ಮಂಗಳೂರು/ಬೆಂಗಳೂರು (ಅ.15): ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಿದ ಬಳಿಕ ಕೊರೋನಾ ಸೋಂಕಿಗೆ ತುತ್ತಾಗಿರುವ ಮೂಡುಬಿದಿರೆಯ ಶಿಕ್ಷಕಿ ದಂಪತಿಯಾದ ವೈ. ಶಶಿಕಾಂತ್‌, ಎನ್‌.ಪದ್ಮಾಕ್ಷಿ ಅವರ ನೆರವಿಗೆ ಇದೀಗ ರಾಜ್ಯಸರ್ಕಾರ ಧಾವಿಸಿದೆ. ಕೊರೋನಾದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಪದ್ಮಾಕ್ಷಿ ಅವರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವ ಭರವಸೆಯನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ನೀಡಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದು, ಅಗತ್ಯ ನೆರವು ನೀಡುವಂತೆ ಸೂಚಿಸಿದ್ದಾರೆ.

ಶಿರ್ತಾಡಿಯ ಶಿಕ್ಷಕಿ ಎನ್‌.ಪದ್ಮಾಕ್ಷಿ ಮತ್ತವರ ಪತಿ ಶಿಕ್ಷಕ ವೈ.ಶಶಿಕಾಂತ್‌ ದಂಪತಿಗೆ ಸೋಂಕು ತಗಲಿರುವ ಬಗ್ಗೆ ಪುತ್ರಿ ಐಶ್ವರ್ಯ ಜೈನ್‌ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡದ್ದರು. ಈ ಸಂಬಂಧ ‘ಕನ್ನಡಪ್ರಭ’ ಬುಧವಾರ ‘ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಶಿಕ್ಷಕ ದಂಪತಿಯ ಪುತ್ರಿಯ ಮೊರೆ ಹಾಗೂ ಶಿಕ್ಷಕಿ ಪದ್ಮಾಕ್ಷಿ ಅವರ ಪರಿಸ್ಥಿತಿ ಗಮನಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕರೆ ಮಾಡಿ ಈ ಕುರಿತು ವಿವರಣೆ ಪಡೆದಿದ್ದಾರೆ.

ಕರ್ನಾಟಕದಲ್ಲಿ ನಿಲ್ಲದ ಕೊರೋನಾ, ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ...

ಸಚಿವ ಸುರೇಶ್‌ಕುಮಾರ್‌ ಅವರು ಬುಧವಾರ ಬೆಳಗ್ಗೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದು, ಅದರಂತೆ ಸ್ವತಃ ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ಅವರು ಆಸ್ಪತ್ರೆಗೆ ತೆರಳಿ ಪದ್ಮಾಕ್ಷಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಪದ್ಮಾಕ್ಷಿ ಅವರು ಸದ್ಯ ಕೊರೋನಾದಿಂದ ಗುಣಮುಖರಾಗಿದ್ದಾರೆ. ಆದರೆ ಶ್ವಾಸಕೋಶಕ್ಕೆ ಹಾನಿ ಉಂಟಾಗಿರುವುದರಿಂದ ಆಕ್ಸಿಜನ್‌ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ-ಸುವರ್ಣ ವಾಹಿನಿಗೆ ವಿಶೇಷ ಧನ್ಯವಾದಗಳು-ಐಶ್ವರ್ಯ

ನನ್ನ ಕುಟುಂಬದ ಅಳಲಿಗೆ ವಿಶೇಷವಾಗಿ ರಾಜ್ಯಮಟ್ಟದಲ್ಲಿ ಸ್ಪಂದಿಸಿದ ಕನ್ನಡ ಪ್ರಭ- ಸುವರ್ಣವಾಹಿನಿಗೆ ವಿಶೇಷ ಧನ್ಯವಾದಗಳು. ಸರ್ಕಾರ, ವಿಶೇಷವಾಗಿ ಶಿಕ್ಷಣ ಸಚಿವರು, ಅಧಿಕಾರಿಗಳು, ಎಲ್ಲರ ಸಹಕಾರಕ್ಕಾಗಿ ಕೃತಜ್ಞತೆಗಳು. ಜ್ಯೋತಿ ಸಂಜೀವಿನಿ ಎಂಬ ವಿಮಾ ಯೋಜನೆ ಸರ್ಕಾರಿ ಶಿಕ್ಷಕರಿಗೆ ಮಾತ್ರ ಮೀಸಲಾಗಿದ್ದು, ಅದನ್ನು ಅನುದಾನಿತ ಶಿಕ್ಷಕರಿಗೂ ವಿಸ್ತರಿಸಬೇಕು.

ಐಶ್ವರ್ಯ ಜೈನ್‌, ಶಿಕ್ಷಕ ದಂಪತಿಯ ಪುತ್ರಿ.

ಐಶ್ವರ್ಯ ಜೈನ್‌ ಅವರ ತಾಯಿಯ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಲು ನಿರ್ಣಯಿಸಿದೆ. ಅತ್ಯುತ್ತಮ ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಅವರಿಗೆ ಒದಗಿಸಲಿದೆ. ಈ ವಿಚಾರವಾಗಿ ಖುದ್ದು ಕರೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಧನ್ಯವಾದಗಳು. ಪೋಷಕರ ಕುರಿತು ಇಷ್ಟುಕಾಳಜಿ ವಹಿಸಿದ ಐಶ್ವರ್ಯಳಿಗೂ ನನ್ನ ಅಭಿನಂದನೆಗಳು.

- ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ