ಬೆಂಗಳೂರು :  ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ಶ್ಯೂರಿಟಿ ಇಲ್ಲದೆ ಕಿರು ಸಾಲ ಒದಗಿಸುವ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಚಾಲನೆ ನೀಡಲಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದು ಮತ್ತು ಅವರಿಂದ ನಡೆಯುವ ಕಿರುಕುಳ ತಡೆಯುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ಕನಿಷ್ಠ 2000 ರು.ನಿಂದ ಗರಿಷ್ಠ 10000 ರು.ವರೆಗೆ ಒಬ್ಬರಿಗೆ ಸಾಲ ನೀಡಲಾಗುತ್ತದೆ.

"

ಬೆಂಗಳೂರು ನಗರದಲ್ಲಿ ಐದು ಸಾವಿರ, ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಸಾವಿರ ಮತ್ತು ಇತರೆ ಜಿಲ್ಲಾ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಒಂದು ಸಾವಿರ ಫಲಾನುಭವಿಗಳಿಗೆ ಸಾಲ ನೀಡಲು ಉದ್ದೇಶಿಸಲಾಗಿದೆ. ಕಿರುಸಾಲವನ್ನು ವಾರ್ಷಿಕ 50 ಸಾವಿರ ಫಲಾನುಭವಿಗಳಿಗೆ ನೀಡಲಾಗುವುದು. ಡಿಸಿಸಿ ಬ್ಯಾಂಕ್‌ಗಳು, ಪಟ್ಟಣ ಸಹಕಾರಿ ಬ್ಯಾಂಕ್‌ಗಳು, ಮಹಿಳಾ ಸಹಕಾರಿ ಬ್ಯಾಂಕ್‌ಗಳು ಶೂನ್ಯ ಬಡ್ಡಿದರದಲ್ಲಿ ಕಿರುಸಾಲವನ್ನು ನೀಡಲಿವೆ. ಫಲಾನುಭವಿಗಳನ್ನು ಗುರುತಿಸಲು ಬ್ಯಾಂಕ್‌ಗಳ ಸಿಬ್ಬಂದಿ ನಿಗದಿತ ಪ್ರದೇಶ, ಮಾರುಕಟ್ಟೆಗಳಲ್ಲಿ ಮೊಬೈಲ್‌ ವ್ಯಾನ್‌ಗಳ ಮೂಲಕ ಹಾಜರಿರುತ್ತಾರೆ. ನಿಗದಿತ ಅರ್ಜಿ ಸಲ್ಲಿಸುವ ಮೂಲಕ ಅಲ್ಲಿ ನೋಂದಾಯಿಸಿಕೊಂಡು ಸಾಲ ಪಡೆದುಕೊಳ್ಳಬಹುದಾಗಿದೆ. ಸಾಲ ಪಡೆದ ಫಲಾನುಭವಿಗಳಿಗೆ ಅದನ್ನು ಮರುಪಾವತಿ ಮಾಡಲು ಮೂರು ತಿಂಗಳ ಸಮಯಾವಕಾಶ ಇರುತ್ತದೆ. ಪ್ರತಿದಿನ ಫಲಾನುಭವಿಗಳು ಕನಿಷ್ಠ 100 ರು.ನಿಂದ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿ ಚಾಲನೆ:  ಯಶವಂತಪುರದಲ್ಲಿನ ಎಪಿಎಂಸಿ ಮಾರುಕಟ್ಟೆಯಾರ್ಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಡವರ ಬಂಧು ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಯೋಜನೆಯ ಸಂಚಾರಿ ಸೇವಾ ವಾಹನಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಚಾಲನೆ ನೀಡಲಿದ್ದಾರೆ. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್‌, ವಿಧಾನಸಭೆ ಅಧ್ಯಕ್ಷ ರಮೇಶ್‌ ಕುಮಾರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾಜ್‌ರ್‍ ಇತರರು ಭಾಗವಹಿಸಲಿದ್ದಾರೆ.