ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ನ.16]: ಮುಂಗಾರು ಆರಂಭಕ್ಕೂ ಮುನ್ನ (ಜೂನ್‌) ರಾಜ್ಯದ 176 ತಾಲೂಕುಗಳ ಪೈಕಿ 158 (ಶೇ.89ರಷ್ಟು)ರಲ್ಲಿ ಅಂತರ್ಜಲ ಮಟ್ಟಕುಸಿದಿತ್ತು. ಪ್ರಸಕ್ತ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಸುರಿದ ಒಟ್ಟಾರೆ ಮಳೆಯಿಂದ 69 (ಶೇ.39ರಷ್ಟು) ತಾಲೂಕುಗಳಲ್ಲಿ ಅಂತರ್ಜಲ ಮರುಪೂರಣಗೊಂಡಿದೆ.

ಕಳೆದ ಜೂನ್‌ನಿಂದ ಅಕ್ಟೋಬರ್‌ ಅಂತ್ಯದವರೆಗೆ ಸುರಿದ ಮಳೆಯಿಂದ ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳ ಪೈಕಿ ಶೇ.50ರಷ್ಟುಅಂದರೆ 87 ತಾಲೂಕುಗಳಲ್ಲಿ ಅಂತರ್ಜಲ ಮರು ಭರ್ತಿಯಾಗಿದೆ. ಇನ್ನು ಶೇ.50ರಷ್ಟುಅಂದರೆ 89 ತಾಲೂಕುಗಳಲ್ಲಿ ಅಂತರ್ಜಲ ಮಟ್ಟಕುಸಿತ ಮುಂದುವರೆದಿದೆ. ಒಂದು ವೇಳೆ ಹಿಂಗಾರು ಅವಧಿಯಲ್ಲಿ ಮುಂದಿನ 45 ದಿನದಲ್ಲಿ ಉತ್ತಮ ಮಳೆ ಸುರಿದರೆ ಇನ್ನಷ್ಟುಭಾಗದಲ್ಲಿ ಅಂತರ್ಜಲ ವೃದ್ಧಿಯಾಗುವ ಸಾಧ್ಯತೆ ಇದೆ.

10 ವರ್ಷದ ನಂತರ ತುಂಬಿ-ತುಳುಕುತ್ತಿದೆ ಪ್ರಸಿದ್ಧ ಸೂಳೆಕೆರೆ

ರಾಜ್ಯಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ಅಕ್ಟೋಬರ್‌ ಅಂತ್ಯಕ್ಕೆ ನೀಡಿರುವ ಅಂಕಿ- ಅಂಶದ ಪ್ರಕಾರ, ಜೂನ್‌ ಆರಂಭದಲ್ಲಿ ಒಟ್ಟು 158 ತಾಲೂಕುಗಳಲ್ಲಿ ಅಂತರ್ಜಲ ಮಟ್ಟಕುಸಿತ ಉಂಟಾಗಿತ್ತು. ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಾಣಲಿಲ್ಲ. ಕೇವಲ ಎರಡು ತಾಲೂಕುಗಳಲ್ಲಿ ಮಾತ್ರ ಅಂತರ್ಜಲ ವೃದ್ಧಿ ಕಂಡುಬಂದಿತ್ತು.

ಇನ್ನು ಆಗಸ್ಟ್‌ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದ ತಿಂಗಳಾಂತ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅಂತರ್ಜಲ ಚೇತರಿಕೆ ಕಂಡು ಬಂದಿತ್ತು. ಅಂತರ್ಜಲ ಕುಸಿತದ ತಾಲೂಕುಗಳ ಸಂಖ್ಯೆ 156ರಿಂದ 118ಕ್ಕೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿತದ ತಾಲೂಕುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ. ಇನ್ನು ಕಳೆದ ಅಕ್ಟೋಬರ್‌ ಆರಂಭದಲ್ಲಿ ಒಳನಾಡು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಅಂತರ್ಜಲ ಪ್ರಮಾಣ ಭಾರೀ ಪ್ರಮಾಣದ ವೃದ್ಧಿಯಾಗಿದ್ದು, ಏಕಾಏಕಿ ತಾಲೂಕುಗಳ ಸಂಖ್ಯೆ 112ರಿಂದ 89ಕ್ಕೆ ಇಳಿದಿದೆ. ಈ ಮೂಲಕ ಮಳೆಗಾಲ ಆರಂಭದಿಂದ ಅಕ್ಟೋಬರ್‌ ಅಂತ್ಯದವರೆಗೆ ಒಟ್ಟು 69 ತಾಲೂಕುಗಳಲ್ಲಿ (ಶೇ.39ರಷ್ಟು) ಅಂತರ್ಜಲ ಮರು ಪೂರಣವಾಗಿದೆ ಎಂದು ರಾಜ್ಯಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ರಾಜ್ಯದ ಅಣೆಕಟ್ಟುಗಳು 2ನೇ ಬಾರಿ ಸಂಪೂರ್ಣ ಭರ್ತಿ: ಈಗ ಹೆಚ್ಚಿದೆ ಆತಂಕ

ಯಾವ ತಾಲೂಕಲ್ಲಿ ಎಷ್ಟು ಆಳಕ್ಕೆ ನೀರು ಸಿಗುತ್ತೆ?

ರಾಜ್ಯದ 176 ತಾಲೂಕುಗಳ ಪೈಕಿ 92 ತಾಲೂಕುಗಳಲ್ಲಿ 10 ಮೀಟರ್‌ಗೆ (32 ಅಡಿ) ಕೊಳವೆ ಬಾವಿ ತೆಗೆದರೆ ಸಾಕು ನೀರು ಲಭ್ಯವಾಗಲಿದೆ. 44 ತಾಲೂಕುಗಳಲ್ಲಿ 32ರಿಂದ 65 ಅಡಿಗೆ ಅಂತರದಲ್ಲಿ ಅಂತರ್ಜಲ ಸಿಗಲಿದೆ. 18 ತಾಲೂಕುಗಳಲ್ಲಿ 65 ರಿಂದ 98 ಅಡಿ ಅಳದಲ್ಲಿ ನೀರು ದೊರೆಯಲಿದೆ. ಏಳು ತಾಲೂಕುಗಳಲ್ಲಿ 98ರಿಂದ 131 ಅಡಿ ಅಳಕ್ಕೆ ನೀರು ಕುಸಿದಿದೆ. ನಾಲ್ಕು ತಾಲೂಕುಗಳಲ್ಲಿ 131 ಅಡಿಯಿಂದ 164 ಅಡಿಗೆ ಕುಸಿದಿದೆ. ಮೂರು ತಾಲೂಕುಗಳಲ್ಲಿ 164 ಅಡಿಯಿಂದ 197 ಅಡಿಗೆ ಇಳಿದಿದೆ. ಎಂಟು ತಾಲೂಕುಗಳಲ್ಲಿ 197 ಅಡಿಗಿಂತ ಕೆಳಭಾಗಕ್ಕೆ ಅಂತರ್ಜಲ ಕುಸಿದಿದೆ ಎಂದು ರಾಜ್ಯಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ತಿಳಿಸಿದೆ.

ಚೇತರಿಕೆ ಕಾಣದ 11 ತಾಲೂಕು

ಚಿಕ್ಕಬಳ್ಳಾಪುರದ ಎರಡು ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಹಾಗೂ ಕೋಲಾರ ಐದು ತಾಲೂಕುಗಳಲ್ಲಿ ಅಂತರ್ಜಲ ಮಟ್ಟಗಮನಾರ್ಹವಾಗಿ ಮರುಪೂರಣಗೊಂಡಿಲ್ಲ. ಹೊಸಹೋಟೆ, ಗೌರಿಬಿದನೂರು, ಬಾಗೇಪಲ್ಲಿ, ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ197 ಅಡಿಗಿಂತ ಕೆಳ ಭಾಗಕ್ಕೆ ಕುಸಿದಿದೆ. ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರದಲ್ಲಿ 164ರಿಂದ 197 ಅಡಿ ಅಳಕ್ಕೆ ನೀರಿನ ಮಟ್ಟಕುಸಿದಿದೆ. ಗುಡಿಬಂಡೆ ತಾಲೂಕಿನಲ್ಲಿ ಮಾತ್ರ ಅಂತರ್ಜಲಮಟ್ಟಸುಸ್ಥಿತಿಯಲ್ಲಿದ್ದು, 32 ರಿಂದ 65 ಅಡಿ ಅಳದಲ್ಲಿ ನೀರು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ.

ಮಳೆ ಇಳಿಕೆ, ನೆರೆ ಏರಿಕೆ! ಇದು ಮಹಾರಾಷ್ಟ್ರ ಎಫೆಕ್ಟ್

27 ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಹಾಗೂ ರಾಜ್ಯ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ 2008ರಿಂದ 2018ರ 10 ವರ್ಷದ ಅಂಕಿ ಅಂಶಗಳ ಹೋಲಿಕೆ ಮಾಡಿ ನೀಡಿದ ಮಾಹಿತಿ ಪ್ರಕಾರ 27 ತಾಲೂಕುಗಳಲ್ಲಿ ಪ್ರಸಕ್ತ ವರ್ಷ 13 ಅಡಿ ಅಂತರ್ಜಲದ ಮಟ್ಟವೃದ್ಧಿಯಾಗಿದೆ. 19 ತಾಲೂಕುಗಳಲ್ಲಿ 6 ರಿಂದ 13 ಅಡಿ, 41 ತಾಲೂಕುಗಳಲ್ಲಿ 6 ರಿಂದ 0, 31 ತಾಲೂಕುಗಳಲ್ಲಿ -6 ರಿಂದ 0 ಅಡಿಗೆ ಚೇರಿಕೆಯಾಗಿದೆ. 16 ತಾಲೂಕುಗಳಲ್ಲಿ -13 ರಿಂದ -6 ಅಡಿಗೆ ಏರಿಕೆಯಾಗಿದೆ. 42 ತಾಲೂಕುಗಳಲ್ಲಿ 13 ಅಡಿಗಿಂತ ಕೆಳ ಭಾಗಕ್ಕೆ ಕುಸಿತವಾಗಿದೆ ಎಂದು ತಿಳಿಸಿದೆ.