ಉತ್ತರ ಭಾರತದಲ್ಲಿ ಇರುವಂತೆ ಕರ್ನಾಟಕದಲ್ಲೂ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆ: ಸೋಮಣ್ಣ
ಹಾಸನ, ತಿಪಟೂರು, ಹುಳಿಯಾರು, ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣವಾಗಲಿದೆ. ತುಮಕೂರು ಜಿಲ್ಲೆಯಲ್ಲಿ 40 ಕಿ.ಮೀ.ನಲ್ಲಿ ಹಾದು ಹೋಗಲಿದೆ. 500 ಕೋಟಿ ರೂ. ವೆಚ್ಚದಲ್ಲಿ ಪುಣೆ-ಬೆಂಗಳೂರು 500 ಕಿ.ಮೀ. ವ್ಯಾಪ್ತಿಯಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಆಗಲಿದೆ ಎಂದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ
ತುಮಕೂರು(ಡಿ.24): ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ 4500 ಕೋಟಿ ರು. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭವಿಷ್ಯದಲ್ಲಿ ಗ್ರೀನ್ ಫೀಲ್ಡ್ ಕರ್ನಾಟಕದ ದೊಡ್ಡ ಯೋಜನೆಯಾಗಲಿದೆ ಎಂದು ಹೇಳಿದರು.
ಹಾಸನ, ತಿಪಟೂರು, ಹುಳಿಯಾರು, ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣವಾಗಲಿದೆ. ತುಮಕೂರು ಜಿಲ್ಲೆಯಲ್ಲಿ 40 ಕಿ.ಮೀ.ನಲ್ಲಿ ಹಾದು ಹೋಗಲಿದೆ. 500 ಕೋಟಿ ರೂ. ವೆಚ್ಚದಲ್ಲಿ ಪುಣೆ-ಬೆಂಗಳೂರು 500 ಕಿ.ಮೀ. ವ್ಯಾಪ್ತಿಯಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಆಗಲಿದೆ ಎಂದರು.
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಆರಂಭಿಸಲು ಸಂಸದ ಸುನೀಲ್ ಬೋಸ್ ಮನವಿ
ರಾಜ್ಯದಲ್ಲಿ ಒಟ್ಟು 5072 ಕೋಟಿ ರೂ. ರೈಲ್ವೆ ಯೋಜನೆಗೆ ಅನುದಾನ ತಂದಿದ್ದೇನೆ. ಈಗಾಗಲೇ 17 ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದು, ಅಲ್ಲಿ ಆಗಬೇಕಾಗಿರುವ ರೈಲ್ವೆ ಯೋಜನೆಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದರು. ತುಮಕೂರು-ರಾಮದುರ್ಗ ಮಾರ್ಗದಲ್ಲಿ 2500 ಕೋಟಿ ವೆಚ್ಚದಲ್ಲಿ 2ನೇ ಹಂತದ ಕೆಲಸಗಳು ಆರಂಭವಾಗಿವೆ. ಶೇ. 90 ರಷ್ಟು ಭೂ ಹಸ್ತಾಂತರ ಕಾರ್ಯ ಮುಗಿದಿದೆ. 2027ರ ಡಿಸೆಂಬರ್‌ಗೆ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸಿ.ಟಿ. ರವಿ ಪ್ರಕರಣ: ಸಭಾಪತಿ ತೀರ್ಮಾನ
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬುದ್ಧಿವಂತ ರಾಜಕಾರಣಿ. ಅವರು ಆ ರೀತಿ ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಿ.ಟಿ. ರವಿ ಏನು ಮಾತನಾಡಿದ್ದಾರೆ, ಏನು ಮಾತನಾಡಿಲ್ಲ ಎನ್ನುವುದರ ಬಗ್ಗೆ ತೀರ್ಮಾನ ಮಾಡೋರು ಪರಿಷತ್ ಸಭಾಪತಿಗಳು. ವಿಧಾನ ಪರಿಷತ್‌ನಲ್ಲಿ ಸಭಾಪತಿಗಳು ಎಷ್ಟು ಕಸ್ಟಡಿಯನ್ನೋ ಅದೇ ರೀತಿ ಲೋಕಸಭೆಯಲ್ಲಿ ನಮ್ಮ ಸ್ಪೀಕರ್ ಸಹ ಅಷ್ಟೇ ಕಸ್ಟೋಡಿಯನ್. ಹಾಗಾಗಿ ಸಭಾಪತಿಗಳೇ ತೀರ್ಮಾನ ಮಾಡುತ್ತಾರೆ ಎಂದರು.
ಸಿ.ಟಿ. ರವಿ ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬುದನ್ನು ಓದಿದ್ದೇನೆ. ಆದರೆ ರವಿ ಅವರನ್ನು ಇಡೀ ರಾತ್ರಿ ಪೊಲೀಸರು ಜೀಪಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ ಮಾನಸಿಕ ಹಿಂಸೆ ನೀಡಿರುವುದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದರು.
ನೆಲಮಂಗಲದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಬೆಂಗಳೂರು ಮತ್ತು ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವೇಳೆ ಆದಂತಹ ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೇನೆ. ಅಲ್ಲದೆ ಈ ಕುರಿತು ಸವಿಸ್ತಾರವಾಗಿ ಪತ್ರವನ್ನು ಸಹ ಬರೆದಿದ್ದೇನೆ. ಎಷ್ಟು ಕಾಮಗಾರಿ ಆಗಿವೆ ಎಂಬುದರ ಬಗ್ಗೆಯೂ ತಿಳಿಸಿದ್ದೇನೆ ಎಂದರು.
ಕಳೆದ ಮೂರು ವರ್ಷದಲ್ಲಿ ಈ ಹೆದ್ದಾರಿಯಲ್ಲಿ 256 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದುವರೆಗೂ ಎಲ್ಲಿ ಅಪಘಾತಗಳು ಆಗುತ್ತಿದ್ದವೋ ಅದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆಯೂ ಕೇಂದ್ರ ಸಚಿವರಿಗೆ ವರದಿ ನೀಡಲಾಗಿದೆ ಎಂದು ಅವರು ಹೇಳಿದರು.
ಜನವರಿ 2 ರಿಂದ ನೆಲಮಂಗಲದಿಂದ ತುಮಕೂರಿನ ಊರುಕೆರೆ ವರೆಗೆ 6 ಪಥದ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ. ಯುದ್ದೋಪಾದಿಯಲ್ಲಿ ಕಾಮಗಾರಿ ನಡೆಸಿ ಮುಂದಿನ4-5 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದೇನೆ ಎಂದರು.
ಮೂರೇ ವರ್ಷದಲ್ಲಿ ತುಮಕೂರಿನ ಚಿತ್ರಣವೇ ಬದಲು: ಕೇಂದ್ರ ಸಚಿವ ಸೋಮಣ್ಣ
ಧನ್ಯವಾದ ಅರ್ಪಿಸಿದ ಸೋಮಣ್ಣ
ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಗೆ ಕೆಐಎಡಿಬಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಈಗಾಗಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ವಿರೋಧ
ತುಮಕೂರು ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿ, ರಾಮನಗರಕ್ಕೆ ಕೊಂಡೊಯ್ಯುವ ಯೋಜನೆಗೆ ನನ್ನ ವಿರೋಧ ಇದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ರಾಮನಗರ, ಕುಣಿಗಲ್, ಕನಕಪುರಕ್ಕೆ ಮಾತ್ರ ಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಇವರು ಉಪಮುಖ್ಯಮಂತ್ರಿ. ಇದನ್ನು ಡಿ.ಕೆ. ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಸುರೇಶಗೌಡ, ಜ್ಯೋತಿ ಗಣೇಶ್, ಮಾಜಿ ಸಂಸದ ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಇತರಿದ್ದರು.