ಬೆಂಗಳೂರು(ಆ.05): ರಾಜ್ಯ ಸರ್ಕಾರ ನಾಲ್ಕು ವರ್ಷದ ಬಳಿಕ ಖಾಸಗಿ ಸ್ಟೇಜ್‌ (ಹಂತ) ಕ್ಯಾರಿಯೇಜ್‌ ಬಸ್‌ಗಳ ಪ್ರಯಾಣ ದರ ಪರಿಷ್ಕರಿಸಿದ್ದು, ಇದೇ ಮೊದಲ ಬಾರಿಗೆ ಗರಿಷ್ಠ ದರ ನಿಗದಿ ಮಾಡಿದೆ.
ಡೀಸೆಲ್‌ ದರ ಏರಿಕೆ, ವಾಹನಗಳ ಬಿಡಿಭಾಗ ದರ ಹೆಚ್ಚಳ, ನೌಕರರ ವೇತನ ಹೆಚ್ಚಳ ಸೇರಿದಂತೆ ಖರ್ಚು-ವೆಚ್ಚಗಳು ಏರಿಕೆಯಾಗಿರುವುದರಿಂದ ದರ ಪರಿಷ್ಕರಣೆ ಮಾಡುವಂತೆ ಬಸ್‌ಗಳ ಮಾಲಿಕರು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದವು. ಈಗ ದರ ಪರಿಷ್ಕರಣೆ ಮಾಡಿ ಆದೇಶಿಸಿದೆ.

ಈ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳು ಮಹಾನಗರ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ನೀಡುತ್ತಿವೆ. ಪ್ರಮುಖವಾಗಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚು ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳ ಕಾರ್ಯಾಚರಣೆ ಮಾಡುತ್ತಿವೆ.

ಕೊರೋನಾ ಕಾಟ: 'ಖಾಸಗಿ ಬಸ್‌ಗಳ ಸಮಸ್ಯೆ ಕೇಳೋರಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ'

ಪರಿಷ್ಕೃತ ದರ:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು) ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ವ್ಯಾಪ್ತಿಯಲ್ಲಿ ಸಂಚರಿಸುವ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳಿಗೆ ಮೊದಲ 2 ಕಿ.ಮೀ.ಗೆ (ಸ್ಟೇಜ್‌ 1) ಕನಿಷ್ಠ ದರ 8 ರು. ನಂತರದ 2 ಕಿ.ಮೀ.ಗೆ 5.75 ರು. ಹಾಗೂ ನಂತರದ ಪ್ರತಿ 2 ಕಿ.ಮೀ. 3.50 ರು. ದರ ನಿಗದಿ ಮಾಡಲಾಗಿದೆ. ಅಂತೆಯೆ ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ಮೊದಲ 6 ಕಿ.ಮೀ. 13.75 ರು. ಹಾಗೂ ನಂತರದ ಪ್ರತಿ 2 ಕಿ.ಮೀ.ಗೆ 2 ರು. ದರ ನಿಗದಿಪಡಿಸಲಾಗಿದೆ.

ಎಸಿ ವಾಹನಗಳಿಗೆ ಮೊದಲ 2 ಕಿ.ಮೀ.ಗೆ 13.50 ರು. ಹಾಗೂ ನಂತರದ ಪ್ರತಿ 2 ಕಿ.ಮೀ.ಗೆ 5 ರು. ಹಾಗೂ ನಾನ್‌ ಎಸಿ ಬಸ್‌ಗಳಿಗೆ ಕನಿಷ್ಠ ದರದ ಜೊತೆಗೆ ನಂತರ ಪ್ರತಿ 2.ಕಿ.ಮೀ.ಗೆ 2.30 ರು. ದರ ನಿಗದಿ ಮಾಡಲಾಗಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ ಸಂಚರಿಸುವ ಸ್ಟೇಜ್‌ ಕ್ಯಾರಿಯೇಜ್‌ ಸಾಮಾನ್ಯ ಬಸ್‌ಗಳಿಗೆ ಮೊದಲ ಸ್ಟೇಜ್‌ 6.5 ಕಿ.ಮೀ.ಗೆ ಕನಿಷ್ಠ ದರ 9.50 ರು. ಹಾಗೂ ನಂತರದ ಪ್ರತಿ ಕಿ.ಮೀ.ಗೆ 1 ರು. ದರ ನಿಗದಿ ಪಡಿಸಿದೆ. ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ಕನಿಷ್ಠ ದರ 10 ರು. ಹಾಗೂ ನಂತರ ಪ್ರತಿ ಕಿ.ಮೀ,ಗೆ 1.10 ರು. ನಿಗದಿಗೊಳಿಸಲಾಗಿದೆ. ಸೆಮಿ ಲಕ್ಸುರಿ ಅಥವಾ ಡಿಲೆಕ್ಸ್‌ ಬಸ್‌ಗಳಿಗೆ ಕನಿಷ್ಠ ದರ 11.50 ರು. ಹಾಗೂ ನಂತರದ ಪ್ರತಿ ಕಿ.ಮೀ.ಗೆ 1.25 ರು., ಲಕ್ಸುರಿ ಅಥವಾ ಸೂಪರ್‌ ಡೀಲಕ್ಸ್‌ ಬಸ್‌ಗಳಿಗೆ ಕನಿಷ್ಠ ದರ 13 ರು. ಹಾಗೂ ನಂತರದ ಪ್ರತಿ ಕಿ.ಮೀ.ಗೆ 1.50 ರು., ಹೈಟೆಕ್‌ ಬಸ್‌ಗಳಿಗೆ ಕನಿಷ್ಠ ದರ 14 ರು. ಹಾಗೂ ನಂತರ ಪ್ರತಿ ಕಿ.ಮೀ.ಗೆ 1.60 ರು. ದರ ನಿಗದಿಪಡಿಸಲಾಗಿದೆ.

ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳಿಗೆ ಗರಿಷ್ಠ ದರ ನಿಗದಿ ಸ್ವಾಗತಾರ್ಹ. ಆದರೆ, ದರ ಪರಿಷ್ಕರಣೆಗೆ ಇದು ಸೂಕ್ತ ಸಮಯವಲ್ಲ. ಕೊರೋನಾ ಭೀತಿಯಿಂದ ಜನರು ಬಸ್‌ ಏರಲು ಹಿಂದೇಟು ಹಾಕುತ್ತಿದ್ದಾರೆ. ಈ ದರ ಪರಿಷ್ಕರಣೆ ಬದಲು ರಸ್ತೆ ತೆರಿಗೆ ಸೇರಿದಂತೆ ಇತರೆ ತೆರಿಗೆಗಳ ವಿನಾಯಿತಿ ನೀಡಿದ್ದರೆ ಸಂಕಷ್ಟದಲ್ಲಿರುವ ಬಸ್‌ ಮಾಲೀಕರಿಗೆ ಅನುಕೂಲವಾಗುತ್ತಿತ್ತು ಎಂದು ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್‌ ಶರ್ಮಾ ಅವರು ತಿಳಿಸಿದ್ದಾರೆ.