ಮಡಿಕೇರಿ: ಗೂಗಲ್ ಮ್ಯಾಪ್‌ನ ಮಾಹಿತಿ ನಂಬಿಕೊಂಡು ಕೊಡಗಿನ ಅಬ್ಬಿಫಾಲ್ಸ್‌ಗೆ ಬರುತ್ತಿರುವ ಪ್ರವಾಸಿಗರು ದಾರಿ ತಪ್ಪುತ್ತಿದ್ದಾರೆ. ಮಡಿಕೇರಿಯಿಂದ ಕೇವಲ 8 ಕಿ.ಮೀ ದೂರದಲ್ಲಿ ಅಬ್ಬಿ ಫಾಲ್ಸ್ ಇದೆ. 

ಆದರೆ 23 ಕಿ.ಮೀ. ದೂರದಲ್ಲಿರುವ ಹೊಸ್ಕೇರಿ ಗ್ರಾಮದಲ್ಲಿ ಅಬ್ಬಿ ಜಲಪಾತ ಇದೆ ಎಂದು ಗೂಗಲ್ ಮ್ಯಾಪ್ ತೋರಿಸುತ್ತಿದೆ. ಈ ತಪ್ಪಾದ ಮಾಹಿತಿ ಅನುಸರಿಸಿ ಪ್ರತಿನಿತ್ಯ ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಜಲಪಾತ ಸಿಗದೆ ಪರದಾಡುತ್ತಿದ್ದಾರೆ. 

ಹೊಸ್ಕೇರಿ ಗ್ರಾಮಕ್ಕೆ ಅಬ್ಬಿ ಜಲಪಾತವನ್ನು ಹುಡುಕಿಕೊಂಡು ನೂರಾರು ವಾಹನಗಳಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರತಿನಿತ್ಯ ಪ್ರವಾಸಿಗರ ದಂಡು ನೋಡಿ ಹೊಸ್ಕೇರಿ ಗ್ರಾಮಸ್ಥರು ಸುಸ್ತು ಹೊಡೆದು ಹೋಗಿದ್ದಾರೆ. ಇಲ್ಲಿ ಅಬ್ಬಿ ಜಲಪಾತ ಇಲ್ಲ ಎಂದು ಗ್ರಾಮಸ್ಥರು ಮನವರಿಕೆ ಮಾಡಿದರೂ ಪ್ರವಾಸಿಗರು ಅವರ ಮಾತು ನಂಬುತ್ತಿಲ್ಲ. 

ಗೂಗಲ್ ಮ್ಯಾಪ್‌ನ ಆಧಾರದಲ್ಲಿ ಅದೇ ಗ್ರಾಮದಲ್ಲಿ ಅಬ್ಬಿ ಜಲಪಾತವನ್ನು ಹುಡುಕಾಡುತ್ತಿದ್ದಾರೆ. ಕೊನೆಗೆ ಜಲಪಾತ ಸಿಗದೆ ವಾಪಸ್ ಹೋಗುತ್ತಿದ್ದಾರೆ. ಗೂಗಲ್ ಮ್ಯಾಪ್‌ನ ಎಡವಟ್ಟಿನಿಂದಾಗಿ ತಪ್ಪು ದಾರಿಯಲ್ಲಿ ಪ್ರವಾಸಿಗರು 53 ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡುವಂತಾಗಿದೆ.