಮೂರು ಬಾರಿ ಪ್ರತ್ಯೇಕವಾಗಿ ಒಟ್ಟು 4,42,675 ರು. ಅನ್ನು ಪಾಲಿಕೆಗೆ ಪಾವತಿದ್ದಾರೆ. ತಿಳಿವಳಿಕೆಯಿಲ್ಲದೆ ಪಾವತಿಸಿರುವ ಆ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಕಲ್ಪಿಸಿರುವ ನಾಗರಿಕ ಸೌಲಭ್ಯಗಳಿಗೆ ಪ್ರತಿಯಾಗಿ ಪಾವತಿಸಬೇಕಿರುವ ಸೇವಾ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ನಗರ ಪಾಲಿಕೆಗೆ ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.

Follow Us:
Download App:
  • android
  • ios