Asianet Suvarna News Asianet Suvarna News

ಸರ್ಕಾರ ಜಾತಿ​ಗ​ಣತಿ ವರ​ದಿ​ ಒಪ್ಪಲಿದೆ: ಈಶ್ವರಪ್ಪ!

ಸರ್ಕಾರ ಜಾತಿ​ಗ​ಣತಿ ವರ​ದಿ​ ಒಪ್ಪಲಿದೆ: ಈಶ್ವರಪ್ಪ| ಜಾತಿಗಣತಿ ವರದಿ ಯಥಾವತ್ತಾಗಿ ಜಾರಿ ಆಗಬೇಕು ಎಂದೇನೂ ಇಲ್ಲ| ತಿದ್ದುಪಡಿ ಮಾಡಲೂ ಅವಕಾಶವಿದೆ| ಕುರುಬರನ್ನು ಎಸ್‌ಟಿಗೆ ಸೇರಿಸಲು ಹಕ್ಕೊತ್ತಾಯ| ಇದು ರಾಜಕೀಯ ಹೋರಾಟವಲ್ಲ: ಗ್ರಾಮೀಣಾಭಿವೃದ್ಧಿ ಸಚಿವ

Govt Will accept Cast Census says Karnataka Minister KS Eshwarappa pod
Author
Bangalore, First Published Oct 6, 2020, 11:01 AM IST

 

ವಿಜಯ್‌ ಮಲಗಿಹಾಳ

ಬೆಂಗಳೂರು(ಅ.06): ರಾಜ್ಯದಲ್ಲಿ ಇದೀಗ ಹಿಂದುಳಿದ ವರ್ಗಗಳ ಸಂಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣ​ತಿ​) ವರದಿ ಬಿಡುಗಡೆಗೊಳಿಸಬೇಕು ಎಂಬ ಕೂಗು ಒಂದೆಡೆಯಾದರೆ, ಕುರುಬ ಸಮುದಾಯಕ್ಕೆ ಪರಿಶಿಷ್ಟಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕು ಎಂಬ ಒತ್ತಾಯ ಮತ್ತೊಂದೆಡೆ ಬಲವಾಗಿ ಕೇಳಿಬರತೊಡಗಿದೆ. ಇವೆರಡೂ ಒಂದಕ್ಕೊಂದು ಪೂರಕವಾಗಿ ಹಂತ ಹಂತವಾಗಿ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿವೆ.

ಖುದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರೇ ಕಳೆದ ಹಲವು ದಿನಗಳಿಂದ ಈ ಎರಡೂ ಹೋರಾಟಗಳಿಗೆ ನೇತೃತ್ವ ವಹಿಸಿಕೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ. ಹಿಂದೊಮ್ಮೆ ರಾಯಣ್ಣ ಬ್ರಿಗೇಡ್‌ ಮೂಲಕ ಸದ್ದು ಮಾಡಿದ್ದ ಈಶ್ವರಪ್ಪ ಅವರು ಇದೀಗ ಮತ್ತೆ ಹಿಂದುಳಿದ ವರ್ಗಗಳ ಹೋರಾಟಕ್ಕೆ ನಾಯಕತ್ವ ವಹಿಸಿಕೊಂಡಿರುವುದು ಸಹಜವಾಗಿಯೇ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಈ ಕುತೂಹಲದ ಬಗ್ಗೆ ಸ್ವತಃ ಈಶ್ವರಪ್ಪ ಅವರೇ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಮಾಹಿತಿ ನೀಡಿದ್ದಾರೆ.

*ರಾಜ್ಯ ರಾಜಕಾರಣದಲ್ಲಿ ಮತ್ತೆ ಹಿಂದುಳಿದ ವರ್ಗಗಳ ಜಾತಿ ಸಂಘಟನೆ ಸಂಬಂಧಪಟ್ಟಂತೆ ಹೋರಾಟ ಆರಂಭವಾಗುತ್ತಿದೆಯಲ್ಲ?

- ರಾಜಕೀಯಕ್ಕೂ ಈ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ. ಹಿಂದೂ ಸಮಾಜದಲ್ಲಿ ಪ್ರತಿ ಜಾತಿಗೂ ಕೂಡ (ಹಿಂದುಳಿದವರು, ದಲಿತರು, ಮುಂದುವರೆದ ಜನಾಂಗ ಸೇರಿ ಎಲ್ಲ ಸಮುದಾಯಗಳಿಗೆ) ಅವರದ್ದೇ ಆದ ವಿಶೇಷತೆ ಇರುತ್ತದೆ. ಆ ವಿಶೇಷತೆಯಲ್ಲಿ ಕೆಲವರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆದಿದ್ದಾರೆ. ಇನ್ನು ಕೆಲವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಗಿಲ್ಲ. ಈಗ ಎರಡು ಅಂಶಗಳ ಚರ್ಚೆಗಳಲ್ಲಿ ನಾನು ತೊಡಗಿದ್ದೇನೆ.

* ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿ ಮಂಡನೆಯಿಂದ ಏನಾಗಲಿದೆ?

- ನೋಡಿ, ಆಯೋಗ ಸಿದ್ಧಪಡಿಸಿರುವ ಸಮೀಕ್ಷೆ ಕೇವಲ ಹಿಂದುಳಿದ ವರ್ಗಕ್ಕೆ ಸೇರಿದ್ದಲ್ಲ. ಮುಂದುವರೆದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಮುಸ್ಲಿಂ, ಕ್ರಿಶ್ಚಿಯನ್‌, ಎಲ್ಲ ಹಿಂದುಳಿದ ವರ್ಗಗಳು, ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿದಂತೆ ಎಲ್ಲ ಸಮುದಾಯದವರ ಸಮೀಕ್ಷೆಯಾಗಿದೆ. ವರದಿ ಬಹಿರಂಗವಾಗಬೇಕು ಎಂಬ ಆಸೆ ಎಲ್ಲರದ್ದೂ ಇದೆ. ಬಿಜೆಪಿ ಅ​ಧಿಕಾರಕ್ಕೆ ಬಂದ ನಂತರ ಬ್ರಾಹ್ಮಣರಿಗೆ ಶೇ.10ರಷ್ಟುಮೀಸಲಾತಿ ನೀಡಲಾಗಿದೆ. ಇದು ಸರಿಯಾದ ಕ್ರಮ. ಅವರಲ್ಲೂ ಕಡು ಬಡವರಿದ್ದಾರೆ. ಹಿಂದುಳಿದ ವರ್ಗದಲ್ಲಿ ಗ್ರಾಮೀಣ ಭಾಗಗಳಿಗೆ ಹೋದರೆ ಕುಡಿಯಲು ನೀರು, ಬಟ್ಟೆ, ಶಿಕ್ಷಣ, ಉದ್ಯೋಗ ಇಲ್ಲ. ಇಂತಹ ಎಲ್ಲ ಅಂಶಗಳ ಸಾಮಾಜಿಕ ಪರಿಸ್ಥಿತಿ ಸಮೀಕ್ಷೆಯಲ್ಲಿ ಸಿಗಬಹುದಾಗಿದೆ. ರಾಜಕಾರಣ ಮೀಸಲಾತಿ ಪ್ರಮಾಣದ ಎಷ್ಟಿರಬೇಕು ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಆದ್ದರಿಂದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಲ್ಲಿಸಿರುವ ವರದಿಯನ್ನು ಶೀಘ್ರದಲ್ಲಿ ಮಂಡನೆ ಮಾಡಬೇಕು ಎಂಬ ಉದ್ದೇಶ ಎಲ್ಲರದ್ದೂ ಆಗಿದೆ.

* ಸಿದ್ದರಾಮಯ್ಯ ಅವರು ಈ ಆಯೋಗದ ವರದಿ ಸಿದ್ಧಪಡಿಸಲು ತೋರಿದ ಆಸಕ್ತಿ ನಂತರ ವರದಿ ಮಂಡಿಸಲು ತೋರಲಿಲ್ಲವೆ?

- ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಆಯೋಗದ ವರದಿ ಲಭ್ಯವಾಗಿರಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಅವ​ಧಿಯಲ್ಲಿ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಪ್ರಭಾವ ಬಳಸಿ ವರದಿಯನ್ನು ಮಂಡಿಸಬಹುದಾಗಿತ್ತು. ಆದು ಯಾವ ಕಾರಣಕ್ಕಾಗಿ ಮಾಡಲಿಲ್ಲ ಎಂಬುದು ಗೊತ್ತಿಲ್ಲ.

* ಕಳೆದೊಂದು ವರ್ಷದಿಂದ ನಿಮ್ಮದೇ ಸರ್ಕಾರವಿದೆ. ಈವರೆಗೆ ಸರ್ಕಾರದ ಮಟ್ಟದಲ್ಲಿ ಸಮೀಕ್ಷೆ ವರದಿ ಮಂಡಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದೀರಾ?

- ಈ ವಿಷಯ ಕೆಲದಿನಗಳ ಹಿಂದೆ ನನ್ನ ಬಳಿ ಬಂದಿದೆ. ಅಲ್ಲದೆ, ಸದನದಲ್ಲಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯರೇ ಮಾಡಿದ ಪ್ರಸ್ತಾಪಕ್ಕೆ ಸಚಿವ ಶ್ರೀರಾಮುಲು ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನೂ ಸದನದಲ್ಲಿ ಪ್ರಸ್ತಾಪಿಸಿದ್ದೆ. ನನ್ನ ಜೊತೆ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಮತ್ತು ಉಗ್ರಪ್ಪ ಬೆಂಬಲ ನೀಡಿದ್ದರು. ಆದಷ್ಟುಬೇಗ ಮಂಡನೆ ಮಾಡಿಸುತ್ತೇವೆ ಎಂದು ಆಗ ಸಿದ್ದರಾಮಯ್ಯ ಹೇಳಿದ್ದರು. ಅಂದಿನ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳಾಗಿದ್ದ ಎಚ್‌. ಆಂಜನೇಯ ಸಹಾ ಹೇಳಿಕೆ ನೀಡಿದ್ದರು. ಆದರೆ, ವರದಿ ಕಾರಣಾಂತರಗಳಿಂದ ಜಾರಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದು ಯಾರದ್ದೋ ಪ್ರಭಾವ ಇಲ್ಲವೇ ರಾಜಕೀಯ ಕಾರಣಗಳಿಂದ ಹೀಗಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಆಗಲಂತೂ ಆಗಿಲ್ಲ. ಈಗಾದರೂ ಜಾರಿಯಾಗಬೇಕು ಎನ್ನುವುದು ಎಲ್ಲರ ಆಪೇಕ್ಷೆ.

* ಹಿಂದಿನ ಎರಡು ಸರ್ಕಾರಗಳಲ್ಲಿ ಈ ಸಮೀಕ್ಷೆ ವರದಿಯ ಮಂಡನೆ ಮಾಡದಿರುವುದನ್ನು ನೋಡಿದರೆ ರಾಜಕೀಯ ವಲಯದಲ್ಲಿ ಹಿಂಜರಿಕೆ ಇದ್ದಂತಿದೆ?

-ಹಿಂದುಳಿದ ವರ್ಗಗಳ ಆಯೋಗದ ವರದಿಯ ಜಾರಿಯಾದಲ್ಲಿ ಕೆಲ ಸಮಾಜಕ್ಕೆ ಒಳ್ಳೆಯದಾಗಲಿದೆ. ಕೆಲವರಿಗೆ ತೊಂದರೆಯಾಗಲಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಮಂಡನೆ ನಂತರ ಸ್ಪಷ್ಟತೆ ಸಿಗಲಿದೆ. ಮಂಡನೆಯಿಂದ ಕೆಲವರಿಗೆ ಒಳ್ಳೆಯದಾಗಬಹುದು. ಕೆಲವರಿಗೆ ಕೆಟ್ಟದಾಗಬಹದು. ಪ್ರಸ್ತುತ ನಾವು ಇಷ್ಟುಲಕ್ಷ ಮಂದಿ ಇದ್ದೇವೆ ಎಂದು ನಾನಾ ಸಮುದಾಯಗಳು ಹೇಳಿಕೆ ನೀಡುತ್ತಿವೆ. ಆದರೆ, ವರದಿ ಜಾರಿಯಾದ ತಕ್ಷಣ ಎಲ್ಲ ಅಂಕಿ ಅಂಶಗಳ ಕುರಿತು ಸ್ಪಷ್ಟಮಾಹಿತಿ ಹೊರ ಬರಲಿದೆ. ಇದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದರೆ, ಕೆಲವರು ವಿರೋಧಿ​ಸುತ್ತಾರೆ. ಆದರೆ, ನಿಖರವಾದ ಮಾಹಿತಿ ಹೊರಬರಬೇಕು ಎನ್ನುವುದು ನನ್ನ ಆಸೆಯಾಗಿದೆ. ಈ ವರದಿಯನ್ನು ನಮ್ಮ ಬಿಜೆಪಿ ಸರ್ಕಾರ ಒಪ್ಪಿಕೊಳ್ಳಲಿದೆ ಎಂಬುದು ನನ್ನ ವಿಶ್ವಾಸ.

* ಹಿಂದುಳಿದ ವರ್ಗಗಳ ಆಯೋಗ ವರದಿ ಸಿದ್ಧಪಡಿಸಿರುವ ರೀತಿ ಸರಿಯಾಗಿಲ್ಲ. ಎಲ್ಲ ಕಡೆ ಸಮೀಕ್ಷೆ ನಡೆದಿಲ್ಲ ಎಂಬ ಆಕ್ಷೇಪಣೆ ಹಿಂದೆ ಬಿಜೆಪಿಯಿಂದಲೇ ಕೇಳಿಬಂದಿತ್ತು?

- ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಸ್ವತಃ ಆಯೋಗದ ಅಧ್ಯಕ್ಷರಾಗಿದ್ದ ಎಚ್‌.ಕಾಂತರಾಜ್‌ ಸಹಾ ಹಾಜರಾಗಿದ್ದರು. ಈ ವರದಿಯನ್ನು ಮಂಡನೆಯಾಗಲಿ. ಚರ್ಚೆಯಾಗಲಿ ಎಂದು ಅವರು ಹೇಳಿದ್ದಾರೆ. ಅದರಲ್ಲಿ ಯಾವುದಾದರೂ ತಿದ್ದು ಪಡಿ ಮಾಡುವುದಕ್ಕೆ ಅವಕಾಶ ಇದೆಯೇ ಎಂದು ಕೇಳಿದ್ದು, ಖಂಡಿತ ಇದೆ ಎಂದಿದ್ದಾರೆ. ಅವರ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕು ಎಂಬ ನಿಯಮ ಇಲ್ಲ. ಏಕೆಂದರೆ, ಮೊದಲನೆಯದಾಗಿ ಈ ರೀತಿಯ ಗಣತಿ ನಡೆದಿರುವುದು 1931ರಲ್ಲಿ ಅಂದಿನಿಂದ ಈವರೆಗೂ ಗಣತಿ ನಡೆದಿಲ್ಲ. ಎರಡನೇಯದಾಗಿ ಈ ರೀತಿಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕರ್ನಾಟಕವನ್ನು ಹೊರತು ಪಡಿಸಿ ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲ. ಇದಾದ ಬಳಿಕ ಬೇರೆ ರಾಜ್ಯಗಳಲ್ಲಿ ಆಗಬಹುದು.

* ಕುರುಬ ಸಮುದಾಯಕ್ಕೆ ಪರಿಶಿಷ್ಟಪಂಗಡ ಸ್ಥಾನಮಾನ ನೀಡಬೇಕು ಎಂಬ ಹೋರಾಟ ಇತ್ತೀಚೆಗೆ ಪ್ರಾರಂಭವಾಗಿದೆ. ಯಾವ ಕಾರಣಕ್ಕೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು?

- ಈ ಹೋರಾಟ ಇಂದು ನಿನ್ನೆಯದಲ್ಲ. 1935ರಿಂದ ಕೂಡ ಕುರುಬರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು ಎಂಬುದು ನಡೆಯುತ್ತಿದೆ. ಕುರುಬ ಎಂದ ತಕ್ಷಣ ನನ್ನನ್ನು, ಎಚ್‌.ವಿಶ್ವನಾಥ್‌, ಸಿದ್ದರಾಮಯ್ಯ, ಎಚ್‌.ಎಂ ರೇವಣ್ಣ, ಬಂಡೆಪ್ಪ ಕಾಶೆಂಪುರರನ್ನು ನೋಡಿ ಇವರಿಗೆ ಯಾವುದರಲ್ಲಿ ಕಡಿಮೆಯಾಗಿದೆ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಕುರುಬನ ಪರಿಸ್ಥಿತಿ ನೋಡಿದರೆ ತಿನ್ನುವುದಕ್ಕೆ ಅನ್ನ ಇರುವುದಿಲ್ಲ. ಇರುವುದಕ್ಕೆ ಸೂಕ್ತ ಮನೆಯಿಲ್ಲ. ಕೂಲಿ ಕೆಲಸ ಮಾಡುತ್ತಾನೆ. ಪ್ರತಿ ದಿನ ಕೂಲಿ ಸಿಗುವುದಿಲ್ಲ. ಮಕ್ಕಳಿಗೆ ವಿದ್ಯಾಬ್ಯಾಸ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕುರುಬರನ್ನು ಎಸ್‌ಟಿಗೆ ಸೇರಿಸಬೇಕು ಎಂದು ಬೇಡಿಕೆಯಿದೆ. ಕೆಲವು ಕಡೆ ಈ ಬಗ್ಗೆ ಚರ್ಚೆಯಾಗಿ ತೀರ್ಮಾನವೂ ಆಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಕುರುಬರನ್ನು ಎಸ್‌ಟಿಗೆ ಸೇರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಈ ಹೋರಾಟ ನಡೆದಿದೆ.

* ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್‌ಟಿ ಪ್ರಮಾಣಪತ್ರ ನೀಡಲಾಗುತ್ತಿದೆಯಂತೆ?

- ಬೀದರ್‌, ಕಲ​ಬು​ರ​ಗಿ, ಯಾದಗಿರಿ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಕುರುಬರಿಗೆ ಎಸ್‌ಟಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಸಣ್ಣಪುಟ್ಟಗೊಂದಲಗಳಿದ್ದು, ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಆದರೆ ಈಗ ಎಸ್‌ಟಿ ಪ್ರಮಾಣ ಪತ್ರ ನೀಡುವ ಸಂಬಂಧ ಗೊಂದಲ ನಿವಾರಿಸಬೇಕು ಎಂಬ ಬೇಡಿಕೆ ಇದೆ. ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ರಾಜಕೀಯವಾಗಿ ಎಸ್‌ಟಿ ಪ್ರಮಾಣ ಪತ್ರ ಪಡೆದು ಅಧ್ಯಕ್ಷರಾಗಿದ್ದಾರೆ. ಗೊಂಡ ಹೆಸರಿನಲ್ಲಿ ಹಲವು ಜನ ಇದ್ದಾರೆ. ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಸದಸ್ಯರು ಸೇರಿದ್ದಾರೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ಅವಕಾಶ ನೀಡಲಾಗುತ್ತಿದೆ. ಈಗ ಒಬ್ಬ ವ್ಯಕಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಿದ ಸಂದರ್ಭದಲ್ಲಿ ಮತ್ತೊಬ್ಬರು ಆಕ್ಷೇಪಣೆ ಸಲ್ಲಿಸುತ್ತಾರೆ. ಈ ರೀತಿಯ ಗೊಂದಲಗಳಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಎಸ್‌ಟಿ ಆಗಬೇಕು ಎಂದು ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದ ಭಗವಂತ ಖೂಬಾ ಮಾತನಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಇದಲ್ಲದೆ ಉಳಿದ ಇಡೀ ರಾಜ್ಯಕ್ಕೆ ಎಸ್‌ಟಿ ಕೊಡಬೇಕು ಎಂಬುದನ್ನು ಇಂದು ಚರ್ಚೆಯಾಗುತ್ತಿದೆ.

* ಮೀಸಲಾತಿಯ ಸೌಲಭ್ಯಗಳ ವ್ಯಾಪ್ತಿಯಿಂದ ಕೆನೆಪದರ ವ್ಯಕ್ತಿಗಳನ್ನು ಹೊರಗಿಡಬೇಕು ಚರ್ಚೆ ಆಗಾಗ ಕೇಳಿಬರುತ್ತದೆಯಲ್ಲ?

- ಹೌದು. ಅರ್ಹರಿಗೆ ಮಾತ್ರ ಪ್ರಮಾಣ ಪತ್ರ ನೀಡುವಂತೆ ನಿಯಮ ರೂಪಿಸಬೇಕು. ಈಗ ನನ್ನ ಮಕ್ಕಳಿಗೆ, ರಾಜಕೀಯ ಪ್ರಭಾವಿಗಳು, ಆದಾಯ ತೆರಿಗೆ ಪಾವತಿ ಮಾಡುವವರು, ಶಾಸಕರು, ಸಚಿವರಾಗಿದ್ದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಿದರೆ ಜನ ನಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಪಡೆದುಕೊಂಡಿಲ್ಲವೇ? ಅದೇ ರೀತಿ ಗೋವಿಂದ ಕಾರಜೋಳ ಪಡೆದುಕೊಳ್ಳುತ್ತಿಲ್ಲವೇ? ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅರ್ಹರಿಗೆ ಮಾತ್ರ ನೀಡಬೇಕು.

* ಹೀಗೆ ಹಂತ ಹಂತವಾಗಿ ಎಲ್ಲ ಹಿಂದುಳಿದ ಜಾತಿಗಳು ಎಸ್‌ಸಿ, ಎಸ್‌ಟಿಗೆ ಸೇರಿಸಲು ಒತ್ತಾಯಿಸಿದರೆ ಮುಂದಿನ ಪರಿಸ್ಥಿತಿ ಏನಾಗಬಹುದು?

- ಎಲ್ಲ ಜನಾಂಗದವರು ಎಸ್‌ಸಿ, ಎಸ್‌ಟಿಗೆ ಸೇರಿಸಿ ಎಂದು ಕೇಳುತ್ತಾರೆ. ಕೇಳುವುದು ತಪ್ಪಲ್ಲ. ಸರ್ಕಾರಗಳು ಯಾರು ಅರ್ಹರಿದ್ದಾರೆ ಅಂತವರಿಗೆ ಮಾತ್ರ ಶಿಫಾರಸ್ಸು ಮಾಡಿ ಅವಕಾಶ ನೀಡಬೇಕು. ನಾವು ಇದೀಗ ಪ್ರಾರಂಭಿಸಿರುವ ಈ ಹೋರಾಟ ಕೇವಲ ಕುರುಬರದ್ದಲ್ಲ. ಉದಾಹರಣೆಗೆ ಗುಲ್ಬರ್ಗಾದಲ್ಲಿ ಕೋಲಿ ಸಮಾಜ ಎಂದು ಕರೆಯುತ್ತಾರೆ. ಆ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಜನಾಂಗ ಇದೆ. ಇದೇ ವಿಚಾರವಾಗಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ನಮ್ಮ ಮನೆಗೆ ಬಂದಿದ್ದು, ನೀವು ನಮ್ಮ ಸಮುದಾಯಕ್ಕೂ ಸಹಕಾರ ನೀಡಬೇಕು ಎಂದು ಕೇಳಿದ್ದರು. ನಾನು ಖಂಡಿತಾ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಈ ಹೋರಾಟ ಬರೀ ಕುರುಬರಿಗೆ ಮಾತ್ರ ಸೀಮಿತವಾಗುವುದಿಲ್ಲ, ನಿಮಗೂ ಸಹಕಾರಿಯಾಗಲಿದೆ ಎಂದು ಹೇಳಿದ್ದೇನೆ. ಸವಿತಾ ಸಮಾಜದವರು ಬಂದಿದ್ದರು. ಶಿರಾದಲ್ಲಿ ಕಾಡು ಗೊಲ್ಲರು ಎಂಬ ಸಮುದಾಯವಿದೆ. ಅವರೂ ಎಸ್‌ಟಿ ಆಗಬೇಕು ಎಂದು ಬಂದಿದ್ದಾರೆ. ಈ ರೀತಿಯಲ್ಲಿ ಯಾರು ಅರ್ಹರಾಗಿದ್ದಾರೆ ಅವರೆಲ್ಲಾ ನಾನು ಬೆಂಬಲ ಸೂಚಿಸುತ್ತೇನೆ.

* ನೀವು ಹಿಂದುಳಿದ ವರ್ಗಗಳ ಹೋರಾಟದ ನೇತೃತ್ವ ವಹಿಸಿಕೊಂಡಿರುವುದು ಯಾಕೆ?

- ನಾನೊಬ್ಬನೇ ನೇತೃತ್ವ ವಹಿಸಿಕೊಂಡಿಲ್ಲ. ಈಗ ಕೆಲದಿನಗಳ ಹಿಂದೆ ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸ ದುರ್ಗದ ಈಶ್ವರಾನಂದ ಪುರಿ ಸ್ವಾಮೀಜಿಗಳು ನಮ್ಮ ಮನೆಗೆ ಬಂದಿದ್ದರು. ಇದರ ನೇತೃತ್ವ ನೀವು ವಹಿಸಿಕೊಳ್ಳಬೇಕು ಎಂದರು. ಇಲ್ಲ ಸ್ವಾಮೀಜಿಗಳಾದ ನೀವು ನೇತೃತ್ವ ವಹಿಸಿಕೊಳ್ಳಿ, ಅದಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದು ಹೇಳಿದ್ದೇನೆ. ಅದಾದ ಬಳಿಕ ಬಂಡೆಪ್ಪ ಕಾಶೆಂಪುರ ಮತ್ತು ವಿಶ್ವನಾಥ್‌, ರೇವಣ್ಣ ಕುರುಬರ ಸಂಘದ ಪ್ರಮುಖರು ಎಲ್ಲರೂ ಮನೆಗೆ ಬಂದು ನನ್ನನ್ನು ನೇತೃತ್ವ ತೆಗೆದುಕೊಳ್ಳಬೇಕು ಎಂದರು. ಆದರೆ, ನಮಗೆ ಮಾರ್ಗದರ್ಶಕರು ಸ್ವಾಮೀಜಿಗಳು ನಾನು ಯಾವುದೇ ಕಾರಣಕ್ಕೂ ನೇತೃತ್ವ ತೆಗೆದುಕೊಳ್ಳುವುದಿಲ್ಲ. ನಾಲ್ಕು ಪೀಠಗಳ ಸ್ವಾಮೀಜಿಗಳು ನೇತೃತ್ವ ತೆಗೆದುಕೊಳ್ಳಲಿ. ಅವರು ನೀಡಿದ ಮಾರ್ಗದರ್ಶನದಂತೆ ನಾವೆಲ್ಲರೂ ಸಹಕಾರ ನೀಡುವುದಾಗಿ ಹೇಳಿದ್ದೇನೆ.

* ಈ ಹೋರಾಟದಲ್ಲಿ ಸಿದ್ದರಾಮಯ್ಯ ನಿಮ್ಮ ಜೊತೆಗೆ ಇರುವರೇ?

- ಸಿದ್ದರಾಮಯ್ಯ ಅವರನ್ನು ನನ್ನ ಜೊತೆ ಇರುವ ಅನೇಕ ಪ್ರಮುಖರು ಸಂಪರ್ಕ ಮಾಡಿ ಹೋರಾಟಕ್ಕೆ ಆಹ್ವಾನ ನೀಡಿದ್ದಾರೆ. ಅವರು ಬರುವುದಿಲ್ಲ ಎಂದು ಹೇಳಿದ್ದಾರೆ. ಬಂದರೂ ನಮಗೆ ಸಂತೋಷ. ಇದೀಗ ಹೋರಾಟಕ್ಕೆ ಪದಾಧಿಕಾರಿಗಳನ್ನು ಮಾಡುತ್ತಿದ್ದು, ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಗುರುತಿಸಿಕೊಂಡಿರುವವರು ಇದ್ದಾರೆ. ಸಿದ್ದರಾಮಯ್ಯ ಬಂದಿಲ್ಲ ಎಂದರೆ ಇದು ಒಂದು ಪಕ್ಷದ್ದಾಗುವುದಿಲ್ಲ. ಸ್ವಾಮೀಜಿಗಳು ನಾಯಕತ್ವ ವಹಿಸುತ್ತಿದ್ದಾರೆ. ಇಂದಲ್ಲ ನಾಳೆ ಸಿದ್ದರಾಮಯ್ಯ ಬರಬಹುದು ಎಂಬ ನಿರೀಕ್ಷೆ ಇದೆ.

ನೀವು ಪ್ರಭಾವಿ ಸಚಿವರಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಸರ್ಕಾರದ ವಿರುದ್ಧ ನಿಂತಂತಾಗುವುದಿಲ್ಲವೇ?

- ನಾನು ಹೋರಾಟಕ್ಕೆ ಇಳಿಯುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಯಾವ ಕಾರ್ಯಗಳು ಆಗಬೇಕು ಎಂಬುದರ ಕುರಿತಂತೆ ಕೊಂಡಿಯಾಗಿ ಸೇವೆ ಮಾಡತ್ತೇನೆ. ಆದರೆ, ನಾನೇ ಹೋರಾಟಕ್ಕೆ ಇಳಿಯುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯುವುದಿಲ್ಲ. ಇಲ್ಲಿಯ ಪ್ರಮುಖರ ಬಳಿ ಯಾವ ಕಾರ್ಯಗಳು ಆಗಬೇಕು. ದೆಹಲಿಯಲ್ಲಿ ಏನಾಗಬೇಕು? ಅಲ್ಲಿನ ಸಮಸ್ಯೆಗಳು ಏನು? ಸಂಬಂಧ ಪಟ್ಟಸಚಿವರನ್ನು ಭೇಟಿಗೆ ಸಮಯ ನಿಗದಿ ಮಾಡುವುದು, ದೆಹಲಿಯ ಆಯೋಗಕ್ಕೆ ಭೇಟಿ ಮಾಡುವುದಕ್ಕೆ ಸಮಯ ನಿಗದಿ ಮಾಡುವುದು. ನ್ಯಾಯಬದ್ಧವಾಗಿ ಆಗಬೇಕಾದ ಕಾರ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡುತ್ತೇನೆ.

Follow Us:
Download App:
  • android
  • ios