ಸಿಎಂ ತವರಿಗೆ ನೀರೊಯ್ಯಲು ಭೂಸ್ವಾಧೀನ: ತೀವ್ರಗೊಂಡ ವಿರೋಧ
ರಟ್ಟೀಹಳ್ಳಿ, ಹಿರೇಕೆರೂರು ಮೂಲಕ ಪೈಪ್‌ಲೈನ್ ಮೂಲಕ ಶಿಕಾರಿಪುರದ ನೂರಾರು ಕೆರೆ ತುಂಬಿಸುವ ಯೋಜನೆ| ರಟ್ಟೀಹಳ್ಳಿ, ಹಿರೇಕೆರೂರು ತಾಲೂಕುಗಳ 18 ಗ್ರಾಮಗಳ 1200ಕ್ಕೂ ಹೆಚ್ಚು ರೈತರ ಜಮೀನು ಸ್ವಾಧೀನ ಪ್ರಕ್ರಿಯೆ| ನ್ಯಾಯವಾದಿ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ವಾರದಿಂದ ನಡೆಯುತ್ತಿದೆ ಆಮರಣಾಂತ ಉಪವಾಸ|
ನಾರಾಯಣ ಹೆಗಡೆ
ಹಾವೇರಿ(ಡಿ.10): ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ನೂರಾರು ಕೆರೆ ತುಂಬಿಸಲು ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನ ಸಾವಿರಾರು ಬಡ ರೈತರ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯವಾದಿ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.
ಉಡುಗಣಿ- ತಾಳಗುಂದ- ಹೊಸೂರು ನೀರಾವರಿ ಯೋಜನೆಯಡಿ ಹಿರೇಕೆರೂರು ತಾಲೂಕಿನ ಚಟ್ನಳ್ಳಿ ಬಳಿಯಿಂದ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಒಯ್ದು ಶಿಕಾರಿಪುರ ತಾಲೂಕಿನ ನೂರಾರು ಕೆರೆಗಳನ್ನು ತುಂಬಿಸುವ ಯೋಜನೆಯನ್ನು ನೀರಾವರಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಪೈಪ್‌ಲೈನ್ ಕಾಮಗಾರಿಯೂ ಶುರುವಾಗಿದೆ. ಆದರೆ, ಈಗಾಗಲೇ ಯುಟಿಪಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಈ ಭಾಗದ ರೈತರು ಭೂಸ್ವಾಧೀನ ಪಡಿಸಿಕೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯವಾದಿ ಬಿ.ಡಿ. ಹಿರೇಮಠ ಅವರು ಒಂದು ವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಹೋರಾಟಕ್ಕೆ ಕಿಚ್ಚು ಹೊತ್ತಿಸಿದೆ.
ವಿರೋಧ ಏಕೆ?:
ತುಂಗಭದ್ರಾ ನದಿಯಿಂದ ಶಿಕಾರಿಪುರಕ್ಕೆ ಪೈಪ್‌ಲೈನ್ ಮೂಲಕ ನೀರು ಒಯ್ಯುವ ಯೋಜನೆ ಇದಾಗಿದ್ದು, ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕುಗಳ 18 ಗ್ರಾಮಗಳ 1292 ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಸುಮಾರು 18 ಕಿಲೋ ಮೀಟರ್‌ವರೆಗೆ 5 ಅಡಿ ವ್ಯಾಸದ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಶುರುವಾಗಿದೆ. ಜತೆಗೆ, ಪೈಪ್‌ಲೈನ್‌ಗುಂಟ 30 ಅಡಿ ಸರ್ವೀಸ್ ರಸ್ತೆಯನ್ನು ಮಾಡಲಾಗುತ್ತಿದೆ. ಇದರಿಂದ 500ಕ್ಕೂ ಹೆಚ್ಚು ಎಕರೆ ಫಲವತ್ತಾದ ಜಮೀನು ಹೋಗಲಿದೆ. ನೀರಾವರಿ ಯೋಜನೆಗೆ ಇಲ್ಲಿಯ ರೈತರ ವಿರೋಧವಿಲ್ಲ. ಆದರೆ, ಭೂಸ್ವಾಧೀನಕ್ಕೆ ರೈತರ ವಿರೋಧವಿದೆ. ಈ ಹಿಂದೆ ತುಂಗಾ ಮೇಲ್ದಂಡೆ ಯೋಜನೆಗಾಗಿ ಸಾವಿರಾರು ರೈತರು ಭೂಮಿ ಕಳೆದುಕೊಂಡಿದ್ದಾರೆ. ಸುಮಾರು 20 ವರ್ಷಗಳಾದರೂ ಜಮೀನು ಕಳೆದುಕೊಂಡ ಅನೇಕ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಮತ್ತೊಂದು ಯೋಜನೆಗೆ ಜಮೀನು ವಶಪಡಿಸಿಕೊಂಡರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಅದಕ್ಕಾಗಿ ರೈತರ ಹೋರಾಟ ನಡೆಯುತ್ತಿದ್ದು, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೋರಾಟಕ್ಕೆ ರೈತ ಸಂಘಟನೆಗಳು, ಸ್ವಾಮೀಜಿಗಳು ಸೇರಿದಂತೆ ಪಕ್ಷಾತೀತ ಬೆಂಬಲ ವ್ಯಕ್ತವಾಗುತ್ತಿದೆ. ಇದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ರೈತರ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆತಂಕ:
ಭೂಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವುದು ಒಂದು ಕಡೆಯಾದರೆ ಜಿಲ್ಲೆಯಲ್ಲಿ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಆತಂಕವೂ ಎದುರಾಗಿದೆ. ಯೋಜನೆಯಲ್ಲಿ ಎಷ್ಟುಟಿಎಂಸಿ ನೀರು ಒಯ್ಯಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಆದ್ದರಿಂದ ಶಿಕಾರಿಪುರಕ್ಕೆ ನೀರು ಒಯ್ದರೆ ಕುಡಿವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿರುವ ಜಿಲ್ಲೆಯ ನೂರಾರು ಗ್ರಾಮಗಳಿಗೆ ಭವಿಷ್ಯದಲ್ಲಿ ಸಮಸ್ಯೆಯಾಗುವ ಅಪಾಯವಿದೆ. ಉಕ್ಕಡಗಾತ್ರಿ, ಮೈಲಾರ ಜಾತ್ರೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ರಾಣಿಬೆನ್ನೂರು, ಹಾವೇರಿ, ಗುತ್ತಲ ಪಟ್ಟಣ ಹಾಗೂ ಹಲವು ಗ್ರಾಮಗಳಿಗೆ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ಭೂಸ್ವಾಧೀನದೊಂದಿಗೆ ಯೋಜನೆಯನ್ನೇ ಸ್ಥಗಿತಗೊಳಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ತೀವ್ರಗೊಂಡ ಹೋರಾಟ:
ಹೋರಾಟ ತೀವ್ರವಾಗುತ್ತಿದ್ದಂತೆ ಜಿಲ್ಲಾಡಳಿತವು ಸತ್ಯಾಗ್ರಹ ನಿರತ ಹಿರೇಮಠ ಅವರ ಮನವೊಲಿಸುವ ಕಾರ್ಯದಲ್ಲಿ ವಿಫಲವಾಗಿದೆ. ಪ್ರಾಣ ಹೋದರೂ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಿರೇಮಠ ಪಟ್ಟು ಹಿಡಿದಿದ್ದಾರೆ. ಸರ್ಕಾರ ತನ್ನ ನಿರ್ಧಾರ ಹೇಳಲು ಡಿ. 10ರ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಹಿರೇಮಠ ಎಚ್ಚರಿಸಿದ್ದಾರೆ. ಹೋರಾಟ ಬೆಂಬಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಡಿ. 11ರಂದು ಆಗಮಿಸುತ್ತಿದ್ದಾರೆ.
ಯೋಜನೆಗಾಗಿ ಭೂಸ್ವಾಧೀನಕ್ಕೆ ನಮ್ಮ ವಿರೋಧವಿದೆ. ಯುಟಿಪಿ ಯೋಜನೆಗಾಗಿ ಇಲ್ಲಿಯ ರೈತರು ತ್ಯಾಗ ಮಾಡಿದ್ದಾರೆ. ಅವರಿಗೆ ಪರಿಹಾರವನ್ನೇ ಕೊಟ್ಟಿಲ್ಲ. ಹಿಂದಿನ ಬಾಕಿ ಪರಿಹಾರ ಕೊಡಬೇಕು. ಈ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ಕೈಬಿಟ್ಟು ಸರ್ಕಾರಿ ಜಮೀನಿನಲ್ಲೇ ಪೈಪ್‌ಲೈನ್ ಹಾಕುವುದಕ್ಕೆ ನಮ್ಮ ವಿರೋಧವಿಲ್ಲ. ಇದಕ್ಕೆ ಒಪ್ಪದಿದ್ದರೆ ಉತ್ತರ ಕರ್ನಾಟಕದ ನೀರನ್ನು ಶಿಕಾರಿಪುರಕ್ಕೆ ಕೊಡುವುದಿಲ್ಲ ಎಂಬ ಹೋರಾಟ ಆರಂಭಿಸಬೇಕಾಗುತ್ತದೆ. ಎರಡು ದಿನಗಳಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಉಪವಾಸ ಸತ್ಯಾಗ್ರಹ ನಿರತ ನ್ಯಾಯವಾದಿಬಿ.ಡಿ. ಹಿರೇಮಠ ತಿಳಿಸಿದ್ದಾರೆ.