ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಕರ್ತವ್ಯದ ವೇಳೆ ಅನಧಿಕೃತ ಗೈರು ಹಾಜರಾಗುವುದನ್ನು ತಡೆಯಲು ಕ್ರಮ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ  ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಮಾಹಿತಿ

ಬೆಂಗಳೂರು (ಜೂ.10):  ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಕರ್ತವ್ಯದ ವೇಳೆ ಅನಧಿಕೃತ ಗೈರು ಹಾಜರಾಗುವುದನ್ನು ತಡೆಯಲು ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಇನ್ನು ಅನಧಿಕೃತ ಗೈರು ಹಾಜರಿಯನ್ನು ತಪ್ಪಿಸುವ ವೈದ್ಯರು ಆಸ್ಪತ್ರೆಯಿಂದ ಹೊರಗೆ 100 ಮೀಟರ್‌ ದೂರ ಹೋದ ಕೂಡಲೇ ಗೊತ್ತಾಗುವಂತೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ ಅಳವಡಿಸಲಾಗುವುದು. ಅಲ್ಲದೆ, ಪ್ರತಿ ಆಸ್ಪತ್ರೆಯ ವಾರ್ಡ್‌, ಐಸಿಯುನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಒಂದೇ ಕಡೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಚಿತ್ರೀಕರಣದ ಮುನ್ನ ಎಲ್ರೂ ಲಸಿಕೆ ಹಾಕಿಸಿಕೊಳ್ಳಿ: ಸಚಿವ ಸುಧಾಕರ್‌ ಮನವಿ ..

ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿದ್ದಾಗ ವೈದ್ಯರ ಗೈರು ಹಾಜರಿ ಬಗ್ಗೆ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಲಾಗಿತ್ತು. ವರದಿ ನನ್ನ ಬಳಿ ವರದಿ ಬಂದ ಕೂಡಲೇ ಈ ಬಗ್ಗೆ ಗಂಭೀರ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಬುಧವಾರ ನಗರದ ತಮ್ಮ ಅಧಿಕೃತ ಸರ್ಕಾರಿ ನಿವಾಸದ ಬಳಿ ಹರ್ಬಲ್‌ ಲೈಫ್‌ ನ್ಯೂಟ್ರೀಶಿಯನ್‌ ಕಂಪನಿಯು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ನೀಡಿದ 150 ಆಕ್ಸಿಜನ್‌ ಸಾಂದ್ರಕಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

2,281 ಬ್ಲ್ಯಾಕ್‌ ಫಂಗಸ್‌, 156 ಸಾವು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣ ವರದಿಯಾಗಿದ್ದು 156 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ 102 ಮಂದಿ ಗುಣಮುಖರಾಗಿದ್ದು ಉಳಿದ 1,948 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ಕೆ. ಸುಧಾಕರ್‌ ಮಾಹಿತಿ ನೀಡಿದರು.

ಕಾಂಗ್ರೆಸ್‌ಗೆ ಸಮಸ್ಯೆ ಬೇಡ: ಕಾಂಗ್ರೆಸ್‌ ಶಾಸಕರು ತಮ್ಮ ಅನುದಾನದಿಂದ ಲಸಿಕೆ ನೀಡುವ ಸಮಸ್ಯೆ ಬೇಡ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona