ಗೃಹ ಜ್ಯೋತಿ ಯೋಜನೆಯ ದುರುಪಯೋಗ ತಡೆಯಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ವಾಣಿಜ್ಯ ಬಳಕೆ ಮತ್ತು ಹೊರ ರಾಜ್ಯದ ಅನರ್ಹ ಫಲಾನುಭವಿಗಳನ್ನು ಕೈಬಿಡಲು ಆಧಾರ್ ಮತ್ತು ಇ-ಕೆವೈಸಿ ಮೂಲಕ ಮರುಪರಿಶೀಲನೆ ನಡೆಸಲು ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಐದು ಮುಖ್ಯ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಈಗ ಸರ್ಕಾರ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಈಗಾಗಲೇ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಅನರ್ಹರನ್ನು ಗುರುತಿಸಿ ಕೈಬಿಡುವ ಪ್ರಕ್ರಿಯೆ ಚಾಲನೆಯಲ್ಲಿರುವ ಬೆನ್ನಲ್ಲೇ, ಈಗ ಗೃಹ ಜ್ಯೋತಿ ಯೋಜನೆಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಇಂಧನ ಇಲಾಖೆ ಸಜ್ಜಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 1 ಕೋಟಿ 70 ಲಕ್ಷ ಫಲಾನುಭವಿಗಳು ಈ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ವ್ಯಾಪಕ ದುರುಪಯೋಗ ಮತ್ತು ನಿಯಮ ಉಲ್ಲಂಘನೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅನರ್ಹರನ್ನು ಪಟ್ಟಿಯಿಂದ ಹೊರಹಾಕಲು ಹೊಸ ಮಾರ್ಗಸೂಚಿ ಸಿದ್ಧವಾಗುತ್ತಿದೆ.
ಪರಿಷ್ಕರಣೆಗೆ ಕಾರಣವಾದ ಪ್ರಮುಖ ಅಂಶಗಳು:
1. ವಾಣಿಜ್ಯ (ಕಮರ್ಷಿಯಲ್) ಬಳಕೆಗೆ ತಡೆ:
ಗೃಹ ಜ್ಯೋತಿ ಯೋಜನೆಯು ಕೇವಲ ಗೃಹಬಳಕೆಗೆ ಮಾತ್ರ ಸೀಮಿತವಾಗಿದೆ. ಆದರೆ, ಅನೇಕರು ವಾಸದ ಮನೆಗಳ ಹೆಸರಿನಲ್ಲಿ ಉಚಿತ ವಿದ್ಯುತ್ ಸಂಪರ್ಕ ಪಡೆದು, ಅದನ್ನು ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ಇತರ ಕಮರ್ಷಿಯಲ್ ಉದ್ದೇಶಗಳಿಗೆ ಅಕ್ರಮವಾಗಿ ಬಳಸುತ್ತಿರುವುದು ವರದಿಯಾಗಿದೆ. ಇಂತಹ ವಾಣಿಜ್ಯ ಉದ್ದೇಶದ ಬಳಕೆದಾರರನ್ನು ಪತ್ತೆಹಚ್ಚಿ, ಅವರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯಕ್ಕೆ ತಕ್ಷಣವೇ ‘ಕೋಕ್’ ನೀಡಲು ಸರ್ಕಾರ ನಿರ್ಧರಿಸಿದೆ.
2. ಹೊರ ರಾಜ್ಯದ ಫಲಾನುಭವಿಗಳಿಗೆ ಶಾಕ್:
ಕರ್ನಾಟಕದ ಮೂಲ ನಿವಾಸಿಗಳ ಹೆಸರಿನಲ್ಲಿ ಹೊರ ರಾಜ್ಯದ ಅನೇಕರು ಇಲ್ಲಿ ಅಕ್ರಮವಾಗಿ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿರುವುದು ಸರ್ಕಾರದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಅನ್ಯರಾಜ್ಯದವರಿಗೆ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಅಕ್ರಮ ತಡೆಗೆ ಸರ್ಕಾರದ ತ್ರಿವಳಿ ಅಸ್ತ್ರ:
ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಮತ್ತು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಇದರ ಲಾಭ ಸಿಗುವಂತೆ ಮಾಡಲು ಇಲಾಖೆಯು ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ:
ಸ್ಮಾರ್ಟ್ ಕಾರ್ಡ್ ವ್ಯವಸ್ಥೆ: ಅನ್ಯರಾಜ್ಯದವರು ಮತ್ತು ಅನರ್ಹರು ಅಕ್ರಮವಾಗಿ ಈ ಯೋಜನೆ ಪಡೆಯುವುದನ್ನು ತಡೆಯಲು ಭವಿಷ್ಯದಲ್ಲಿ ಫಲಾನುಭವಿಗಳಿಗೆ ‘ಸ್ಮಾರ್ಟ್ ಕಾರ್ಡ್’ ವಿತರಿಸುವ ಆಲೋಚನೆ ಸರ್ಕಾರದ ಮುಂದಿದೆ.
ಆಧಾರ್ ಮತ್ತು ಇ-ಕೆವೈಸಿ (e-KYC) ಲಿಂಕ್: ಪ್ರತಿಯೊಬ್ಬ ಗ್ರಾಹಕನ ಆಧಾರ್ ಕಾರ್ಡ್, ಇ-ಕೆವೈಸಿ ಮತ್ತು ಮೊಬೈಲ್ ಸಂಖ್ಯೆಯನ್ನು ವಿದ್ಯುತ್ ಸಂಪರ್ಕದ (RR Number) ಜೊತೆಗೆ ಕಡ್ಡಾಯವಾಗಿ ಪುನರ್ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ರೀ-ವೆರಿಫಿಕೇಶನ್: ಸಾರ್ವಜನಿಕರು ತಮ್ಮ ದಾಖಲೆಗಳನ್ನು ಮತ್ತೊಮ್ಮೆ ನವೀಕರಿಸಲು ಮತ್ತು ಪರಿಶೀಲಿಸಿಕೊಳ್ಳಲು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ‘ರೀ-ವೆರಿಫಿಕೇಶನ್’ (Re-verification) ಲಿಂಕ್ ಅನ್ನು ಸಕ್ರಿಯಗೊಳಿಸುವ ಸಾಧ್ಯತೆ ಹೆಚ್ಚಿದೆ.
ಇಂದು ಅಥವಾ ನಾಳೆ ಅಧಿಕೃತ ಆದೇಶ ಪ್ರಕಟ?
ಬೆಸ್ಕಾಂ (BESCOM) ಉನ್ನತ ಅಧಿಕೃತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಗೃಹ ಜ್ಯೋತಿ ಯೋಜನೆಯ ಈ ಮಹತ್ವದ ಪರಿಷ್ಕರಣೆ ಹಾಗೂ ಇಲಾಖೆಗೆ ನೀಡಬೇಕಾದ ನಿಖರ ಮಾರ್ಗಸೂಚಿಗಳ (ಮಾನದಂಡಗಳು) ಕುರಿತಾದ ಅಧಿಕೃತ ಸರ್ಕಾರಿ ಆದೇಶವು ಇಂದು ಅಥವಾ ನಾಳೆಯೇ ಹೊರಬೀಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಸರ್ಕಾರದ ಖಜಾನೆಯ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ನಿಜವಾದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮಾತ್ರ ಯೋಜನೆಯ ಲಾಭ ತಲುಪಿಸಲು ಸರ್ಕಾರ ಈಗ ಕಠಿಣ ನಿಲುವನ್ನು ತಳೆದಿರುವುದು ಸ್ಪಷ್ಟವಾಗಿದೆ.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ವಿಫಲ?
ಗ್ಯಾರೆಂಟಿ ಯೋಜನೆಗಳನ್ನ ಮೇಲ್ವಿಚಾರಣೆ ಮಾಡಲು 4580 ಜನರ ನೇಮಕ ಮಾಡಲು ಮುಂದಾಗಿದೆ. ಸರ್ಕಾರದಿಂದ ಪ್ರತಿ ತಿಂಗಳು ಕೋಟಿ ಕೋಟಿ ಹಣ. ರಾಜ್ಯದಲ್ಲಿ 1 ಅಧ್ಯಕ್ಷ, 5 ಜನ ಉಪಾಧ್ಯಕ್ಷ, 31 ಜನ ಜಿಲ್ಲಾಧ್ಯಕ್ಷ, 240 ಜನ ತಾಲ್ಲೂಕಾಧ್ಯಕ್ಷರು, 164 ಜಿಲ್ಲಾ ಉಪಾಧ್ಯಕ್ಷರು, 3360 ಜನ ತಾಲ್ಲೂಕು ಕಮಿಟಿ ಸದಸ್ಯರು ಸೇರಿ ಒಟ್ಟು 4580 ಜನ. ಇವ್ರಿಗೆ ಪ್ರತಿ ತಿಂಗಳು ಗೌರವಧನ 1,94,33,400 ರೂಪಾಯಿ ಖರ್ಚು. ವಾರ್ಷಿಕ 23,32,00,800 ರೂಪಾಯಿ. ಜಿಲ್ಲಾಧ್ಯಕ್ಷರಿಗೆ ತಿಂಗಳಿಗೆ 40 ಸಾವಿರ ಗೌರವಧನ ನೀಡಲು ಮುಂದಾಗಿದೆ.


