G Parameshwara on cabinet reshuffle: ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ ಪುನಾರಚನೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ದಾವಣಗೆರೆ (ನ.30): ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ದಾವಣಗೆರೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸಿಎಂ ಬದಲಾವಣೆ ಚರ್ಚೆಗೆ ವಿರಾಮ

ಸಿಎಂ, ಡಿಸಿಎಂ, ಮತ್ತು ಗೃಹ ಸಚಿವ ಪರಮೇಶ್ವರ ಪರವಾಗಿ ಬೆಂಬಲಿಗರು ಪ್ರಾರ್ಥನೆ ಮಾಡುತ್ತಿರುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, 'ದೇವರಿಗೆ ಯಾರು ಪ್ರಾರ್ಥನೆ ಮಾಡುತ್ತಾರೆ ಅವರನ್ನು ಕೇಳಬೇಕು' ಎಂದು ನುಣುಚಿಕೊಂಡರು. ಆದರೆ, ಆಂತರಿಕ ಗೊಂದಲದ ಕುರಿತು ಮಾತನಾಡುವುದನ್ನು ನಿರಾಕರಿಸಿದರು.

ಈಗಾಗಲೇ ಸಿಎಂ ಮತ್ತು ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಸದ್ಯಕ್ಕೆ ಯಾರೂ ಕೂಡ ಹೇಳಿಕೆ ಕೊಡಬಾರದು ಎಂದು ಸೂಚಿಸಿದ್ದಾರೆ. ಹೀಗಾಗಿ ಅದರ ಬಗ್ಗೆ ಯಾವುದೇ ಹೇಳಿಕೆ ಕೊಡಲ್ಲ. ಬೇರೆ ಸಚಿವರು ಕೂಡ ಹೇಳಿಕೆ ಕೊಡಲ್ಲ ಎಂದುಕೊಂಡಿದ್ದೇನೆ ಎಂದರು.

ಪ್ರಹ್ಲಾದ್ ಜೋಶಿ ಟೀಕೆಗೆ ತೀಕ್ಷ್ಣ ತಿರುಗೇಟು

ಸಿಎಂ ಮತ್ತು ಡಿಸಿಎಂ ಪರಸ್ಪರ ಬಾವಿ ತೋಡಿಕೊಳ್ಳುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಗೃಹ ಸಚಿವರು, 'ಪ್ರಹ್ಲಾದ್ ಜೋಶಿ ಏನು ನಮ್ಮ ಪಕ್ಷದವರಾ? ಅವರು ನಮ್ಮ ಪಕ್ಷದವರು ಆಗಿದ್ದರೆ, ಅವರು ಹೇಳಿದ್ದನ್ನು ಪಾಲಿಸುತ್ತಿದ್ದೆವು. ಆದರೆ ಅವರು ನಮ್ಮ ಪಕ್ಷದವರು ಅಲ್ಲ' ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ವಿಧಾನಸೌಧದಲ್ಲಿ ಶಾಸಕರ ಖರೀದಿ ಕೇಂದ್ರ ತೆರೆಯಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ, 'ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದು ಮೊದಲು ಪ್ರಶ್ನಿಸಿಕೊಳ್ಳಲಿ' ಎಂದು ಹಳೆಯ ದಿನಗಳನ್ನು ನೆನಪಿಸಿದರು.

ತಪ್ಪು ಮಾಡಿದ್ರೆ ಪೊಲೀಸರ ಮೇಲೂ ಕಠಿಣ ಕ್ರಮ:

ಇತ್ತೀಚೆಗೆ ಪೊಲೀಸ್ ಸಿಬ್ಬಂದಿಯೇ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಕುರಿತು ಮಾತನಾಡಿದ ಸಚಿವರು, ದರೋಡೆಗಿಳಿದರೆ ಪೊಲೀಸರ ಮೇಲೂ ಯಾವುದೇ ಮುಲಾಜು ನೋಡದೇ ಕಠಿಣ ಕ್ರಮ. ನೇರವಾಗಿ ಭಾಗಿಯಾದವರನ್ನು ತತ್‌ಕ್ಷಣ ಡಿಸ್ಮಿಸ್ ಮಾಡುತ್ತೇವೆ. ಚೆನ್ನಾಗಿ ಕೆಲಸ ಮಾಡಬೇಕು, ಇಲಾಖೆಯ ಶಿಸ್ತು ಕಾಪಾಡಬೇಕು. ಎಂದರು. ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಕೇಸ್‌ನಲ್ಲಿ ಭಾಗಿಯಾದ ಪೇದೆಯನ್ನು ವಜಾ ಮಾಡಲಾಗಿದೆ. ಮಾಲೂರು ಮತ್ತು ದಾವಣಗೆರೆ ಪ್ರಕರಣಗಳಲ್ಲಿ ಒಬ್ಬ ಪಿಎಸ್‌ಐ ವಜಾ ಮತ್ತು ಇನ್ನೊಬ್ಬ ಪಿಎಸ್‌ಐ ಸಸ್ಪೆಂಡ್ ಮಾಡಲಾಗಿದೆ ಎಂದು ಉದಾಹರಣೆ ನೀಡಿದರು.

ಇದೇ ವೇಳೆ ದಾವಣಗೆರೆಯಲ್ಲಿ ಜೆಡಿಎಸ್ ನಾಯಕ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಇನ್ನೂ ಯಾಕೆ ಬಂಧಿಸಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬಂಧನವಾಗದ ವಿಚಾರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೊಸ ನೇಮಕಾತಿಗೆ ಚಾಲನೆ: 2 ವರ್ಷ ವಯೋಮಿತಿ ಸಡಿಲಿಕೆ

ಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಸಚಿವರು ಮಹತ್ವದ ಮಾಹಿತಿ ನೀಡಿದರು. ಪಿಎಸ್‌ಐ ನೇಮಕಾತಿ ಹಗರಣವನ್ನು ಬಗೆಹರಿಸಿ ಈಗಾಗಲೇ 900 ಪಿಎಸ್‌ಐಗಳನ್ನು ನೇಮಕ ಮಾಡಲಾಗಿದೆ. ಇನ್ನೂ 600 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕ ಪ್ರಕ್ರಿಯೆಯಲ್ಲಿದೆ. 14-15 ಸಾವಿರ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದು, ಸದ್ಯ 3600 ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡಲಾಗುವುದು. ನೇಮಕಾತಿ ವೇಳೆ ಆಕಾಂಕ್ಷಿಗಳಿಗೆ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದರು.

ಇದೇ ವೇಳೆ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಸಭೆಯು ನಾಳೆಯಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಕುರಿತು ಚರ್ಚಿಸಲು ಕರೆದ ಸಭೆಯಾಗಿರಬಹುದು, ಅಲ್ಲಿ ಕರ್ನಾಟಕದ ಒಂದೇ ವಿಷಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಎಫ್‌ಐಆರ್ ಕುರಿತು ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.