ಕೊರೋನಾ ಕಾಟ: 'ಖಾಸಗಿ ಬಸ್‌ಗಳ ಸಮಸ್ಯೆ ಕೇಳೋರಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ'
ಬಸ್ಸಿನ ಮಾಲೀಕರೇನೂ ನೆಮ್ಮದಿಯಾಗಿಲ್ಲ| ವಾಹನಗಳು ದಿನವೂ ಓಡುತ್ತಿದ್ದರೆ ಅದರ ಎಂಜಿನ್‌ಗಳು ಸುಧಾರಣೆ ಸ್ಥಿತಿಯಲ್ಲಿರುತ್ತವೆ| ಕಳೆದ ಐದು ತಿಂಗಳಿಂದ ನಿಂತಲ್ಲೇ ನಿಂತ ಬಸ್ಸಿನ ಚಕ್ರಗಳ ಬಳಿ ಹುತ್ತ ಬೆಳೆಯಲಾರಂಭಿಸಿವೆ| ಬಸ್ಸಿನ ಚಕ್ರಗಳು ಗಾಳಿಯಿಲ್ಲದೆ ಠುಸ್ಸೆಂದಿವೆ. ಬಸ್ಸುಗಳು ತುಕ್ಕು ಹಿಡಿಯಲಾರಂಭಿಸಿವೆ| ಕೊರೋನಾ ಭೀತಿ, ಚಾಲಕರು, ಕ್ಲೀನರ್, ಏಜೆಂಟರು ಸಂಕಷ್ಟದಲ್ಲಿ|
ಗಂ.ದಯಾನಂದ ಕುದೂರು
ಕುದೂರು(ಜು.29): ಕೊರೋನಾ ಕೇವಲ ಮನುಷ್ಯ ಜೀವನವನ್ನೇ ಅಸ್ಥವ್ಯಸ್ಥ ಮಾಡಲಿಲ್ಲ. ಖಾಸಗಿ ಬಸ್ಸುಗಳ ಸಾರಿಗೆ ವ್ಯವಸ್ಥೆಗೂ ಕೊರೋನಾ ವೈರಸ್ ತಗುಲಿದಂತೆ ರಸ್ತೆ ಬದಿಯಲ್ಲಿ ತುಕ್ಕು ಹಿಡಿಯುವಂತೆ ಮಾಡಿದೆ.
ಖಾಸಗಿ ಬಸ್‌ಗಳು ಜನರನ್ನು ತುಂಬಿಕೊಂಡು ಮತ್ತೆ ಕೆಲವು ಪ್ರದೇಶಗಳಲ್ಲಿ ಬಸ್ಸಿನ ಮೇಲೂ ಜನರನ್ನು ಕೂರಿಸಿಕೊಂಡು ದಸರಾ ಅಂಬಾರಿಯಂತೆ ಸಂಚರಿಸುತ್ತಿದ್ದವು. ಆದರೀಗ ಇಂತಹ ಖಾಸಗಿ ಬಸ್ಸುಗಳು ರಸ್ತೆ ಬದಿಯಲ್ಲಿ ನಿಂತಿವೆ.
ನಿಯಮ ಪಾಲಿಸಿದರೆ ನಷ್ಟ
ಸೀಟಿಗೊಬ್ಬರಂತೆ ಕೂರಿಸಿಕೊಂಡು ಹೋಗುವುದಾದರೆ ಹೋಗಿ ಎಂದು ಸರ್ಕಾರ ಆಜ್ಞೆ ಮಾಡಿದ ನಂತರ ಬಸ್ಸಿನ ಮಾಲೀಕರು ಹೀಗೆ ಮಾಡಿದರೆ ನಷ್ಟಕ್ಕೆ ಒಳಗಾಗುತ್ತೇವೆ ಎಂಬ ಆತಂಕದಿಂದ ಮಾಲೀಕರು ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಮಾಲೀಕರ ಗಟ್ಟಿನಿರ್ಧಾರದಿಂದ ಅವುಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ಚಾಲಕರು, ಕ್ಲೀನರ್‌ಗಳು ಹಾಗೂ ಏಜೆಂಟರು ಅಕ್ಷರಶಃ ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸರ್ಕಾರಿ ಬಸ್ಸುಗಳು ಓಡಾಡಲು ಆರಂಭಿಸಿದ ಮೇಲೆ ಇವರುಗಳಿಗೆ ಸಣ್ಣದೊಂದು ಆಸೆ ಚಿಗುರಿತ್ತು. ಖಾಸಗಿ ಬಸ್ಸುಗಳಿಗೂ ಚಾಲನೆ ಸಿಗುತ್ತದೆ. ನಮ್ಮಗಳ ಬದುಕು ಹಸನಾಗುತ್ತದೆ ಎಂದು ನಂಬಿದ್ದರು. ಆದರೆ, ಇವರೆಲ್ಲರ ಭರವಸೆಗಳು ಸುಳ್ಳಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಹತ್ವದ ಸಭೆ: ಖಾಸಗಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್..?
ಬದುಕಲು ಬೇರೆ ಉದ್ಯೋಗ
ದುಡಿಮೆಗೆ ಬೇರೆ ದಾರಿ ಕಾಣದೆ ವಿವಿಧ ವೃತ್ತಿಗಳ ಕಡೆಗೆ ಮುಖ ಮಾಡಿದ್ದಾರೆ. ಮಾವಿನಕಾಯಿ ಕೀಳುವುದು, ಕಾರ್ಖಾನೆಗಳಲ್ಲಿ ಲಗೇಜ್ ಹೊರುವುದು, ತರಕಾರಿ ಮಾರುವುದು, ಗಾರೆ ಕೆಲಸ, ಕೆರೆ ಹೂಳು ತೆಗೆಯುವ ಕೆಲಸ ಹೀಗೆ ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕ ಕೆಲಸಗಳನ್ನು ಮಾಡತೊಡಗಿದ್ದಾರೆ.
ಬಸ್ಸಿನ ಮಾಲೀಕರೇನೂ ನೆಮ್ಮದಿಯಾಗಿಲ್ಲ. ವಾಹನಗಳು ದಿನವೂ ಓಡುತ್ತಿದ್ದರೆ ಅದರ ಎಂಜಿನ್‌ಗಳು ಸುಧಾರಣೆ ಸ್ಥಿತಿಯಲ್ಲಿರುತ್ತವೆ. ಆದರೆ, ಕಳೆದ ಐದು ತಿಂಗಳಿಂದ ನಿಂತಲ್ಲೇ ನಿಂತ ಬಸ್ಸಿನ ಚಕ್ರಗಳ ಬಳಿ ಹುತ್ತ ಬೆಳೆಯಲಾರಂಭಿಸಿವೆ. ಬಸ್ಸಿನ ಚಕ್ರಗಳು ಗಾಳಿಯಿಲ್ಲದೆ ಠುಸ್ಸೆಂದಿವೆ. ಬಸ್ಸುಗಳು ತುಕ್ಕು ಹಿಡಿಯಲಾರಂಭಿಸಿವೆ.
ನಿತ್ಯವೂ ನಾಲ್ಕೈದು ಬಸ್ಸುಗಳಲ್ಲಿ ಇಂತಿಷ್ಟುದೂರದವರೆವಿಗೆ ನಾವು ಕಂಡಕ್ಟರ್ ಕೆಲಸ ಮಾಡಿ ಅದರಿಂದ ಬರುವ ಕಮೀಷನ್ ಹಣದಿಂದ ಜೀವನ ಮಾಡುತ್ತಿದ್ದೆವು. ಆದರೆ, ಕೊರೋನಾ ಹಾವಳಿಯಿಂದಾಗಿ ನಮ್ಮಗಳ ಬದುಕು ಕಷ್ಟವಾಯಿತು. ಹೊಟ್ಟೆತುಂಬಿಸಿಕೊಳ್ಳಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಣ್ಣ ಪುಟ್ಟವ್ಯಾಪಾರ ಮಾಡುತ್ತಾ, ದಿನಪತ್ರಿಕೆಗಳನ್ನು ಹಂಚುತ್ತಾ ಜೀವನ ಕಳೆಯುವಂತಾಗಿದೆ. ನನ್ನಂತೆ ಸಾಕಷ್ಟುಏಜೆಂಟರುಗಳ ಬದುಕು ಕಷ್ಟಮಯವಾಗಿದೆ. ಸರ್ಕಾರ ನಮ್ಮಂತಹವರನ್ನು ಪರಿಗಣನೆಗೆ ತೆಗೆದುಕೊಂಡು ಸಹಾಯಧನ ನೀಡುವ ಮನಸ್ಸು ಮಾಡಬೇಕು ಎಂದು ಕುದೂರಿನ ಖಾಸಗಿ ಬಸ್ ಏಜೆಂಚ್ ಶಿವಶಂಕರ್ ಅವರು ತಿಳಿಸಿದ್ದಾರೆ.