‘ಗೃಹ ಆರೋಗ್ಯ’ ಯೋಜನೆಗೆ ಸರ್ಕಾರದ ಚಿಂತನೆ: ಸಚಿವ ದಿನೇಶ ಗುಂಡೂರಾವ್‌

ಇಂದು ಜನರ ಜೀವನ ಶೈಲಿ ಬದಲಾವಣೆಯಾಗಿದ್ದರಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿ ರೋಗ ಬರುವುದಕ್ಕೂ ಮುನ್ನವೇ ಅದನ್ನು ತಡೆಯಲು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆಗೆ ಸರ್ಕಾರ ಮುಂದಾಗಲಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. 
 

Governments thinking for Gruha Arogya scheme Says dinesh gundu rao gvd

ಬೀದರ್‌ (ಆ.24): ಇಂದು ಜನರ ಜೀವನ ಶೈಲಿ ಬದಲಾವಣೆಯಾಗಿದ್ದರಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಿ ರೋಗ ಬರುವುದಕ್ಕೂ ಮುನ್ನವೇ ಅದನ್ನು ತಡೆಯಲು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆಗೆ ಸರ್ಕಾರ ಮುಂದಾಗಲಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ಅವರು ಬುಧವಾರ ನಗರದ ಗುರುನಾನಕ ಆಸ್ಪತ್ರೆಯಲ್ಲಿ ನೂತನ ಶಸ್ತ್ರ ಚಿಕಿತ್ಸೆ ಕೋಣೆ, ಕ್ರಿಟಿಕಲ್‌ ಕೇರ್‌ ಯುನಿಟ್‌, ಲ್ಯಾಬ್‌ ಘಟಕ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಸರ್ಕಾರ 5 ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಇದಾದ ನಂತರ ಗೃಹ ಆರೋಗ್ಯ ಕೊಡೋಣ, ಇದಕ್ಕಾಗಿ ನಾವೇ ಜನರ ಬಳಿಗೆ ಹೋಗಿ ಅವರನ್ನು ಯಾವುದೇ ರೋಗ ಇರುವ ಬಗ್ಗೆ ತಪಾಸಣೆ ಮಾಡಲು ಸುಮಾರು 90 ಮೊಬೈಲ್‌ ಯುನಿಟ್‌ಗಳನ್ನು ಬಳಸಲಾಗುವುದು. ಪ್ರತಿ ಜಿಲ್ಲೆಗೆ 2ರಂತೆ ಮೊಬೈಲ್‌ ಯುನಿಟ್‌ಗಳು ಕಾರ್ಯ ನಿರ್ವಹಿಸಲಿವೆ. ಈ ಹಿಂದೆ ಇದರ ಸೇವೆ ಇತ್ತು ಆದರೆ ಕಳೆದ ಮೂರ್ನಲ್ಕು ವರ್ಷಗಳಿಂದ ಎಲ್ಲವೂ ಮುಚ್ಚಿ ಹೋಗಿದೆ ಎಂದರು.

2047ರ ವೇಳೆಗೆ ಭಾರತ ಸೂಪರ್‌ ಪವರ್‌: ಶೋಭಾ ಕರಂದ್ಲಾಜೆ

ರಾಜ್ಯದ 219 ಕಡೆ ಹೊಸ ಡಯಾಲಿಸಿಸ್‌ ಕೇಂದ್ರಗಳು: ರಾಜ್ಯದ 219 ಕಡೆ ಹೊಸ ಡಯಾಲಿಸಿಸ್‌ ಕೇಂದ್ರಗಳನ್ನು ಆರಂಭಿಸಿ ಉತ್ತಮ ಡಯಾಲಿಸಿಸ್‌ ಸೇವೆ ಕೊಡಲಾಗುವುದು. ಇದನ್ನು ಬರುವ 3 ತಿಂಗಳೊಳಗೆ ಆರಂಭಿಸಲಾಗುವುದು ಇದರಿಂದ ಡಯಾಲಿಸಿಸ್‌ಗಾಗಿ ಬಡ ರೋಗಿಗಳು ಪರದಾಡುವದನ್ನು ತಪ್ಪಿಸಬಹುದಾಗಿದೆ ಎಂದು ನುಡಿದರು.

108ರ ಆಧುನಿಕ ಅಂಬ್ಯುಲೆನ್ಸ್‌ ಸೇವೆಗೆ ಶೀಘ್ರ ಟೆಂಡರ್‌: ರಾಜ್ಯದಲ್ಲಿರುವ 108ರ ಒಪ್ಪಂದ ಮುಗಿದಿದೆ. ಇದು ಅವ್ಯವಸ್ಥೆಯ ಗೂಡಾಗಿದೆ. ಮುಂಬರುವ 2 ತಿಂಗಳಲ್ಲಿ ಆಧುನಿಕ ಅಂಬುಲೆನ್ಸ್‌ ಸೇವೆ ಸಿಗುವಂತಾಗಲಿ ಎಂಬ ಉದ್ದೇಶದಿಂದ ಅದನ್ನು ಉತ್ತಮಪಡಿಸಲು ಮತ್ತೊಮ್ಮೆ ಟೆಂಡರ್‌ ಕರೆಯಲಾಗುವುದು ಎಂದು ಆರೋಗ್ಯ ಸಚಿವ ದಿನೇಶ ತಿಳಿಸಿದರು.

ರಾಜ್ಯದ ಜಿಲ್ಲಾ, ತಾಲೂಕು ಹಾಗೂ ಸಮುದಾಯ ಕೇಂದ್ರಗಳು ಸಂಪೂರ್ಣವಾಗಿ ಹಾಳಾಗಿವೆ. ಅವುಗಳ ದುರುಸ್ತಿ ಹಾಗೂ ಅವುಗಳನ್ನು ಸುಸಜ್ಜಿತವಾಗಿಸುವಂತಾಗಲು ಸುಮಾರು 200 ಕೋಟಿ ರು. ಅನುದಾನ ಬೇಕಾಗಿದ್ದು, ಈ ವರ್ಷವೇ ಅದನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬೀದರ್‌ನ ಬ್ರಿಮ್ಸ್‌ನಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಇಲ್ಲಿ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಬೀದರ್‌ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಗುರುನಾನಕ ಆಸ್ಪತ್ರೆ ಲಾಭಕ್ಕಾಗಿ ನಡೆಸುತ್ತಿಲ್ಲ. ಜನರ ಸೇವೆಗಾಗಿ ನಡೆಸುತಿದ್ದಾರೆ. ಸಮಾಜಕ್ಕೆ ಕೊಡುಗೆ ಕೊಡಲು ಮುಂದೆ ಬಂದರೆ ಪ್ರೋತ್ಸಾಹ ಕೊಡುವ ಕೆಲಸ ನಮ್ಮದ್ದು. ಇಂದು ಜನರಿಗೆ ಆರೋಗ್ಯ ಸೇವೆ ನೀಡಬೇಕಾದರೆ ಸರ್ಕಾರದೊಂದಿಗೆ ಖಾಸಗಿಯವರ ಸಹಕಾರ ಕೂಡ ಅತ್ಯವಶ್ಯಕವಾಗಿದೆ ಎಂದರು.

ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌, ನಾಂದೇಡ್‌ನ ಕಾರ್‌ಸೇವಾದ ಬಾಬಾ ಬಲವಿಂದರಸಿಂಗ್‌, ಸಂಸ್ಥೆಯ ಅಧ್ಯಕ್ಷ ಡಾ. ಬಲಬೀರ್‌ಸಿಂಗ್‌, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಭೀಮರಾವ್‌ ಪಾಟೀಲ್‌, ಡಾ. ಚಂದ್ರಶೇಖರ ಪಾಟೀಲ್‌, ಮಾಜಿ ಶಾಸಕರಾದ ರಾಜಶೇಖರ ಪಾಟೀಲ್‌, ಬಂಡೆಪ್ಪ ಖಾಶೆಂಪೂರ, ವಿಜಯಸಿಂಗ್‌, ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್‌, ಟ್ರಸ್ಟಿಗಳಾದ ನಾನಕಸಿಂಗ್‌, ಮನಪ್ರೀತಸಿಂಗ್‌, ಗುರುಚರಣಸಿಂಗ್‌, ನನಿಹಾಲ್‌ಸಿಂಗ್‌, ಸಿ. ಮನೋಹರ, ಪುನೀತಸಿಂಗ್‌, ಪವೀತಸಿಂಗ್‌, ನಿಷಾ ಕೌರ್‌ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿಸೇರಿದಂತೆ ವೈದ್ಯರು ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios