ಬೆಂಗಳೂರು (ಡಿ.11):  ‘ರಾಜ್ಯದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ರೈತರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ..’

ಹೀಗಂತ ರಾಜ್ಯಪಾಲ ವಜುಭಾಯಿ ವಾಲಾ ಅವರು ನೀಡಿದ ಸ್ಪಷ್ಟಭರವಸೆಯನ್ನು ನಂಬಿ ಕಳೆದ ಮೂರು ದಿನಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ, ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿದ್ದ ಹೋರಾಟವನ್ನು ರೈತರು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಇದೇ ವೇಳೆ, ರಾಜ್ಯಪಾಲರು ಒಂದು ವೇಳೆ ಕೊಟ್ಟಭರವಸೆಯಂತೆ ಸರ್ಕಾರಕ್ಕೆ ನಿರ್ದೇಶನ ನೀಡದೆ ರೈತ ವಿರೋಧಿ ಕಾಯ್ದೆಗಳಿಗೆ ಸಹಿ ಹಾಕಿದರೆ ಮತ್ತೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಿಎಂ ತವರಿಗೆ ನೀರೊಯ್ಯಲು ಭೂಸ್ವಾಧೀನ: ತೀವ್ರಗೊಂಡ ವಿರೋಧ .

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ, ಬಾರುಕೋಲು ಚಳವಳಿ, ರಾಜಭವನ ಮುತ್ತಿಗೆಯಂತಹ ಹೋರಾಟಗಳನ್ನು ನಡೆಸಿಕೊಂಡು ಬಂದ ರೈತರು ಗುರುವಾರ ರಾಜಭವನ ಭೇಟಿಗೆ ಅವಕಾಶ ಸಿಕ್ಕಿದ್ದರಿಂದ ರಾಜ್ಯಪಾಲರಲ್ಲಿ ತಮ್ಮ ಆತಂಕ, ಅಳಲು, ಕಾಯ್ದೆಯಲ್ಲಿನ ರೈತ ವಿರೋಧಿ ಅಂಶಗಳನ್ನು ಹೇಳಿಕೊಂಡರು. ಈ ವೇಳೆ ಸರ್ಕಾರಕ್ಕೆ ರೈತರ ಅಭಿಪ್ರಾಯ ಪಡೆಯಲು ನಿರ್ದೇಶನ ನೀಡುವ ಭರವಸೆ ರಾಜ್ಯಪಾಲರಿಂದ ಸಿಕ್ಕಿತು. ಈ ಹಿನ್ನೆಲೆಯಲ್ಲಿ ರಾಜಭವನದಿಂದ ಹಿಂತಿರುಗಿದ ಕೂಡಲೇ ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ರೈತರು ಘೋಷಿಸಿದರು.

ಸರ್ಕಾರದಿಂದ ಸಿಗದ ಸಮಾಧಾನ ರಾಜ್ಯಪಾಲರಿಂದ:  20 ರೈತ ಮುಖಂಡರು ರಾಜ್ಯಪಾಲರ ಭೇಟಿಯಾಗಿ ಹೊರಬಂದ ಬಳಿಕ ರೈತ, ದಲಿತ, ಕಾರ್ಮಿಕ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯ ಪರವಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಕಾಶ್‌ ಕಮ್ಮರಡಿ ಮತ್ತಿತರ ರೈತ ಮುಖಂಡರು ಹೇಳಿಕೆ ನೀಡಿ, ‘ಸರ್ಕಾರದಿಂದ ಸಿಗದ ಭರವಸೆ ನಮಗೆ ರಾಜ್ಯಪಾಲರಿಂದ ಸಿಕ್ಕಿದೆ.

 ನಮ್ಮ ಆತಂಕ, ಮನವಿಯನ್ನು ಸಮಾಧಾನದಿಂದ ಆಲಿಸಿದ ರಾಜ್ಯಪಾಲರು ರೈತರೊಂದಿಗೆ ಹಾಗೂ ಸಾರ್ವಜನಿಕವಾಗಿ ಈ ಎರಡೂ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವುದಾಗಿ ನೇರ ಭರವಸೆ ನೀಡಿದ್ದಾರೆ. ಇದರೊಂದಿಗೆ ತಮ್ಮ ನಿರ್ದೇಶನ ಪಾಲಿಸಿ ರೈತರ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಿ ಪರಿಷ್ಕರಿಸಿದ ಕಾಯ್ದೆಗಳಿಗೆ ಮಾತ್ರವೇ ಸಹಿ ಹಾಕುವ ಪರೋಕ್ಷ ಭರವಸೆಯೂ ಸಿಕ್ಕಂತಾಗಿದೆ ಎಂದು ಭಾವಿಸಿದ್ದೇವೆ. ಹಾಗಾಗಿ ನಾವು ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ಹೇಳಿದರು.

ಅಲ್ಲದೆ, ರಾಜ್ಯಪಾಲರು ರೈತರಿಗೆ ಕೊಟ್ಟಭರವಸೆಯಂತೆ ನಡೆದುಕೊಳ್ಳದೆ ರೈತ ವಿರೋಧಿ ಕಾಯ್ದೆಗಳಿಗೆ ಸಹಿ ಹಾಕಿದರೆ ಮತ್ತೆ ಹೋರಾಟ ಪ್ರಾರಂಭಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೂಡ ಸ್ಪಷ್ಟಎಚ್ಚರಿಕೆ ನೀಡಿದರು.

ರಾಜಭವನಕ್ಕೆ ಮುತ್ತಿಗೆ ಯತ್ನ ವಿಫಲ:  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ, ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಮೂರನೇ ದಿನ ಗುರುವಾರವೂ ರಾಜಧಾನಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನಾ ಮೆರವಣಿಗೆ, ರಾಜಭವನಕ್ಕೆ ಮುತ್ತಿಗೆ ಯತ್ನ ಹೋರಾಟದ ಕಾವು ಜೋರಾಗಿತ್ತು.

ಬೆಳಗ್ಗೆ 9 ಗಂಟೆ ವೇಳೆಗೆ ನಾಡಿನ ಮೂಲೆ ಮೂಲೆಗಳಿಂದ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಸಮಾವೇಶಗೊಂಡ ಸಾವಿರಾರು ರೈತರು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಚಲೋ ಆರಂಭಿಸಿದರು. ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ, ಘೋಷಣೆ ಕೂಗುತ್ತಾ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಮೇಲ್ಸೇತುವೆ ಮೂಲಕ ರಾಜಭವನದ ಕಡೆ ಸಾಲುಗಟ್ಟಿಹೊರಟ ರೈತರನ್ನು ಆನಂದ್‌ರಾವ್‌ ವೃತ್ತದ ಬಳಿ ತಡೆದ ಪೊಲೀಸರು ಮುಂದೆ ಸಾಗಲು ಅವಕಾಶ ನೀಡಲಿಲ್ಲ. 

ಈ ವೇಳೆ, ಪೊಲೀಸರು ಮತ್ತು ರೈತರ ನಡುವೆ ನೂಕು ನುಗ್ಗಲು, ವಾಗ್ವಾದ ನಡೆಯಿತು. ಪೊಲೀಸರು ರೈತರ ಮೆರವಣಿಗೆಯನ್ನು ಸ್ವಾತಂತ್ರ್ಯ ಉದ್ಯಾನದ ಕಡೆಗೆ ತಲುಪಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಸ್ಥಳದಲ್ಲೇ ಸಮಾವೇಶಗೊಂಡ ರೈತರು, ಸರ್ಕಾರ ಪೊಲೀಸರ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುತ್ತಿದೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ. ರಾಜ್ಯಪಾಲರು ಮಧ್ಯಪ್ರವೇಸಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆಗೆ ಸರ್ಕಾರದ ಧೋರಣೆಗಳನ್ನು ಖಂಡಿಸಿ ವಿಧಾನಸೌಧದಿಂದ ಫ್ರೀಡಂ ಪಾರ್ಕ್ವರೆಗೆ ಮೆರಣಿಗೆ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಶಾಸಕರು ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.

ಬಳಿಕ ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕಿದ್ದರಿಂದ 20 ರೈತ ಮುಖಂಡರ ನಿಯೋಗ ರಾಜಭವನಕ್ಕೆ ತೆರಳಿ ವಿವಾದಿತ ಕಾಯ್ದೆಗಳಲ್ಲಿರುವ ರೈತ ವಿರೋಧಿ ಅಂಶಗಳನ್ನು ಮನವರಿಕೆ ಮಾಡಿಕೊಟ್ಟು ಅವುಗಳಿಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಿತು. ರಾಜ್ಯಪಾಲರ ಭರವಸೆ ಬಳಿಕ ಹೋರಾಟ ಕೈಬಿಟ್ಟಿರುವಾಗಿ ಘೋಷಿಸಲಾಯಿತು.