ಮನೆ ಬಾಗಿಲಿಗೆ ಡಾಕ್ಟರ್‌: ಗೃಹ ಆರೋಗ್ಯ ಯೋಜನೆ 8 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ, ಸಚಿವ ಗುಂಡೂರಾವ್‌

ಗೃಹ ಆರೋಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಲ್ಲ ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಿಸಲಾಗುವುದು: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ 
 

Gruha Health Scheme will be Implementation in 8 Districts of Karnataka Says Dinesh Gundu Rao grg

ಬೆಳಗಾವಿ(ಅ.05):  ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬೆಳಗಾವಿ ವಿಭಾಗದಲ್ಲಿ ಬೆಳಗಾವಿ ಮತ್ತು ಗದಗ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಸುವರ್ಣವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗೃಹ ಆರೋಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಲ್ಲ ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

ರೈತರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

ಪ್ರತಿಯೊಬ್ಬರ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ. ವೈದ್ಯರ ತಂಡವು ಮನೆ ಮನೆಗೆ ಭೇಟಿ ಮಾಡಿ ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧ ಒದಗಿಸಲಿದೆ. ಯಾವುದೇ ಒಂದು ರೋಗ ಕಾಣಿಸಿಕೊಂಡ ನಂತರ, ಚಿಕಿತ್ಸೆ ನೀಡುವುದರ ಬದಲಿಗೆ ಯಾವುದೇ ರೋಗ ಕಾಣಿಸಿಕೊಳ್ಳುವ ಪ್ರಾರಂಭದ ಅವಧಿಯಲ್ಲಿಯೇ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಉದ್ದೇಶಿತ ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಸಿಬ್ಬಂದಿ ಪ್ರತಿದಿನ ಜನರ ಮನೆ ಬಾಗಿಲಿಗೆ ತೆರಳಲಿದ್ದಾರೆ. ಆಗ ಕುಟುಂಬದ ಸದಸ್ಯರನ್ನು ತಪಾಸಣೆಗೆ ಒಳಪಡಿಸಲಿದ್ದಾರೆ. ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್‌) ಸೇರಿ ಸಣ್ಣಪುಟ್ಟ ಕಾಯಿಲೆಗೆ ಸ್ಥಳದಲ್ಲಿಯೇ ಔಷಧ ನೀಡಲಾಗುತ್ತದೆ ಎಂದರು.

ಗಂಭೀರ ಕಾಯಿಲೆಗಳ ಪತ್ತೆಗೆ ಕ್ರಮ:

ಇನ್ನು ಮನೆ ಬಾಗಿಲಿಗೆ ಹೋಗುವ ಆರೋಗ್ಯ ಸಿಬ್ಬಂದಿ ಹ್ಯಾಂಡ್‌ ಎಕ್ಸ್‌ರೇ ಹಿಡಿದು ಹೋಗುತ್ತಾರೆ. ಈ ವೇಳೆ ಗಂಭೀರ ರೋಗದ ಮುನ್ಸೂಚನೆ ಕಂಡುಬಂದಲ್ಲಿ ಹ್ಯಾಂಡ್‌ ಎಕ್ಸ್‌ರೇ ಮಾಡುತ್ತಾರೆ. ಈ ವೇಳೆ ಗಂಭೀರ ಕಾಯಿಲೆ ಇರುವುದು ಪತ್ತೆಯಾದಲ್ಲಿ ಕೂಡಲೇ ಅವರನ್ನು ಹೆಚ್ಚುವರಿ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ. ಈ ಮೂಲಕ ಜನಸಾಮಾನ್ಯರು ಗಂಭೀರ ರೋಗಕ್ಕೆ ಒಳಗಾಗಿ ಪ್ರಾಣಹಾನಿಗೆ ಒಳಗಾಗುವುದನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ. ಹೆಚ್ಚು ರೋಗಗಳು ಬರದಂತೆ ನಿಯಂತ್ರಿಸುವುದಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಅದರಂತೆ ಆಶಾಕಿರಣ ಯೋಜನೆಯಡಿ ಪ್ರಾಯೋಗಿಕ ಅನುಷ್ಠಾನಕ್ಕೆ ಬೆಳಗಾವಿ ವಿಭಾಗದಲ್ಲಿ ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ಆಯ್ಕೆ ಮಾಡಲಾಗಿದೆ. ಎಲ್ಲ ಮನೆಗಳಿಗೆ ವೈದ್ಯರ ತಂಡ ಭೇಟಿ ನೀಡಿ ಕಣ್ಣಿನ ತಪಾಸಣೆ ನಡೆಸಲಿದೆ. ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು ಎಂದ ಅವರು, ಚಿಕ್ಕೋಡಿ ಆಸ್ಪತ್ರೆಗೆ ಎಂಆರ್‌ಐ ಸೌಲಭ್ಯವನ್ನು ನೀಡಲಾಗುವುದು. ಅದರಂತೆ ರಾಜ್ಯದ 14 ಕಡೆಗಳಲ್ಲಿ ಎಂಆರ್‌ಐ ಬಾಕಿ ಇದೆ. ಎಲ್ಲ ಕಡೆಗಳಲ್ಲಿಯೂ ಎಂಆರ್‌ಐ ಸೌಲಭ್ಯಕಲ್ಪಿಸಲಾಗುವುದು ಎಂದು ಹೇಳಿದರು. ಆರೋಗ್ಯಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೇ ಸಿಬ್ಬಂದಿ ಕೊರತೆ ನಿಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Latest Videos
Follow Us:
Download App:
  • android
  • ios