Asianet Suvarna News Asianet Suvarna News

Grama Vastavya: ಸ್ಮಶಾನ ಸಮಸ್ಯೆಗೆ ಐದೇ ನಿಮಿಷದಲ್ಲಿ ಸಚಿವ ಅಶೋಕ್‌ ಪರಿಹಾರ!

ಎಚ್‌.ಡಿ.ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮದ ಸ್ಮಶಾನಕ್ಕೆ ಒಂದು ಎಕರೆ ಜಮೀನನ್ನು ಸಚಿವ ಅಶೋಕ್‌ ಸ್ಥಳದಲ್ಲಿಯೇ ಮಂಜೂರು ಮಾಡಿದರು. ಕೆಂಚನಹಳ್ಳಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದರು.

Revenue Minister R Ashok Grama Vastavya In Hd Kote gvd
Author
First Published Nov 20, 2022, 12:30 PM IST

ಭೀಮನಕೊಲ್ಲಿ (ನ.20): ಎಚ್‌.ಡಿ.ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮದ ಸ್ಮಶಾನಕ್ಕೆ ಒಂದು ಎಕರೆ ಜಮೀನನ್ನು ಸಚಿವ ಅಶೋಕ್‌ ಸ್ಥಳದಲ್ಲಿಯೇ ಮಂಜೂರು ಮಾಡಿದರು. ಕೆಂಚನಹಳ್ಳಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ, ಸಾರ್ವಜನಿಕರು ಸ್ಮಶಾನದ ಜಾಗಕ್ಕೆ ಬೇಡಿಕೆ ಇಟ್ಟರು. ಕೂಡಲೇ ಸ್ಮಶಾನಕ್ಕಾಗಿ ಬೇಕಾದ ಒಂದು ಎಕರೆ ಜಾಗವನ್ನು ಸ್ಥಳದಲ್ಲಿಯೇ ಮಂಜೂರು ಮಾಡಿಸಿದರು. ವೇದಿಕೆಯಲ್ಲಿಯೇ ಜಾಗ ಮಂಜೂರು ಆದೇಶದ ಪ್ರತಿಯನ್ನು ಸಚಿವರು ಗ್ರಾಮಸ್ಥರಿಗೆ ಹಸ್ತಾಂತರಿಸಿದರು. ಇದರಿಂದಾಗಿ ಅಂತ್ಯಸಂಸ್ಕಾರಕ್ಕೆ ಸ್ಥಳ ಇಲ್ಲದೆ ವರ್ಷಗಳಿಂದ ಪರದಾಡುತ್ತಿದ್ದ ಜನರ ಸಮಸ್ಯೆ ಐದೇ ನಿಮಿಷದಲ್ಲೇ ಪರಿಹಾರವಾಯಿತು.

ಕಾಯಂ ಪಿಡಿಒ ನೇಮಕ: ಎನ್‌.ಬೇಗೂರು ಗ್ರಾ.ಪಂ.ಗೆ ಕಾಯಂ ಪಿಡಿಒ ಆದೇಶವನ್ನು ಸಚಿವರು ನೀಡಿದರು. ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ, ಗ್ರಾಮದ ಪ್ರಸನ್ನ ಎಂಬುವರು ನಮ್ಮ ಗ್ರಾ.ಪಂ.ಗೆ ಪ್ರತ್ಯೇಕ ಪಿಡಿಒ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು. ಈ ವೇಳೆ, ಸ್ಥಳದಲ್ಲಿಯೇ ಇದ್ದ ಜಿ.ಪಂ. ಸಿಇಒ ಬಿ.ಆರ್‌.ಪೂರ್ಣಿಮಾ ಅವರಿಗೆ ಕಾಯಂ ಪಿಡಿಒ ನೀಡುವಂತೆ ಸೂಚಿಸಿದರು. ಬುಧವಾರದ ಒಳಗೆ ಆದೇಶ ಪ್ರತಿ ನೀಡುವುದಾಗಿ ಪೂರ್ಣಿಮಾ ಅವರು ಭರವಸೆ ನೀಡಿದರು.

Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್

ಇದೇ ವೇಳೆ, ಕೆಂಚನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಕಾಂಪೌಂಡ್‌ ನಿರ್ಮಾಣ, ನರೇಗಾ ಯೋಜನೆಯಡಿ ಕಾಂಪೌಂಡ್‌ ನಿರ್ಮಾಣಕ್ಕೆ ಸೂಚನೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಈ ಮಧ್ಯೆ, ಅಂಬೇಡ್ಕರ್‌ ಭವನ, ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ಕಾಂಕ್ರಿಟ್‌ ರಸ್ತೆ ನಿರ್ಮಾಣ, ಎನ್‌. ಬೇಗೂರು ಗ್ರಾ.ಪಂ. ವ್ಯಾಪ್ತಿಗೆ ಪೊಲೀಸ್‌ ಉಪಠಾಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಸಚಿವರ ಮುಂದಿಟ್ಟರು.

ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ: ಅಶೋಕ್‌ ಅವರು ಎಚ್‌.ಡಿ. ಕೋಟೆ ತಾಲೂಕು ಕೆಂಚನಹಳ್ಳಿ ಸಮೀಪದ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ ಮಾಡಿದರು. ಬೆಳಗ್ಗೆಯಿಂದ ಎಂ.ಬೇಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವರು, ಸಂಜೆ ಕೆಂಚನಹಳ್ಳಿ ಗ್ರಾಮಕ್ಕೆ ಆಗಮಿಸಿ, ಗ್ರಾಮಸಭೆ ನಡೆಸಿದರು. ಸಭೆಗೂ ಮುನ್ನ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ನಂತರ, ಗ್ರಾಮಸ್ಥರೊಡನೆ ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಿದರು. ಬಳಿಕ, ಗಿರಿಜನರೊಡನೆ ಸಂವಾದ ನಡೆಸಿದರು. ನಂತರ, ಭೋಜನ ಸ್ವೀಕರಿಸಿ, ಶಾಲೆಯಲ್ಲಿ ವಿಶ್ರಾಂತಿಗೆ ಜಾರಿದರು.

ಗಿರಿಜನರಲ್ಲಿ ಹೊಸ ಭರವಸೆಯ ಬೆಳಕು: ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ಪ್ರದೇಶ ಎಂದೇ ಪರಿಗಣಿತವಾದ ಎಚ್‌.ಡಿ. ಕೋಟೆ ತಾಲೂಕಿನ ಮನೆ ಬಾಗಿಲಿಗೆ ಸರ್ಕಾರವೇ ಬಂದಿದ್ದು ಹಾಡಿಯ ನಿವಾಸಿಗಳಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿತು. ಎಚ್‌.ಡಿ. ಕೋಟೆ ತಾಲೂಕಿನ ಭೀಮನಕೊಲ್ಲಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಪಾಲ್ಗೊಂಡು ಮತ್ತು ವಿವಿಧ ಸವಲತ್ತು ವಿತರಿಸಿ ಜನರಲ್ಲಿ ಸರ್ಕಾರದ ಬಗೆಗಿನ ಗೌರವ ಮತ್ತು ಭರವಸೆ ಮೂಡುವಂತೆ ಮಾಡಿದರು.

ರೈತರ ಮೇಲೆ ಭೂ ಒತ್ತುವರಿ ಕೇಸ್‌ ಹಾಕಲ್ಲ: ಸಚಿವ ಅಶೋಕ್‌

ಅರಣ್ಯ ಒತ್ತುವರಿ, ಪಾಲು ಪಡೆಯಲು ಪೋಡಿನ ಸಮಸ್ಯೆ, ಹಲವು ತಿಂಗಳೇ ಕಳೆದರೂ ಆಗದ ಖಾತೆ, ಬಾರದ ಮಾಸಾಶನ ಇವೇ ಮುಂತಾದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ದೊರೆತರೆ ಯಾರಿಗೆ ಸಂತೋಷವಾಗದು? ಕಂದಾಯ ಇಲಾಖೆಯಲ್ಲಿ, ನಕ್ಷೆಗಳಲ್ಲಿ ಹೆಸರೇ ಇಲ್ಲದ ಹಾಡಿಗಳು, ಹಟ್ಟಿಗಳಿಗೆ ಹೊಸದಾಗಿ ನಾಮಕರಣ, ಕಂದಾಯ ಗ್ರಾಮವಾಗಿ ಘೋಷಣೆ, ವಿವಿಧ ಸೌಲಭ್ಯಗಳ ವಿತರಣೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಚಾಲನೆ ನೀಡುವ ಮೂಲಕ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಅರ್ಥ ನೀಡಿದರು. ಒಂದಿಡೀ ದಿನ ತಮ್ಮೂರಿಗೆ ಬಂದು, ತಮ್ಮೊಡನೆ ಇದ್ದು, ಅಲ್ಲಿ ಊಟೋಪಚಾರ ಮಾಡಿ, ಅಲ್ಲಿ ವಾಸ್ತವ್ಯ ಹೂಡಿ ತಮ್ಮೆಲ್ಲಾ ಕಷ್ಟಸುಖ ಕೇಳಿ ಪರಿಹಾರ ಸೂಚಿಸಿದ ಸಚಿವ ಅಶೋಕ್‌ ಅವರ ತಾಳ್ಮೆಯ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತವಾಯಿತು.

Follow Us:
Download App:
  • android
  • ios