1 ತಿಂಗಳಲ್ಲಿ 50 ಸಾವಿರ ಕೋಟಿ ಬಿಲ್ ನೀಡಿ: ಸಿದ್ದು ಸರ್ಕಾರಕ್ಕೆ ಕೆಂಪಣ್ಣ ಖಡಕ್ ಎಚ್ಚರಿಕೆ
ಸಿಎಂ, ಡಿಸಿಎಂ ಭರವಸೆ ನೀಡಿದಂತೆ ಹಂತ ಹಂತವಾಗಿಯು ಹಣ ಬಿಡುಗಡೆ ಮಾಡದೆ ಸಮಸ್ಯೆ ಸೃಷ್ಟಿಸುತ್ತಿರುವುದು ನಮ್ಮ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಬೆಂಗಳೂರು(ಅ.14): ವಿವಿಧ ಇಲಾಖೆಗಳಿಂದ ಬಾಕಿ ಇರುವ 20 ಸಾವಿರ ಕೋಟಿ ರು. ಬಿಲ್ ಪೈಕಿ ಅರ್ಧದಷ್ಟು ಮೊತ್ತವನ್ನು 30 ದಿನಗಳ ಒಳಗೆ ಪಾವತಿಸದಿದ್ದರೆ ಸರ್ಕಾರದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ. ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಂಪಣ್ಣ, "ಹೊಸ ಸರ್ಕಾರ ಬಂದ ಬಳಿಕ ಹಳೇ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಪ್ರಮುಖವಾಗಿ ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸಗಳಾಗಿವೆ. ಆದರೆ, ಸಿಎಂ, ಡಿಸಿಎಂ ಭರವಸೆ ನೀಡಿದಂತೆ ಹಂತ ಹಂತವಾಗಿಯು ಹಣ ಬಿಡುಗಡೆ ಮಾಡದೆ ಸಮಸ್ಯೆ ಸೃಷ್ಟಿಸುತ್ತಿರುವುದು ನಮ್ಮ ದೌರ್ಭಾಗ್ಯ" ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..? ಶುರುವಾಯ್ತು ರಣ ರಾಜಕಾರಣ !
"ಬೆಂಗಳೂರಿನಲ್ಲಿ ಬಾಕಿ ಇದ್ದ 5,000 ಕೋಟಿ ರೂ. ಪೈಕಿ ಸುಮಾರು 1,000 ಕೋಟಿ ರು. ಮಾತ್ರ ಪಾವತಿಯಾಗಿದೆ. ಕೆಲವು ಇಲಾಖೆಗಳಲ್ಲಿ ಬಿಲ್ ಮೊತ್ತದ ಶೇ.7ರಷ್ಟು ಮಾತ್ರ ಪಾವತಿಸಲಾಗುತ್ತಿದೆ. ಇದು ಶೇ.18ರಷ್ಟು ಜಿಎಸ್‌ಟಿ ಪಾವತಿಗೂ ಸಾಲುವುದಿಲ್ಲ. ಕೆಲವು ಇಲಾಖೆಗಳಲ್ಲಿ ತಮಗೆ ಬೇಕಾದವರಿಗೆ ಮಾತ್ರ ಬಾಕಿ ಮೊತ್ತ ಪಾವತಿಸುವ ಪರಿಪಾಠ ಬೆಳೆಸಿಕೊಳ್ಳಲಾಗಿದೆ. ಶಿಫಾರಸು ಪತ್ರ ತಂದವರಿಗೆ ರಾತ್ರೋರಾತ್ರಿ ಚೆಕ್ ನೀಡಿದ ಉದಾಹರಣೆ ಇದೆ. ಜ್ಯೇಷ್ಠತೆ ಆಧಾರದ ಮೇಲೆ ಬಾಕಿ ಪಾವತಿಸಬೇಕು ಎಂಬ ನಿಯಮಕ್ಕೆ ಬೆಲೆ ಇಲ್ಲದಂತಾಗಿದೆ" ಎಂದು ಅವರು ಆರೋಪಿಸಿದರು.
"ವಿವಿಧ ಕಾಮಗಾರಿಗಳನ್ನು ವರ್ಗೀಕರಣ ಮಾಡಿ ಅನುದಾನ ಬಿಡುಗಡೆ ಮಾಡುವ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದ್ದು, ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಸಂಭವ ಇದೆ. ಹಣ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ" ಎಂದು ಕೆಂಪಣ್ಣ ಹೇಳಿದರು.
"ಕಾಮಗಾರಿಗಳಿಗೆ ಒಂದು ವರ್ಷದ ಒಪ್ಪಂದ ಮಾತ್ರ ಇರುತ್ತದೆ. ಆದರೆ, ತನಿಖೆ ನೆಪದಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಆಗಿರುವ ಕೆಲಸಗಳ ಬಾಕಿ ಮೊತ್ತ ತಡೆ ಹಿಡಿಯುವುದು ಯಾವ ನ್ಯಾಯ? ಇತ್ತೀಚೆಗೆ ಆಗಿರುವ ಕೆಲಸಗಳ ಹಣವನ್ನು ತಡೆ ಹಿಡಿಯುವುದಕ್ಕೆ ನಮ್ಮ ಅಭ್ಯಂತರ ಇಲ್ಲ" ಎಂದು ಕೆಂಪಣ್ಣ ನುಡಿದರು.
"ಹಿಂದಿನ ಸರ್ಕಾರದಲ್ಲಿ ಕಮಿಷನ್ ಕೇಳಲಾಗುತ್ತಿತ್ತು. ಆದರೆ, ಈ ಸರ್ಕಾರದಲ್ಲಿ ಕಮಿಷನ್ ಇದೆಯೋ, ಇಲ್ಲವೋ ಗೊತ್ತಿಲ್ಲ. ಈವರೆಗೆ ಯಾವೊಬ್ಬ ಗುತ್ತಿಗೆದಾರನೂ ಪತ್ರ ಬರೆದು ಆರೋಪಿಸಿಲ್ಲ. ಈ ಕುರಿತು ಮಾಹಿತಿ ಬಂದರೆ, ಮುಖ್ಯಮಂತ್ರಿಗಳು, ಅವರ ಪಕ್ಷದ ನಾಯಕರು ಹಾಗೂ ಪ್ರಧಾನಮಂತ್ರಿಗಳಿಗೂ ಪತ್ರ ಬರೆಯುತ್ತೇವೆ. ಪಾಪ ಕಾಂಗ್ರೆಸ್‌ನವರನ್ನು ಐಟಿ ದಾಳಿ ಪ್ರಕರಣದಲ್ಲಿ ಎಳೆಯಬೇಡಿ" ಎಂದು ಕೆಂಪಣ್ಣ ಹೇಳಿದರು.
ಕೆಲಸಗಳು ನಡೆಯುತ್ತಿಲ್ಲ:
ಹೊರ ರಾಜ್ಯದವರು ಮಾಡುತ್ತಿರುವ ದೊಡ್ಡ ಕಾಮಗಾರಿಗಳು ಹಾಗೂ ನಮ್ಮ ರಾಜ್ಯದವರಿಗೆ ಕೊಟ್ಟಿರುವ ಸಣ್ಣ ಪುಟ್ಟ ಕೆಲಸಗಳು ಮಾತ್ರ ನಡೆಯುತ್ತಿದ್ದು, ಬೇರೆ ಕಾಮಗಾರಿಗಳು ನಡೆಯುತ್ತಿಲ್ಲ. ಹೀಗಾಗಿ, ಸರ್ಕಾರದ ವಿರುದ್ಧ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡುವ ಪ್ರಶ್ನೆಯೇ ಎದುರಾಗುವುದಿಲ್ಲ. ದಸರಾ ಹಬ್ಬ ಮುಗಿದ ಬಳಿಕ ಸಭೆ ಸೇರಿ ಸರ್ಕಾರದ ವಿರುದ್ಧದ ಪ್ರತಿಭಟನೆ ಸ್ವರೂಪ ತಿಳಿಸಲಾಗುತ್ತದೆ ಎಂದು ಕೆಂಪಣ್ಣ ಹೇಳಿದರು.
ಸಮಿತಿಗೆ ಸಾಕ್ಷಿ ನೀಡುತ್ತೇವೆ:
ಹಿಂದಿನ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಬದ್ಧರಾಗಿದ್ದೇವೆ. ವಿಚಾರಣೆಗಾಗಿ ರಚಿಸಿರುವ ಸಮಿತಿಗೆ ಸಾಕ್ಷಿ, ದಾಖಲೆ ನೀಡುತ್ತೇವೆ. ಈಗಿನ ಸರ್ಕಾರದಲ್ಲಿ ಯಾರಾದರೂ ಹಣ ಕೇಳಿದರೆ ಅದರ ಬಗ್ಗೆಯು ಸಿಎಂ ಸೇರಿದಂತೆ ಸಂಬಂಧಿಸಿದವರಿಗೆ ದೂರು ನೀಡುತ್ತೇವೆ. ನಾನು ಕಾಂಗ್ರೆಸ್ ಪಕ್ಷದ ವ್ಯಕ್ತಿ ಅಲ್ಲ ಎಂದು ಕೆಂಪಣ್ಣ ಹೇಳಿದರು.
ಯಾವುದೇ ಸಚಿವರು ಕಮಿಷನ್ ಕೇಳಿಲ್ಲ: ಕೆಂಪಣ್ಣ
ಆಂಧ್ರಪ್ರದೇಶದವರಿಗೆ ಗುತ್ತಿಗೆ
ಕ್ಲಾಸ್ 1 ಕೆಲಸಗಳನ್ನು ಕರ್ನಾಟಕದವರಿಗೆ ನೀಡಬೇಕೆಂಬ ನಿಯಮವಿದೆ. ಆದರೆ, ನಿಯಮ ಉಲ್ಲಂಘಿಸಿ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯದವರಿಗೆ ಹೆಚ್ಚಾಗಿ ಕೆಲಸಗಳನ್ನು ನೀಡಲಾಗುತ್ತಿದೆ. ಕರ್ನಾಟಕದವರು ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದರು.
ಆತ್ಮಹತ್ಯೆ ಸ್ಥಿತಿ
ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಲ್ಪಸ್ವಲ್ಪ ಹಣ ಬಿಡುಗಡೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಅಧಿಕಾರಿಗಳ ರಾಜ್ಯಭಾರ ನಡೆಯುತ್ತಿದೆ. ಹೊಸ ಸರ್ಕಾರ ಬಂದಮೇಲೆ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.