ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ ನೀಡಲು ಸರ್ಕಾರ ಅನುಮೋದನೆ, 50ಸಾವಿರ ಉದ್ಯೋಗ ಸೃಷ್ಟಿ
ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿ ಸೇರಿದಂತೆ ವಿವಿಧ ಕಂಪನಿಗಳ 75,393.57 ಕೋಟಿ ರು. ಮೊತ್ತದ 18 ಯೋಜನೆಗಳಿಗೆ ‘ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ’ ಅನುಮೋದನೆ ನೀಡಿದೆ.
ಬೆಂಗಳೂರು (ಮಾ.21) : ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿ ಸೇರಿದಂತೆ ವಿವಿಧ ಕಂಪನಿಗಳ 75,393.57 ಕೋಟಿ ರು. ಮೊತ್ತದ 18 ಯೋಜನೆಗಳಿಗೆ ‘ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ’ ಅನುಮೋದನೆ ನೀಡಿದೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಾಕ್ಸ್‌ಕಾನ್(Foxconn) ಸೇರಿದಂತೆ 10 ಹೊಸ ಯೋಜನೆಗಳು, ಐದು ವಿಸ್ತರಣೆ ಯೋಜನೆಗಳು ಮತ್ತು ಮೂರು ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 18 ಯೋಜನೆಗಳಿಂದ 77,606 ಜನರಿಗೆ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ. ಫಾಕ್ಸ್‌ಕಾನ್ ಸಂಸ್ಥೆಯ 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ 8 ಸಾವಿರ ರು. ಕೋಟಿ ರು. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ. ಫಾಕ್ಸ್‌ಕಾನ್‌ಗೆ ಬೆಂಗಳೂರಿನ ದೇವನಹಳ್ಳಿ(Devanahalli bengaluru) ಬಳಿ 300 ಎಕರೆ ಜಮೀನು ನೀಡಲು ಸರ್ಕಾರ ಅನುಮತಿ ನೀಡಿದೆ. 15 ದಿನಗಳ ಹಿಂದೆ ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿತ್ತು.
ಐಫೋನ್ ಘಟಕದ ಹೆಸರಲ್ಲಿ ಕಿವಿ ಮೇಲೆ ಬಿಜೆಪಿ ಹೂ: ಕಾಂಗ್ರೆಸ್ ಟೀಕೆ
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರೀನ್ ಹೈಡ್ರೋಜನ್(Green hydrogen), ಎಥನಾಲ್ ಉತ್ಪಾದನೆ, ಪವನ ವಿದ್ಯುತ್ ಸ್ಥಾವರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಲೀಥಿಯಂ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವಾಹನಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ರಾಜ್ಯಕ್ಕೆ ಇಷ್ಟುದೊಡ್ಡ ಮೊತ್ತದ ಬಂಡವಾಳ ಹರಿದುಬಂದಿರುವುದು ಸಂತಸ ತಂದಿದೆ. ಈ ಯೋಜನೆಗಳು ರಾಜ್ಯದ ಕೈಗಾರಿಕಾ ಪ್ರಗತಿಗೆ ಮತ್ತಷ್ಟುವೇಗ ನೀಡಲಿವೆ. ರಾಷ್ಟ್ರದ ಉತ್ಪಾದನಾ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ(Murugesh nirani) ಮಾತನಾಡಿ, ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಮತ್ತು ಉದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಗೆ ಈ ಹೂಡಿಕೆಗಳು ಸಾಕ್ಷಿಯಾಗಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕಬ್ಬು ಬೆಳೆಯುವುದರಲ್ಲಿ ದೇಶದಲ್ಲಿ ಮೂರನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿ ಎಥನಾಲ್ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಹಸಿರು ಇಂಧನಕ್ಕೆ ಸಂಬಂಧಿಸಿದ ಹೂಡಿಕೆಗಳನ್ನು ಅನುಮೋದಿಸಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬೃಹತ್ ಐಫೋನ್ ಘಟಕ: ತೈವಾನ್ ಮೂಲದ ಫಾಕ್ಸ್‌ಕಾನ್ ಜತೆ ಸಿಎಂ ಬೊಮ್ಮಾಯಿ ಸಮ್ಮುಖ ಒಪ್ಪಂದ
ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.