ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌: ವಿದ್ಯುತ್‌ ಬಿಲ್‌ ಕಟ್ಟಲು ಡಂಗುರ ಸಾರಿದ ಜೆಸ್ಕಾಂ..!

ವಿದ್ಯುತ್‌ ಉಚಿತ ಎಂದು ಶುಲ್ಕ ಕಟ್ಟಲು ಜನ ಹಿಂದೇಟು, ಬಾಕಿಗಾಗಿ ಕೊಪ್ಪಳದಲ್ಲಿ ಮೈಕ್‌ನಲ್ಲಿ ಜೆಸ್ಕಾಂ ಮನವಿ, ಇನ್ನೂ ಆದೇಶ ಬಂದಿಲ್ಲ, ಬಿಲ್‌ ಕಟ್ಟಿಬಿಡಿ, ಇಲ್ಲದಿದ್ದರೆ ಸಂಪರ್ಕ ಕಟ್‌ ಮಾಡ್ತೀವಿ: ಜೆಸ್ಕಾಂ

GESCOM Request to People For Pay the Electricity Bill grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.24): ನೂತನ ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಯೋಜನೆ ಜಾರಿ ಕುರಿತು ಸರ್ಕಾರದಿಂದ ಇನ್ನೂ ಆದೇಶ ಜಾರಿಯಾಗಿಲ್ಲ. ಆದರೆ, ಈ ಯೋಜನೆ ಜಾರಿಯಾಗುವ ಮುನ್ನವೇ ಕೊಪ್ಪಳದಲ್ಲಿ ಗ್ರಾಹಕರು ವಿದ್ಯುತ್‌ ಬಿಲ್‌ ತುಂಬಲು ಹಿಂದೇಟು ಹಾಕುತ್ತಿದ್ದು, ಇದು ಜೆಸ್ಕಾಂ (ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ)ಗೆ ತಲೆನೋವು ತರಿಸಿದೆ. ಹೀಗಾಗಿ, ಬಾಕಿ ಬಿಲ್‌ ವಸೂಲಿಗಾಗಿ ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ, ‘ಕರೆಂಟ್‌ ಬಿಲ್‌ ಕಟ್ಟಿ’ ಎಂದು ಧ್ವನಿವರ್ಧಕದ ಮೂಲಕ ಡಂಗುರ ಸಾರುತ್ತಿದ್ದಾರೆ.

ಜೆಸ್ಕಾಂ ಸಿಬ್ಬಂದಿ ವಾಹನವೊಂದರಲ್ಲಿ ಮೈಕ್‌ ಅಳವಡಿಸಿಕೊಂಡು, ಗಲ್ಲಿ-ಗಲ್ಲಿ, ಹಳ್ಳಿ-ಹಳ್ಳಿ ಸುತ್ತುತ್ತಾ, ಯೋಜನೆ ಜಾರಿ ಬಗ್ಗೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಹೀಗಾಗಿ, ಬಾಕಿ ಜೊತೆಗೆ ಈ ತಿಂಗಳ ಬಿಲ್‌ ಪಾವತಿಸಿ ಎಂದು ಮನವಿ ಮಾಡುತ್ತಿದ್ದಾರೆ. ಬಾಕಿ ಪಾವತಿ ಮಾಡದಿದ್ದರೆ ಮನೆಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

ಉಚಿತ ವಿದ್ಯುತ್ ಘೋಷಣೆ: ಕರಾವಳಿಯಲ್ಲಿ 'ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ' ಅನ್ನೋರೆ ಇಲ್ಲ!

ಸರ್ಕಾರದ ಗ್ಯಾರಂಟಿ ಯೋಜನೆ ನಂಬಿ ಬಹುತೇಕರು ಈ ತಿಂಗಳ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಹಳೆ ಬಾಕಿ ಪಾವತಿ ಮಾಡುವುದಕ್ಕೂ ಮುಂದೆ ಬರುತ್ತಿಲ್ಲ. ಕೇಳಲು ಹೋದರೆ ಜೆಸ್ಕಾಂ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಗ್ರಾಹಕರ ಜತೆ ವಾಗ್ವಾದ, ಸಂಘರ್ಷ ತಪ್ಪಿಸಲು ಸಿಬ್ಬಂದಿ ಈ ಮಾರ್ಗ ಕಂಡುಕೊಂಡಿದ್ದಾರೆ.

ಈ ಮಧ್ಯೆ, ಈ ರೀತಿ ಮೈಕ್‌ನಲ್ಲಿ ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿಯೂ ಕೆಲವು ಗ್ರಾಹಕರು ವಾಗ್ವಾದಕ್ಕೆ ಇಳಿದ ಉದಾಹರಣೆಯಿದೆ. ‘ಸರ್ಕಾರ ಉಚಿತ ವಿದ್ಯುತ್‌ ಜಾರಿಯಾಗಿದೆ ಎಂದು ಹೇಳುತ್ತಿದೆ, ನೀವ್ಯಾಕೆ ಈ ರೀತಿ ಕೂಗುತ್ತಿದ್ದೀರಿ?’ ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.

ಹೀಗಾಗಿ, ‘ಸರ್ಕಾರ ಯೋಜನೆಯನ್ನು ಘೋಷಣೆ ಮಾಡಿದ್ದರೂ ಅರ್ಹ ಗ್ರಾಹಕರು ಯಾರು? ಯಾವಾಗಿನಿಂದ ಯೋಜನೆ ಜಾರಿಯಾಗುತ್ತದೆ? ಎನ್ನುವ ಕುರಿತು ಅಧಿಕೃತ ಆದೇಶ ಬಂದಿಲ್ಲ. ಈಗ ನೀವು ಬಳಸಿದ ವಿದ್ಯುತ್‌ಗೆ ಬಿಲ್‌ ನೀಡಲಾಗಿದ್ದು, ಅದನ್ನು ತುಂಬಬೇಕು. ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಅರ್ಹ ಫಲಾನುಭವಿಗಳಾಗಿದ್ದರೆ ನಾವು ಬಿಲ್‌ ವಸೂಲಿ ಮಾಡುವುದಿಲ್ಲ. ಈಗ ಹಿಂದಿನ ಬಾಕಿ ನೀಡಲೇಬೇಕು. ನಾವು ಬಾಕಿ ವಸೂಲಿಗಾಗಿ ಮೈಕ್‌ನಲ್ಲಿ ಡಂಗುರ ಸಾರುತ್ತಿದ್ದೇವೆ. ಸರ್ಕಾರದಿಂದ ಯೋಜನೆ ಜಾರಿ ಬಗ್ಗೆ ಆದೇಶ ಬಂದ ಮೇಲೆಯೂ ನಮ್ಮ ಹಳೆಯ ಬಾಕಿ ವಸೂಲಿ ಇದ್ದೇ ಇರುತ್ತದೆ. ನಾಲ್ಕಾರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವುದರಿಂದ ಸಮಸ್ಯೆಯಾಗಿದೆ. ಕೂಡಲೇ ಪಾವತಿ ಮಾಡದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ನಮ್ಮೋಣಿಗೆ ಯಾಕ್‌ ಬಂದ್ರಿ ? ನಾವು ಕರೆಂಟ್‌ ಬಿಲ್‌ ಕಟ್ಟಲ್ಲಂದ್ರೆ ಕಟ್ಟಲ್ಲ : ಜನ ಪಟ್ಟು!

ಸರ್ಕಾರದಿಂದಲೂ ಬಾಕಿ:

ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾಯತ್‌, ನಗರಪಾಲಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದಲೂ ಜೆಸ್ಕಾಂಗೆ ಬಿಲ್‌ ಪಾವತಿ ಬಾಕಿಯಿದೆ. ಕೊಪ್ಪಳ ವಿಭಾಗವೊಂದರಲ್ಲಿಯೇ ಸುಮಾರು .48 ಲಕ್ಷ ಬಾಕಿ ಇದೆ ಎನ್ನಲಾಗುತ್ತಿದೆ. ಇದು ಜೆಸ್ಕಾಂ ನಿರ್ವಹಣೆಗೆ ತೊಡಕು ಉಂಟುಮಾಡುತ್ತಿದೆ ಎನ್ನುತ್ತಾರೆ ಜೆಸ್ಕಾಂನ ಕೊಪ್ಪಳ ವಿಭಾಗದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರಾಜೇಶ.

ಹಳೆಯ ಬಾಕಿ ಉಳಿಸಿಕೊಂಡಿರುವುದನ್ನು ವಸೂಲಿ ಮಾಡುವುದಕ್ಕಾಗಿ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮೈಕ್‌ನಲ್ಲಿ ಪ್ರಸಾರ ಮಾಡುತ್ತಿದ್ದೇವೆ. ಕೆಲವರು ಬಾಕಿ ಉಳಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ ಅಂತ ಕೊಪ್ಪಳ ಜೆಸ್ಕಾಂ ಇಇ ರಾಜೇಶ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios