* ಹೊಸ ಪ್ರಕರಣ, ಸಕ್ರಿಯ ಸೋಂಕಿತರ ಸಂಖ್ಯೆ ಶೂನ್ಯಕ್ಕೆ* ಗದಗ, ಬೀದರ್‌, ಹಾವೇರಿಯಲ್ಲಿ ಒಬ್ಬರಿಗೂ ಸೋಂಕಿಲ್ಲ

ಬೆಂಗಳೂರು(ನ.16): ರಾಜ್ಯದಲ್ಲಿ ಎರಡನೇ ಅಲೆ ಬಳಿಕ ಕೊರೋನಾ ಸೋಂಕು (Covid Infection) ಪ್ರಮಾಣ ತೀವ್ರ ಇಳಿಮುಖವಾಗುತ್ತಿದ್ದು, ಗದಗ (Gadag), ಬೀದರ್‌ (Bidar) ಹಾಗೂ ಹಾವೇರಿ (Haveri) ಜಿಲ್ಲೆಗಳು ಕೊರೋನಾದಿಂದ ಸಂಪೂರ್ಣ ಮುಕ್ತವಾಗಿವೆ. ಈ ಜಿಲ್ಲೆಗಳಲ್ಲಿ ಈಗ ಒಂದೂ ಸಕ್ರಿಯ ಕೇಸ್‌ ಇಲ್ಲ.

ಈ ಮೂರೂ ಜಿಲ್ಲೆಗಳಲ್ಲೂ ಇತ್ತೀಚೆಗೆ ಒಂದೂ ಹೊಸ ಪ್ರಕರಣ ವರದಿಯಾಗಿಲ್ಲ. ಬೀದರ್‌ನಲ್ಲಿ ನ.14ರಂದು ಕೊನೆಯ ಕೋವಿಡ್‌ ಸೋಂಕಿತ ಗುಣಮುಖರಾಗಿದ್ದಾರೆ. ನಂತರ ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಹಾವೇರಿ ಜಿಲ್ಲೆಯಲ್ಲಿ (Haveri District) ನ.11ರ ನಂತರ ಒಂದೂ ಸಕ್ರಿಯ ಕೇಸ್‌ ಇಲ್ಲ. ಗದಗ ಜಿಲ್ಲೆಯಲ್ಲಿ ಅಕ್ಟೋಬರ್‌ 16ರಿಂದಲೇ ಒಬ್ಬರೂ ಸಕ್ರಿಯ ಸೋಂಕಿತರು ಇಲ್ಲ. ಆ ಜಿಲ್ಲೆ ಬರೋಬ್ಬರಿ ಒಂದು ತಿಂಗಳಿನಿಂದ ಕೋವಿಡ್‌ ಸೋಂಕಿನಿಂದ ಮುಕ್ತವಾಗಿದೆ.

ರಾಜ್ಯದಲ್ಲಿ ಒಟ್ಟು 7,912 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ ಬೆಂಗಳೂರು ನಗರ (Bengaluru Urban) ಜಿಲ್ಲೆಯಲ್ಲೇ 6,574 ಮಂದಿ ಸಕ್ರಿಯ ಸೋಂಕಿತರಿದ್ದು, ರಾಜ್ಯದ ಒಟ್ಟು ಸಕ್ರಿಯ ಸೋಂಕಿತರ ಪೈಕಿ ಶೇ.83.08ರಷ್ಟುಮಂದಿ ರಾಜಧಾನಿಯಲ್ಲೇ ಇದ್ದಂತಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ 1,338 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಸೋಂಕಿನಿಂದ ಮುಕ್ತವಾಗಿರುವ ಮೂರು ಜಿಲ್ಲೆಗಳಲ್ಲೂ ಕೊರೋನಾ ಪರೀಕ್ಷೆಗಳನ್ನು ಮುಂದುವರೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಉಳಿದಂತೆ ಯಾದಗಿರಿ 2, ರಾಯಚೂರು 4, ಬಾಗಲಕೋಟೆ 5, ವಿಜಯಪುರ ಜಿಲ್ಲೆಯಲ್ಲಿ 5 (ಕನಿಷ್ಠ) ಸಕ್ರಿಯ ಸೋಂಕು ಇದೆ. ಹಾಸನದಲ್ಲಿ 133, ದಕ್ಷಿಣ ಕನ್ನಡ, ಮೈಸೂರು 123, ತುಮಕೂರು 122, ಬಳ್ಳಾರಿ 117, ಶಿವಮೊಗ್ಗ 89, ಉತ್ತರ ಕನ್ನಡ 85, ಉಡುಪಿ 48, ಮಂಡ್ಯ 43, ಬೆಳಗಾವಿ 61, ಬೆಂಗಳೂರು ಗ್ರಾಮಾಂತರದಲ್ಲಿ 56 ಸೋಂಕಿತರಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಗದಗ: ಅ.16ರಿಂದ ಒಂದೂ ಪ್ರಕರಣ ಇಲ್ಲ

* ಹಾವೇರಿ: ನ.11ರ ನಂತರ ಒಬ್ಬರಿಗೂ ಸೋಂಕಿಲ್ಲ

* ಬೀದರ್‌: ನ.14ರಿಂದ ಹೊಸ ಪ್ರಕರಣ ಪತ್ತೆ ಇಲ್ಲ

ಕೋವಿಡ್‌ನಿಂದ ಮೃತ 90 ಪೊಲೀಸ್‌ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 90 ಪೊಲೀಸರ ಕುಟುಂಬಗಳಿಗೆ ದೆಹಲಿ ಮೂಲದ ‘ಮ್ಯಾನ್‌ಕೈಂಡ್‌ ಫಾರ್ಮಾ ಕಂಪನಿ’ಯಿಂದ ತಲಾ 3 ಲಕ್ಷ ರು.ನಂತೆ ಒಟ್ಟು 2.70 ಕೋಟಿ ರು. ಮೊತ್ತದ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಪರಿಹಾರದ ಚೆಕ್‌ಗಳನ್ನು ವಿತರಿಸಿ ಮಾತನಾಡಿ, ಕೊರೋನಾದಿಂದ ಮೃತಪಟ್ಟಪೊಲೀಸರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 30 ಲಕ್ಷ ರು. ಪರಿಹಾರ ನೀಡಿದೆ. ಅಂತೆಯೆ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಸಹ ನೀಡಲಾಗುತ್ತಿದೆ. ಹೀಗಾಗಿ ನಿಮ್ಮೊಂದಿಗೆ ಸರ್ಕಾರವಿದ್ದು, ಇನ್ನು ಮುಂದೆಯೂ ಧೈರ್ಯದಿಂದ ಇರುವಂತೆ ನೊಂದ ಪೊಲೀಸ್‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮ್ಯಾನ್‌ಕೈಂಡ್‌ ಫಾರ್ಮಾ ಕಂಪನಿಯ ಸೀನಿಯರ್‌ ಡಿವಿಷನಲ್‌ ಮ್ಯಾನೇಜರ್‌ ಮನೀಶ್‌ ಅರೋರಾ ಇದ್ದರು.