ಬೆಂಗಳೂರು(ಮೇ.21): ಅಗತ್ಯ ವಸ್ತುಗಳಾದ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ಜನರಿಗೆ ಇದೀಗ ಬೆಲೆ ಏರಿಕೆ ಹೊರೆಗಾಗಿ ಪರಿಣಮಿಸಿದೆ.

ಲಾಕ್‌ಡೌನ್‌ ನೆಪವಾಗಿಸಿ ಕೊಂಡಿದ್ದ ಚಿಲ್ಲರೆ ಮಾರುಕಟ್ಟೆಯ ದಿನಸಿ ವ್ಯಾಪಾರಿಗಳು ಶೇಕಡ 20ರಿಂದ 30ರಷ್ಟುಬೇಳೆ-ಕಾಳು, ಅಕ್ಕಿ ಸೇರಿದಂತೆ ವಿವಿಧ ಪದಾರ್ಥಗಳ ಬೆಲೆ ಹೆಚ್ಚಿಸಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗಿದೆ. ವಿವಿಧ ಅಡುಗೆ ಎಣ್ಣೆ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ದಿನಸಿ ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಲಾಕ್‌ಡೌನ್‌ ಎಫೆಕ್ಟ್‌: ಅರಬಾವಿ ಕ್ಷೇತ್ರದ 76 ಸಾವಿರ ಕುಟುಂಬಕ್ಕೆ ದಿನಸಿ ಕಿಟ್‌

ಎಪಿಎಂಸಿಯ ಸಗಟು ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಹೆಚ್ಚಾಗಿಲ್ಲ. ವಿವಿಧ ಸಾಂಬಾರ್‌ ಬೇಳೆ ಕೆ.ಜಿ. ರೂ. 42-86, ಹೆಸರುಕಾಳು ಕೆ.ಜಿ. ರೂ. 110-115, ಉದ್ದಿನಬೇಳೆ ಕೆ.ಜಿ. ರೂ. 120ಕ್ಕೆ ಮಾರಾಟವಾಗುತ್ತಿದೆ. ಪಾಮಾಯಿಲ್‌ (ರುಚಿ ಗೋಲ್ಡ್‌) ಕೆ.ಜಿ. ರೂ. 100ರಿಂದ 75ಕ್ಕೆ ಕಡಿಮೆಯಾಗಿದೆ. ಸೂರ್ಯಕಾಂತಿ ಎಣ್ಣೆ ಕೆ.ಜಿ. ರೂ. 105ರಿಂದ ರೂ. 98ಕ್ಕೆ ಇಳಿಕೆಯಾಗಿದೆ. ಕಡಲೆಕಾಯಿ ಎಣ್ಣೆ ರೂ. 120ರಿಂದ ರೂ. 105ಕ್ಕೆ ಇಳಿಕೆ, ಎಳ್ಳೆಣ್ಣೆ ರೂ. 100 ಇದ್ದ ಬೆಲೆ ರೂ. 86ಕ್ಕೆ ಕುಸಿತವಾಗಿದೆ. ಸ್ಟೀಂ ಅಕ್ಕಿ, ಸೋನಾ ಮಸೂರಿ ರೂ. 1200-1250 ಇದ್ದ ಬೆಲೆ ರೂ. 1350 ರವರೆಗೆ ಹೆಚ್ಚಾಗಿದೆ. ವಿವಿಧ ಅಕ್ಕಿ ಬೆಲೆಯಲ್ಲಿ 25 ಕೆ.ಜಿ. ಮೂಟೆಗೆರೂ. 70-80 ರಷ್ಟುಹೆಚ್ಚಳವಾಗಿದೆ. ಬಾಸುಮತಿ ಅಕ್ಕಿ ಪೂರೈಕೆ ಕೊರತೆ ಇರುವುದರಿಂದ ಬೆಲೆ ಏರಿಕೆಯ ಹಾದಿ ಹಿಡಿದಿದ್ದು, ಈ ಹಿಂದೆ ಕೆ.ಜಿ. ರೂ. 120 ಇದ್ದದ್ದು, ಈಗ ರೂ. 140ರಿಂದ ರೂ. 150ಕ್ಕೆ ಹೆಚ್ಚಳ ಕಂಡಿದೆ ಎಂದು ಎಪಿಎಂಸಿಯ ಪರಮೇಶ್‌ ಅವರು ಮಾಹಿತಿ ನೀಡಿದರು.

ಅಂಗಡಿಗಳಿಗೆ ಅಕ್ಕಿ, ಬೇಳೆ, ಬಿಸ್ಕತ್‌ ಪೂರೈಕೆ ಕೊರತೆ!

ಇನ್ನು ಸಗಟು ಮಾರುಕಟ್ಟೆಯಲ್ಲಿ ಕಡಲೆಬೇಳೆ ಕೆ.ಜಿ. ರೂ. 80, ಕಡಲೆಕಾಳು ಕೆ.ಜಿ. ರೂ. 80, ಹೆಸರು ಕಾಳು ಕೆ.ಜಿ. ರೂ. 100, ಹೆಸರು ಬೇಳೆ ಕೆ.ಜಿ. ರೂ. 140, ತೊಗರಿ ಬೇಳೆ ಕೆ.ಜಿ. ರೂ. 110, ಮೈಸೂರು ಬೇಳೆ ಕೆ.ಜಿ. ರೂ. 110, ಶೇಂಗಾ ಕೆ.ಜಿ. ರೂ. 120, ಹುರಿಗಡಲೆ ಕೆ.ಜಿ. ರೂ. 90, ಉದ್ದಿನ ಬೇಳೆ ಕೆ.ಜಿ. ರೂ. 140, ಅಲಸಂದೆ ರೂ. 80-100ಕ್ಕೆ ಮಾರಾಟ ಮಾಡಲಾಗುತ್ತಿದೆ. ವಿವಿಧ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.10ರಿಂದ 20ರಷ್ಟುಬೆಲೆ ಏರಿಕೆಯಾಗಿದೆ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ಹೇಳಿದರು.