ಬೆಂಗಳೂರು(ಆ.20): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ನಡುವೆಯೂ ರಾಜ್ಯ ಸರ್ಕಾರ ಸಾರ್ವಜನಿಕ ಗಣೋತ್ಸವಕ್ಕೆ ಷರತ್ತು ಬದ್ಧ ಅವಕಾಶ ನೀಡಿದ ಬೆನ್ನಲ್ಲೇ ರಾಜಧಾನಿಯಲ್ಲಿ ಗಣೇಶಮೂರ್ತಿ ವ್ಯಾಪಾರ ಗರಿಗೆದರಿದೆ.

ಬಸವನಗುಡಿ, ಆರ್‌.ವಿ.ರಸ್ತೆ, ಹನುಮಂತ ನಗರ, ಚಾಮರಾಜ ಪೇಟೆ, ಲಾಲ್‌ಬಾಗ್‌ ಪಶ್ಚಿಮ ದ್ವಾರ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಬುಧವಾರ ಗಣೇಶಮೂರ್ತಿ ಮಾರಾಟದ ಅಂಗಡಿಗಳಲ್ಲಿ ಗ್ರಾಹಕರು ಕಾಣ ಸಿಕ್ಕರು. ಅಪ್ಪ-ಮಕ್ಕಳು, ದಂಪತಿ ಹೀಗೆ ತಂಡೋಪ ತಂಡವಾಗಿ ಅಂಗಡಿಗಳಿಗೆ ಭೇಟಿ ನೀಡಿ ಗಣೇಶಮೂರ್ತಿ ಖರೀದಿಸಿ ಮನೆಗಳಿಗೆ ಕೊಂಡೊಯ್ದರು. ಇದರಿಂದಾಗಿ ಕೊರೋನಾ ಭೀತಿಯಿಂದಾಗಿ ಇಷ್ಟು ದಿನ ಗ್ರಾಹಕರು ಇಲ್ಲದೆ ಬಣ ಗುಡುತ್ತಿದ್ದ ಅಂಗಡಿಗಳಲ್ಲಿ ಜೀವ ಕಳೆ ಕಂಡುಬಂತು.

ಹಿಂದು ಸಂಘಟನೆ, ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ: ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ!

ದೊಡ್ಡ ಗಣೇಶಮೂರ್ತಿ ಕೇಳುವವರೇ ಇಲ್ಲ:

ಆದರೆ, ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಹಾಗೂ ಮನೆಗಳಲ್ಲಿ 2 ಅಡಿ ಗಣೇಶಮೂರ್ತಿ ಮಾತ್ರ ಪ್ರತಿಷ್ಠಾಪಿಸಬೇಕು ಎಂಬ ಷರತ್ತು ವಿಧಿಸಿರುವುದರಿಂದ ದೊಡ್ಡ ಗಣೇಶಮೂರ್ತಿ ಮಾರಾಟಕ್ಕೆ ಹೊಡೆತ ಬಿದ್ದಿದೆ. ಬಹುತೇಕ ಗ್ರಾಹಕರು 2 ಅಡಿ ಎತ್ತರದ ಗಣೇಶಮೂರ್ತಿ ಖರೀದಿಸುತ್ತಿದ್ದಾರೆ. ಹೀಗಾಗಿ ನಾಲ್ಕು ಅಡಿ ಮೇಲ್ಪಟ್ಟಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿದ್ದೇವೆ. ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಆಗದಿದ್ದರೆ ನಷ್ಟಅನುಭವಿಸಬೇಕಾಗುತ್ತದೆ ಎಂದು ಬಸವನಗುಡಿ ರಸ್ತೆಯ ಗಣೇಶಮೂರ್ತಿ ವ್ಯಾಪಾರಿ ಕೃಷ್ಣಮೂರ್ತಿ ಬೇಸರದಿಂದ ಹೇಳಿದರು.

ಮಣ್ಣಿನ ಗಣೇಶಮೂರ್ತಿ ಮಾರಾಟ:

ವಾರ್ಡ್‌ಗೆ ಒಂದೇ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಿರುವುದರಿಂದ ಬಡಾವಣೆಗಳ ಯುವಕರ ಸಂಘಗಳು ಹಾಗೂ ಗಣೇಶೋತ್ಸವ ಸಮಿತಿಗಳು ಇನ್ನೂ ಗೊಂದಲದಲ್ಲಿವೆ. ಆದರೆ, ಸಾಂಪ್ರದಾಯಿಕವಾಗಿ ಮನೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವವರು ಈಗ ಅಂಗಡಿಗಳತ್ತ ಮುಖ ಮಾಡಿದ್ದಾರೆ. ಬಹುತೇಕರು ಮಣ್ಣಿನ ಗಣೇಶಮೂರ್ತಿಗಳನ್ನೇ ಖರೀದಿಸುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.10 ರಷ್ಟು ವ್ಯಾಪಾರವಿಲ್ಲ. ಹಬ್ಬಕ್ಕೆ ಇನ್ನೂ ಮೂರ್ನಾಲ್ಕು ದಿನ ಸಮಯವಿದ್ದು, ವ್ಯಾಪಾರ ವೃದ್ಧಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ಹನಮಂತನಗರದ ಗಣೇಶಮೂರ್ತಿ ವ್ಯಾಪಾರಿ ಚನ್ನಕೇಶವ.

ವಾಸ್ತವವಾಗಿ ಆಗಸ್ಟ್‌ನ ಮೊದಲ ವಾರದಲ್ಲೇ ಗಣೇಶಮೂರ್ತಿ ತಯಾರಕರು ನಗರದ ಹಲವೆಡೆ ಮಾರಾಟದ ಅಂಗಡಿ ತೆರೆದಿದ್ದರು. ಕೋರೋನಾದಿಂದಾಗಿ ಸಾರ್ವಜನಿಕರು ಗಣೇಶಮೂರ್ತಿ ಖರೀದಿಗೆ ಹಿಂದೇಟು ಹಾಕಿದ್ದರು. ಇದೀಗ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಬಿದ್ದ ಹಿನ್ನೆಲೆಯಲ್ಲಿ ಗಣೇಶಮೂರ್ತಿ ಮಾರಾಟ ಅಂಗಡಿಗಳಿಗೆ ಗ್ರಾಹಕರ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿರುವುದು ಮೂರ್ತಿ ಮಾರಾಟಗಾರರಿಗೆ ಕೊಂಚ ಸಮಾಧಾನ ತಂದಿದೆ
ಪ್ರತಿ ವರ್ಷ ಗಣೇಶ ಚತುರ್ಥಿ ದಿವಸ ಮನೆಯಲ್ಲಿ ಗೌರಿ-ಗಣೇಶಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಹೀಗಾಗಿ ಗಣೇಶಮೂರ್ತಿ ಖರೀದಿಸಲು ಬಂದಿದ್ದೇನೆ. ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶಮೂರ್ತಿಯನ್ನೇ ಖರೀದಿಸುತ್ತೇನೆ ಎಂದು ತ್ಯಾಗರಾಜನಗರ ನಿವಾಸಿ ರಾಮಚಂದ್ರ ರಾವ್‌ ಅವರು ತಿಳಿಸಿದ್ದಾರೆ. 

ಸರ್ಕಾರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಆದರೆ, ಕೊರೋನಾ ಭೀತಿಯಿಂದ ಜನ ಗಣೇಶಮೂರ್ತಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವ್ಯಾಪಾರ ತೀವ್ರ ಕುಸಿತವಾಗಿದೆ. ಈ ನಡುವೆ ಪೊಲೀಸರು ಸರ್ಕಾರದ ಮಾರ್ಗಸೂಚಿ ತೋರಿಸಿ ಮಾರಾಟಗಾರರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರ್‌.ವಿ.ರಸ್ತೆಯ ಗಣೇಶಮೂರ್ತಿ ಮಾರಾಟಗಾರ ಶ್ರೀನಿವಾಸ್‌ ಅವರು ಹೇಳಿದ್ದಾರೆ.

‘ಮನೆಯಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಿ’

ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಬಿಬಿಎಂಪಿಯಿಂದ ಈ ಬಾರಿ ವಿಸರ್ಜನೆಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಸಾರ್ವಜನಿಕರು ಮನೆಯಲ್ಲಿಯೇ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ (ವಾರ್ಡ್‌ಗೆ ಒಂದರಂತೆ) ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಪಾಲಿಕೆಯಿಂದ ಅನುಮತಿ ನೀಡುವ ವೇಳೆ ಎಲ್ಲಿ ವಿಸರ್ಜನೆ ಮಾಡಬೇಕು ಎಂಬುದನ್ನು ಸೂಚನೆ ನೀಡಲಾಗುತ್ತದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಎರಡು ಅಡಿಗಿಂತ ಕಡಿಮೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ನಾಲ್ಕು ಅಡಿಗಿಂತ ಕಡಿಮೆ ಇರಬೇಕು ಎಂದರು.

ಪಾಲಿಕೆಯ 198 ವಾರ್ಡ್‌ಗಳಲ್ಲಿ ತಲಾ ಒಂದರಂತೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಯಾವ ಸಂಘ ಸಂಸ್ಥೆ ಪ್ರತಿಷ್ಠಾಪಿಸಬೇಕು ಎಂಬುದನ್ನು ಆಯಾ ವಲಯದ ಜಂಟಿ ಆಯುಕ್ತರು ಹಾಗೂ ಉಪ ಪೊಲೀಸ್‌ ಆಯುಕ್ತರು (ಡಿಸಿಪಿ) ಆಯ್ಕೆ ಮಾಡಿ ಅನುಮತಿ ನೀಡಲಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮೂರು ದಿನ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಗರಿಷ್ಠ 20 ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಸೇರಿರುವುದಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಸುವಂತಿಲ್ಲ. ಪ್ರತಿದಿನ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ಪಿಒಪಿ ಗಣೇಶ ಮಾರಾಟ ನಿಷೇಧ

ರಾಸಾಯನಿಕ ಬಣ್ಣ, ಥರ್ಮಾಕೋಲ್‌ ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ವಸ್ತುಗಳನ್ನು ಬಳಸಿ ಮೂರ್ತಿ ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಜಪ್ತಿ ಮಾಡಿ, ದಂಡ ವಿಧಿಸಿ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಬಳಕೆ ಮಾಡಬೇಕು ಎಂದು ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.