Asianet Suvarna News Asianet Suvarna News

4000 ನೂತನ ಅಂಗನವಾಡಿ ತೆರೆಯಲು ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಹೊಸದಾಗಿ ನಾಲ್ಕು ಸಾವಿರ ಅಂಗನವಾಡಿ ಆರಂಭಿಸಲಾಗುತ್ತಿದೆ ಮತ್ತು ರೈತ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

Government has decided to open 4000 new Anganwadis gvd
Author
Bangalore, First Published Aug 26, 2022, 12:17 PM IST

ರಾಣಿಬೆನ್ನೂರು (ಆ.26): ರಾಜ್ಯದಲ್ಲಿ ಹೊಸದಾಗಿ ನಾಲ್ಕು ಸಾವಿರ ಅಂಗನವಾಡಿ ಆರಂಭಿಸಲಾಗುತ್ತಿದೆ ಮತ್ತು ರೈತ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಗುರುವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ನಗರದ ಬಿ.ಟಿ. ಪಾಟೀಲ ಮೈದಾನದಲ್ಲಿ ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅರುಣಕುಮಾರ ಪೂಜಾರ ಜನ್ಮದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಗ್ರಾಮೀಣ ಭಾಗದಲ್ಲಿ ಕಮ್ಮಾರ, ಬಡಿಗೇರ, ನೇಕಾರ, ಕುಂಬಾರ, ವಿಶ್ವಕರ್ಮ ಮುಂತಾದ ಕರಕುಶಲ ವೃತ್ತಿ ಮಾಡುವವರಿಗೆ ತಲಾ .50 ಸಾವಿರ ಸಹಾಯ ಧನ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

20 ಕುರಿ ಯೋಜನೆ: ಕಾಡು, ಮೇಡುಗಳಲ್ಲಿ ಕುರಿ ಕಾಯುವ ಕುರಿಗಾಹಿಗಳ ಪ್ರತಿ ಸಂಘಕ್ಕೆ 20 ಕುರಿಗಳು ಹಾಗೂ ಒಂದು ಟಗರು ನೀಡುವ ಯೋಜನೆಯನ್ನು ನವೆಂಬರ್‌ ತಿಂಗಳಿನಲ್ಲಿ ಪ್ರಾರಂಭಿಸುತ್ತೇವೆ. ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಜನರಿಗೆ ಜಗಜೀವನರಾಂ ಹೆಸರಿನಲ್ಲಿ ಪ್ರತಿ ತಾಲೂಕಿನಲ್ಲಿ ಯುವಕರಿಗೆ ಕೆಲಸ ಕೊಡುವ ಯೋಜನೆ ಹಾಗೂ ಸ್ವಾಮಿ ವಿವೇಕಾನಂದರ ಹೆಸರಿಯಲ್ಲಿ ಪ್ರತಿ ಗ್ರಾಮದ ಒಂದು ಯುವ ಸಂಘಕ್ಕೆ ಬ್ಯಾಂಕಿನ ವ್ಯವಸ್ಥೆ ಮೂಲಕ .10 ಲಕ್ಷ ನೀಡುವ ಯೋಜನೆ ರೂಪಿಸಿದ್ದು ಅದರಲ್ಲಿ ಸರ್ಕಾರ .1.5 ಲಕ್ಷ ಸಹಾಯ ಧನ ನೀಡಲಿದೆ. ಈ ಸಂಘಗಳ ಉತ್ಪಾದನೆಗಳಿಗೆ ಸೂಕ್ತ ಮಾರುಕಟ್ಟೆಒದಗಿಸುತ್ತೇವೆ. 

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾ: ಸಿಎಂ ಬೊಮ್ಮಾಯಿ ಕಿಡಿ

ನಾನು ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಿದ್ದು, ಇದರಿಂದ ಹಾಲು ಸಂಗ್ರಹ ಪ್ರಮಾಣ ಒಂದು ಲಕ್ಷ ಲೀಟರ್‌ನಿಂದ 1.80 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ರಾಣಿಬೆನ್ನೂರು ಮತ್ತು ಹಾವೇರಿ ಮಧ್ಯದಲ್ಲಿ ಕೈಗಾರಿಕೆ ಟೌನ್‌ಶಿಪ್‌ ಮಾಡಿ ಒಂದು ಸಾವಿರ ಎಕರೆ ಜಾಗದಲ್ಲಿ 15 ಸಾವಿರ ನೌಕರರಿಗೆ ಉದ್ಯೋಗಾವಕಾಶ ನೀಡಲಾಗುವುದು. ಉತ್ತರ ಕರ್ನಾಟಕದ ಹೆಬ್ಬಾಗಿಲಾದ ರಾಣಿಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆ ಬಳಿ .5 ಕೋಟಿ ವೆಚ್ಚದಲ್ಲಿ ಬೃಹತ್‌ ಹೆಬ್ಬಾಗಿಲು ನಿರ್ಮಾಣ ಮಾಡಲಾಗುವುದು. ಹಿಂದೆ ಜಿಲ್ಲೆಯಲ್ಲಿ ಮಹಾನ್‌ ನಾಯಕರುಗಳಿದ್ದರೂ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜು ಗದಗ ಪಾಲಾಯಿತು. 2019ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಗೆ ಮೆಡಿಕಲ್‌ ಕಾಲೇಜು ದೊರಕಿದ್ದಲ್ಲದೆ ಈ ವರ್ಷದಿಂದ ಪ್ರವೇಶಾತಿ ಕೂಡ ಪ್ರಾರಂಭವಾಗಿವೆ ಎಂದು ಹೇಳಿದರು.

ಸವಾಲು: ಸಾಮಾಜಿಕ ನ್ಯಾಯದ ಬಗ್ಗೆ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಬದಲಾಗಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಕೈಗೆ ಕೆಲಸ ಬುದ್ಧಿಗೆ ವಿದ್ಯೆ ನೀಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳಿಗೆ ಇಂತಹ ಬದ್ಧತೆಯಿದೆ. ನೀವು ಯಾರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದೀರಿ? ರೈತರಿಗೆ ಕೊಟ್ಟಿರಾ, ಮಹಿಳೆಯರಿಗಾ, ಯುವಕರಿಗೆ ಕೊಟ್ಟಿರಾ?... ನಾವು ಮಾಡಿದ ಕಾರ್ಯಕ್ರಮ, ನೀವು ಮಾಡಿದ ಕಾರ್ಯಕ್ರಮಗಳನ್ನು ಜನರ ಮುಂದಿಡೋಣ, ಜನರೇ ತೀರ್ಮಾನ ಮಾಡಲಿ ಎಂದು ವಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ಸವಾಲು ಹಾಕಿದರು.

ಸ್ಥಳೀಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್‌ ಸಾನ್ನಿಧ್ಯ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರುಣಕುಮಾರ ಪೂಜಾರ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಹರಿಹರ ವೀರಶೈವ ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ ಮತ್ತಿತರರಿದ್ದರು.

ಕೈ ಮುಗೀತೇನೆ, ನನ್ನ ವಿರುದ್ಧ ಕೇಸ್‌ ಹಾಕಿ: ಕೆಂಪಣ್ಣ

ಮತ್ತೆ ಅರುಣಕುಮಾರನನ್ನೇ ಗೆಲ್ಲಿಸಿ: ಅರುಣಕುಮಾರ ನನ್ನ ಕಿರಿಯ ಸಹೋದರನಂತಿದ್ದು ಒಬ್ಬ ಕ್ರಿಯಾಶೀಲ ಯುವಕ ಹಾಗೂ ಜನೋಪಯೋಗಿ ಶಾಸಕನಾಗಿದ್ದು ರಾಣಿಬೆನ್ನೂರು ರಾಜಕುಮಾರ. ಉಪ ಚುನಾವಣೆಯಲ್ಲಿ ಇವನಿಗೆ ಟಿಕೆಟ್‌ ನೀಡಿದಾಗ ಸಣ್ಣ ಹುಡುಗನಿಗೆ ನೀಡಿದ್ದಾಗಿ ಮೂದಲಿಸಿದ್ದರು. ಆದರೆ, ಕ್ಷೇತ್ರದ ಜನತೆ ಆಶೀರ್ವಾದಿಂದ ಶಾಸಕನಾಗಿ ಅರುಣಕುಮಾರ ಆಯ್ಕೆಯಾಗುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾನೆ. ಮುಂದಿನ ದಿನಗಳಲ್ಲಿ ಇವನನ್ನೇ ಶಾಸಕನನ್ನಾಗಿ ಆಯ್ಕೆ ಮಾಡಬೇಕು ಎಂದರು.

Follow Us:
Download App:
  • android
  • ios