ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದಿಂದಲೇ ನಿರ್ವಹಣೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಮುಂದೆ ಮತ್ತೆ ನಾಲ್ಕು ವಿಮಾನ ನಿಲ್ದಾಣಗಳನ್ನು ರಾಜ್ಯದಿಂದಲೇ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಮಾಣಕ್ಕೂ ನಿರ್ಧಾರ ಮಾಡಲಾಗಿದೆ. ಜತೆಗೆ ರಾಜ್ಯದಲ್ಲಿ ವಿವಿಧ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಏರ್‌ಲೈನ್ಸ್‌ ಸ್ಥಾಪನೆಗೂ ಚಿಂತನೆ ನಡೆಸಿದ್ದೇವೆ: ಸಚಿವ ಎಂ.ಬಿ.ಪಾಟೀಲ್‌ 

ಬೆಂಗಳೂರು(ಸೆ.02):  ‘ರಾಜ್ಯದಲ್ಲಿನ ವಿವಿಧ ನಗರಗಳ ನಡುವೆ ಉತ್ತಮ ವಿಮಾನಯಾನ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದ ಮಾಲಿಕತ್ವದಲ್ಲೇ ಪ್ರತ್ಯೇಕ ಏರ್‌ಲೈನ್ಸ್‌ ಸ್ಥಾಪನೆ ಮಾಡುವ ಬಲವಾದ ಚಿಂತನೆಯಿದೆ. ವಿಮಾನಗಳ ಖರೀದಿ ಹಾಗೂ ನಿರ್ವಹಣೆಗೆ ತಗಲುವ ವೆಚ್ಚದ ಮಾಹಿತಿ ಕಲೆ ಹಾಕಿದ್ದೇವೆ’ ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದಿಂದಲೇ ನಿರ್ವಹಣೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಮುಂದೆ ಮತ್ತೆ ನಾಲ್ಕು ವಿಮಾನ ನಿಲ್ದಾಣಗಳನ್ನು ರಾಜ್ಯದಿಂದಲೇ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಮಾಣಕ್ಕೂ ನಿರ್ಧಾರ ಮಾಡಲಾಗಿದೆ. ಜತೆಗೆ ರಾಜ್ಯದಲ್ಲಿ ವಿವಿಧ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಏರ್‌ಲೈನ್ಸ್‌ ಸ್ಥಾಪನೆಗೂ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಶಿವಮೊಗ್ಗ ವಿಮಾನ ಸಂಚಾರಕ್ಕೆ ಸಬ್ಸಿಡಿ ಘೋಷಿಸಿದ ರಾಜ್ಯ ಸರ್ಕಾರ

ಈ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಬಗ್ಗೆ ಈಗಾಗಲೇ ತಮಗೆ ಆಪ್ತರೂ ಆದ ಸ್ಟಾರ್‌ ಏರ್‌ಲೈನ್ಸ್‌ ಮಾಲಿಕರು ಹಾಗೂ ಸಂಸ್ಥಾಪಕರ ಜತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.ವಿಮಾನಗಳ ಖರೀದಿ ಹಾಗೂ ನಿರ್ವಹಣೆಗೆ ಎಷ್ಟುಅನುದಾನ ಬೇಕಾಗುತ್ತದೆ ಎಂದು ಚರ್ಚೆ ನಡೆಸಿದ್ದೇನೆ. ಪ್ರತಿ ಒಂದು ಬ್ರ್ಯಾಂಡೆಡ್‌ ವಿಮಾನ ಖರೀದಿಗೆ 200 ಕೋಟಿ ರು. ವೆಚ್ಚ ತಗಲುತ್ತದೆ. ಮೂರು ವಿಮಾನ ಖರೀದಿಗೆ 600 ಕೋಟಿ ರು. ವೆಚ್ಚ ತಗುಲುತ್ತದೆ. ವಿಮಾನಗಳನ್ನು ಗುತ್ತಿಗೆಗೆ ತೆಗೆದುಕೊಂಡರೆ ಇನ್ನೂ ಕಡಿಮೆ ಮೊತ್ತಕ್ಕೆ ಸಿಗಲಿದೆ. 600 ಕೋಟಿ ರು. ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತವಲ್ಲ. ಹೀಗಾಗಿ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಇವು ರಾಜ್ಯದ ವಿವಿಧ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿಯೇ ಹೊರತು ಮುಖ್ಯಮಂತ್ರಿಗಳು ಹಾಗೂ ಕೈಗಾರಿಕೆ ಸಚಿವರಿಗೆ ಉಚಿತ ಪ್ರಯಾಣಕ್ಕೆ ಅಲ್ಲ. ಇದರ ಜತೆಗೆ ರಾಜ್ಯದ ನಾಲ್ಕು ಕಡೆ ಹೆಲಿಪೋಟ್ಸ್‌ರ್‍, ಹೆಲಿಸ್ಟ್ರಿಪ್‌ ಅಭಿವೃದ್ಧಿಗೂ ಕ್ರಮ ಕೈಗೊಂಡಿದ್ದೇವೆ. ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳ ಹಾಗೂ ಹಂಪಿಯಂತಹ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡಲು ಇವು ನೆರವಾಗಲಿವೆ ಎಂದರು.

ನಗರಗಳ ನಡುವೆ ಸಂಪರ್ಕ ಅನುಕೂಲ:

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಕರ್ನಾಟಕ ಸರ್ಕಾರದ ಬಳಿ ಸ್ವಂತ ಏರ್‌ಲೈನ್ಸ್‌ ಇದ್ದರೆ ರಾಜ್ಯದ ಒಳಗೆ ಸ್ಥಳೀಯವಾಗಿ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ. ಹೀಗಾಗಿ ಉಡಾನ್‌ ಅಡಿ ಮೈಸೂರು-ಬೆಂಗಳೂರು, ಬೆಂಗಳೂರು-ಕಲಬುರಗಿ, ಮಂಗಳೂರು-ಬೆಂಗಳೂರು ಮಾರ್ಗಗಳಲ್ಲಿ ರಾಜ್ಯದ ಏರ್‌ಲೈನ್ಸ್‌ ವಿಮಾನಗಳನ್ನು ಹಾರಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಚಿವರು ಏರ್‌ ಇಂಡಿಯಾ ಮಾಜಿ ಹಿರಿಯ ಅಧಿಕಾರಿಯೊಂದಿಗೆ ರೂಪರೇಷೆಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಿಂದಲೇ ವಿಮಾನ ನಿಲ್ದಾಣ ನಿರ್ವಹಣೆ:

ರಾಜ್ಯದಲ್ಲಿನ ವಿಮಾನ ನಿಲ್ದಾಣಗಳನ್ನು ಈ ಹಿಂದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡುತ್ತಿದ್ದೆವು. ಉದಾ: ಕಲಬುರಗಿಯಲ್ಲಿ ನಾವು 1 ಸಾವಿರ ಕೋಟಿ ರು. ವೆಚ್ಚ ಮಾಡಿ ಭೂಸ್ವಾಧೀನ, ಟರ್ಮಿನಲ್‌ ನಿರ್ಮಾಣ, ರನ್‌ವೇನಂತಹ ಮೂಲಸೌಕರ್ಯ ಒದಗಿಸಿದ್ದೇವೆ. ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿದ್ದೇವೆ. ಇದೀಗ ನಮಗೆ ವಿಮಾನ ನಿಲ್ದಾಣದ ಮೇಲೆ ಯಾವ ಹಕ್ಕೂ ಇಲ್ಲ. ಅವರು ನಮ್ಮ ಅಭಿಪ್ರಾಯವನ್ನೂ ಕೇಳಲ್ಲ. ಹೀಗಿದ್ದರೂ ಪ್ರತಿ ವರ್ಷ 5-8 ಕೋಟಿ ರು. ನಿರ್ವಹಣೆ ವೆಚ್ಚವನ್ನು ರಾಜ್ಯ ಸರ್ಕಾರವೇ ನೀಡಬೇಕು. ಹೀಗಾಗಿ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ನಾವು ‘ಆಪರೇಷನ್‌ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್‌

2024ರ ಏಪ್ರಿಲ್‌ ಒಳಗಾಗಿ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಮುಗಿಯುತ್ತದೆ. ಇದೇ ವೇಳೆ ಬಳ್ಳಾರಿ, ಕಾರವಾರ, ಹಾಸನ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿಯೂ ನಡೆಯುತ್ತಿವೆ. ಈ ನಿಲ್ದಾಣಗಳನ್ನೂ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದರು.

ತದಡಿಯಲ್ಲಿ ಕೆಎಸ್‌ಐಡಿಸಿಯಿಂದ ಪೋರ್ಟ್‌ ಮಾಡಬೇಕು ಎಂಬ ಪ್ರಸ್ತಾವನೆಯಿತ್ತು. ಸೂಕ್ಷ್ಮ ವಲಯದ ಪ್ರದೇಶವಾಗಿರುವುದರಿಂದ ಅನುಮತಿ ದೊರೆತಿಲ್ಲ. ಹೀಗಾಗಿ ಇಕೋ ಟೂರಿಸಂಗೆ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.