ಬೆಂಗಳೂರು(ಆ.20): ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮೂರ್ತಿಯ ಎತ್ತರ, ಪೆಂಡಾಲ್‌ ಅಗಲ, ವಾರ್ಡ್‌ಗೆ ಒಂದೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಸೇರಿದಂತೆ ವಿವಿಧ ಅಂಶಗಳ ಕುರಿತು ಹೊರಡಿಸಿರುವ ಷರತ್ತುಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ‘ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ’ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕೊರೋನಾ ಸೋಂಕಿನ ನಡುವೆಯೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿರುವುದು ಶ್ಲಾಘನೀಯ. ಗಣೇಶೋತ್ಸವ ಆಚರಣೆಗೆ ನಗರದ 1,800ಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳು ಸಿದ್ಧ ಇವೆ. ಆದರೆ, ಮಾರ್ಗಸೂಚಿಯಲ್ಲಿ ವಾರ್ಡ್‌ಗೆ ಒಂದೇ ಗಣೇಶಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ಒಂದು ವಾರ್ಡ್‌ನಲ್ಲಿ ಹತ್ತಾರು ಗಣೇಶೋತ್ಸವ ಸಮಿತಿಗಳು ಇರುತ್ತವೆ. ಹೀಗಿರುವಾಗ ಯಾರು ಗಣೇಶಮೂರ್ತಿ ಪ್ರತಿಷ್ಠಾಪಿಸಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ರಾಜು ಹೇಳಿದರು.

ಬೆಂಗಳೂರಲ್ಲಿ ಗಣೇಶ ವಿಗ್ರಹಗಳ ವ್ಯಾಪಾರ ಜೋರು..!

ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶಮೂರ್ತಿ ನಾಲ್ಕು ಅಡಿ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿ ಎರಡು ಅಡಿ ಇರಬೇಕು ಎಂಬ ಷರತ್ತಿನ ತರ್ಕ ಅರ್ಥವಾಗುತ್ತಿಲ್ಲ. ಮೂರ್ತಿ ಇಷ್ಟೇ ಎತ್ತರ ಇರಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬಾರದು. ಗಣೇಶೋತ್ಸವ ಸಮಿತಿಗಳು ಹಾಗೂ ಭಕ್ತಾದಿಗಳ ಇಚ್ಛಾನುಸಾರ ಗಣೇಶಮೂರ್ತಿ ಕೂರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ 20 ಮಂದಿಗೆ ಮಾತ್ರ ಅವಕಾಶ ಇರುವ ರೀತಿಯಲ್ಲಿ ಪೆಂಡಾಲ್‌ ಹಾಕಬೇಕು ಎಂಬ ಷರತ್ತು ವಿಧಿಸಲಾಗಿದೆ. ಸಾಮಾನ್ಯವಾಗಿ ಗಣೇಶೋತ್ಸವ ಸಮಿತಿಗಳಲ್ಲೇ 10ರಿಂದ 15 ಮಂದಿ ಸದಸ್ಯರು ಇರುತ್ತಾರೆ. ಹೀಗಿರುವಾಗ 20 ಮಂದಿ ಮೀರದ ಹಾಗೆ ಎಂದರೆ ಭಕ್ತಾದಿಗಳು ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ನೂತನ ಮಾರ್ಗಸೂಚಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಈ ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿಧಿಸಿರುವ ಷರತ್ತುಗಳಲ್ಲಿ ಹಲವು ಗೊಂದಲಗಳಿವೆ. ಹೀಗಾಗಿ ಮತ್ತೊಮ್ಮೆ ಪರಿಶೀಲಿಸಿ, ನಿರ್ವಿಘ್ನವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಈಗಾಗಲೇ ಸಮಯ ಕಡಿಮೆಯಿದ್ದು, ಕೂಡಲೇ ಗೊಂದಲಗಳನ್ನು ಬಗೆಹರಿಸಬೇಕು ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ರಾಜು ಅವರು ತಿಳಿಸಿದ್ದಾರೆ.