1.1 ಲಕ್ಷ ಚಾಲಕರಿಗೆ 3,000 ಪರಿಹಾರಕ್ಕೆ ಸರ್ಕಾರ ಒಪ್ಪಿಗೆ
* ಚಾಲಕರಿಂದ ಸಲ್ಲಿಕೆಯಾಗಿದ್ದ 1.27 ಲಕ್ಷ ಅರ್ಜಿ ಪರಿಶೀಲಿಸಿ ಆಯ್ಕೆ
* ಶೀಘ್ರ ಖಾತೆಗೆ 3,000
* 'ಸೇವಾಸಿಂಧು ವೆಬ್‌ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ
ಬೆಂಗಳೂರು(ಮೇ.31): ಸೆಮಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಮೂರು ಸಾವಿರ ರು. ಪರಿಹಾರ ಪಡೆಯಲು ಕಳೆದ ನಾಲ್ಕು ದಿನಗಳಲ್ಲಿ ರಾಜ್ಯಾದ್ಯಂತ 1.27 ಲಕ್ಷ ಚಾಲಕರು ಅರ್ಜಿ ಸಲ್ಲಿಸಿದ್ದಾರೆ.
ಸಂಕಷ್ಟದಲ್ಲಿರುವ ಆಟೋ, ಕ್ಯಾಬ್ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ, 2.10 ಲಕ್ಷ ಚಾಲಕರಿಗೆ ತಲಾ ಮೂರು ಸಾವಿರ ರು. ಪರಿಹಾರ ಘೋಷಿಸಿದೆ. ಅದರಂತೆ ‘ಸೇವಾಸಿಂಧು ವೆಬ್‌ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಾಲ್ಕು ದಿನಗಳಲ್ಲಿ ಒಟ್ಟು 1.27 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 72,256 ಆಟೋ ಚಾಲಕರು, 48,196 ಟ್ಯಾಕ್ಸಿ ಚಾಲಕರು ಹಾಗೂ 7,361 ಮ್ಯಾಕ್ಸಿ ಕ್ಯಾಬ್ ಚಾಲಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಚಾಲಕರ ಖಾತೆಗೆ 3,000 ರು. ಪರಿಹಾರ ನೇರ ವರ್ಗ: ಸರ್ಕಾರ
ಈ 1.27 ಲಕ್ಷ ಅರ್ಜಿಗಳ ಪೈಕಿ 1.10 ಲಕ್ಷ ಅರ್ಜಿಗಳು ಪರಿಹಾರ ಮೊತ್ತ ನೀಡಲು ಅನುಮೋದನೆ ಪಡೆದಿವೆ. ಈ ಅರ್ಜಿಗಳನ್ನು ಡೈರೆಕ್ಟ್ ಬೆನಿಫಿಟ್ ಪೇಮೆಂಟ್ (ಡಿಬಿಟಿ) ವಿಭಾಗಕ್ಕೆ ಕಳುಹಿಸಲಾಗಿದೆ.
ಬೆಂಗಳೂರು ನಗರ ಅತಿ ಹೆಚ್ಚು ಅರ್ಜಿ: ಸಲ್ಲಿಕೆಯಾಗಿರುವ ಒಟ್ಟು 1.27 ಲಕ್ಷ ಅರ್ಜಿಗಳ ಪೈಕಿ ಅತಿ ಹೆಚ್ಚು ಬೆಂಗಳೂರು ನಗರ ಜಿಲ್ಲೆ 56,701 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಮೈಸೂರು 8,404, ದಕ್ಷಿಣ ಕನ್ನಡ 6,848, ತುಮಕೂರು 6,819, ಮಂಡ್ಯ 4,740, ಹಾಸನ 3,420, ಉಡುಪಿ 3,014, ದಾವಣಗೆರೆ 2,989, ರಾಮನಗರ 2,971, ಬೆಂಗಳೂರು ಗ್ರಾಮಾಂತರ 2,787, ಬೆಳಗಾವಿ 2,592, ಕಲಬುರಗಿ 2,549, ಚಿತ್ರದುರ್ಗ 2,410, ಶಿವಮೊಗ್ಗ 2,366, ಚಿಕ್ಕಮಗಳೂರು 1,990, ಬಳ್ಳಾರಿ 1,764, ಕೋಲಾರ 1,585, ಕೊಡಗು 1,391, ಚಿಕ್ಕಬಳ್ಳಾಪುರ 1,287, ಹಾವೇರಿ 1,072, ರಾಯಚೂರು 7,98, ಬಾಗಲಕೋಟೆ 784, ಕೊಪ್ಪಳ 673, ಬೀದರ್ 580, ಗದಗ 477 ಹಾಗೂ ಯಾದಗಿರಿಯಿಂದ 469 ಅರ್ಜಿಗಳು ಸಲ್ಲಿಕೆಯಾಗಿವೆ.