ಬೆಂಗಳೂರು :  ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುವಂತೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳಿವೆ. ಈ ಪೈಕಿ ಕನಿಷ್ಠ ಐದು ಸಾವಿರ ರು. ವೇತನ ಹೆಚ್ಚಿಸಬೇಕೆಂಬ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 

ಇದರ ಜತೆಗೆ ಖಾಲಿ ಇರುವ ಎಲ್ಲ ಉಪನ್ಯಾಸಕ, ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಒಪ್ಪಿದ್ದಾರೆ. ಅಂತೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಹೆಚ್ಚಿನ ಅನುದಾನ ಕೋರಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಬೆಂಗಳೂರು ಉತ್ತರ ವಿವಿಗೆ 64 ಕೋಟಿ ರು. ಅನುದಾನ ಕೇಳಿದ್ದೇವೆ. ಯಾವ ವಿವಿಗೆ ಏನೇನು ಬೇಕು ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅಂತೆಯೆ ಕೆಲ ಕೋರ್ಸ್‌ಗಳ ಬದಲಾವಣೆ ಬಗ್ಗೆಯೂ ಸಿಎಂ ಜತೆಗೆ ಚರ್ಚಿಸಲಾಗಿದೆ ಎಂದರು.

ವಿಟಿಯು ರಿಜಿಸ್ಟ್ರಾರ್‌ ಜಗನ್ನಾಥ ರೆಡ್ಡಿ ಅಕ್ರಮ ಪ್ರಕರಣ ತಮ್ಮ ಗಮನಕ್ಕೆ ಬಂದಿದೆ. ಅವರ ವಿರುದ್ಧ ಬೇನಾಮಿ ಅರ್ಜಿ ಬಂದಿದ್ದು, ರಾಜ್ಯಪಾಲರಿಗೂ ಹೋಗಿದೆ. ರಾಜ್ಯಪಾಲರು ಕೆಲ ದಿನಗಳ ಹಿಂದೆಯಷ್ಟೇ ಪ್ರಕರಣದ ತನಿಖೆಗೆ ಸಮಿತಿ ರಚಿಸಿದ್ದಾರೆ. ಈ ಸಮಿತಿ ವರದಿ ಆಧರಿಸಿ ರಿಜಿಸ್ಟ್ರಾರ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಬೆಂಗಳೂರು ವಿವಿ ರಿಜಿಸ್ಟ್ರಾರ್‌ ವಿರುದ್ಧವೂ ಅಕ್ರಮದ ದೂರು ಬಂದಿದ್ದು, ಈ ಸಂಬಂಧ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.