ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾಗಿಟ್ಟ ಹಣವನ್ನು ರಾಜ್ಯ ಸರ್ಕಾರ, ಚುನಾವಣೆಯ ವೇಳೆ ತಾನು ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪ ಮಾಡಿದ್ದು, ಅನುದಾನ ಬಳಸಿಕೊಂಡಿದ್ದನ್ನು ಸಚಿವ ಎಚ್‌ಸಿ ಮಹದೇವಪ್ಪ ಕೂಡ ಒಪ್ಪಿಕೊಂಡಿದ್ದಾರೆ.
ಬೆಂಗಳೂರು (ಆ.1): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾದ ನಿಧಿಯಿಂದ 11 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಾಗಿ ಬಳಸಿಕೊಳ್ಳಲಿದೆ. ತನ್ನ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕಾಗಿ ಪರಿಶಿಷ್ಟರ ಮೀಸಲು ಹಣವನ್ನು ಬಳಕೆ ಮಾಡುವುದಾಗಿ ತಿಳಿಸಿದೆ. ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಅಡಿಯಲ್ಲಿ 34,293.69 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ಅಂತಿಮಗೊಳಿಸಿದೆ. ಇದು ಎಸ್‌ಸಿ/ಎಸ್‌ಟಿ ಕಲ್ಯಾಣಕ್ಕೆ ಖರ್ಚು ಮಾಡುವುದನ್ನು ಕಡ್ಡಾಯಗೊಳಿಸಿದೆ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಲುವಾಗಿ ಎಸ್‌ಸಿ/ಎಸ್‌ಟಿ ಉಪಯೋಜನೆಯ ಹಣವನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿ ಮಾಡಿದೆ.
ಐದು ಗ್ಯಾರಂಟಿಗಳಿಗಾಗಿ ಎಸ್‌ಸಿಎಸ್‌ಪಿ ಅಡಿಯಲ್ಲಿ 7,700 ಕೋಟಿ ಮತ್ತು ಟಿಎಸ್‌ಪಿ ಅಡಿಯಲ್ಲಿ 3,430 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ. ಎಸ್‌ಸಿ/ಎಸ್‌ಟಿ ಫಲಾನುಭವಿಗಳ ಸಂಖ್ಯೆಯನ್ನು ಗುರುತಿಸುವ ಮೂಲಕ ಗ್ಯಾರಂಟಿಗಾಗಿ ಉಪ-ಯೋಜನೆಯ ಹಣವನ್ನು ಬಳಸುವುದನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ' ಗ್ಯಾರಂಟಿ ಅಡಿಯಲ್ಲಿ ಎಷ್ಟು ಎಸ್‌ಸಿ/ಎಸ್‌ಟಿ ಜನರು ಪ್ರಯೋಜನ ಪಡೆಯುತ್ತಾರೆ ಎನ್ನುವುದರ ಕುರಿತೂ ವಿವರಗಳನ್ನು ನೀಡಲು ನಾವು ಇಲಾಖೆಗಳನ್ನು ಕೇಳಿದ್ದೇವೆ' ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಎಷ್ಟು ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಶಕ್ತಿ ಯೋಜನೆ ಬಳಸಿದ್ದಾರೆ ಎನ್ನುವ ಮಾಹಿತಿ ನಮಗೆ ತಿಳಿದಿಲ್ಲ. ಒಬ್ಬ ಮಹಿಳೆ 30 ಬಾರಿ ಪ್ರಯಾಣ ಮಾಡಿದರೆ ನಾವು ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಜಾರಿಗಾಗಿ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕಿದೆ.
ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ ಮತ್ತು ಹಣಕಾಸು ಸಂಪನ್ಮೂಲಗಳ ಬಳಕೆ) ಕಾಯಿದೆಯು SC/ST ಕಲ್ಯಾಣಕ್ಕಾಗಿ ಸರ್ಕಾರವು ತನ್ನ ಒಟ್ಟು ಬಜೆಟ್‌ನ 24.1% ರಷ್ಟು ಖರ್ಚು ಮಾಡಬೇಕಾಗುತ್ತದೆ. ಐದು ಗ್ಯಾರಂಟಿಗಳಿಗಾಗಿ ಹೆಚ್ಚುವರಿ ಹಂಚಿಕೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಿಂತಿರುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಸ್ಪಷ್ಟವಾಗಿ ಸೂಚನೆ" ನೀಡಿದ್ದಾರೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ತೆರಿಗೆ ಹೆಸರಲ್ಲಿ ಕಲೆಕ್ಷನ್‌ಗೆ ಕುಂತ ಸರ್ಕಾರ, ಬಡವರ ಬದುಕು ನಾಳೆಯಿಂದ ದುರ್ಬರ!
2023-24ರ ಬಜೆಟ್ ಗಾತ್ರ 3.28 ಲಕ್ಷ ಕೋಟಿ ರೂಪಾಯಿ ಆಗಿದೆ. ಇದರಲ್ಲಿ 1.42 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಮೀಸಲಿಡಲಾಗಿದ್ದು, ಇದರಲ್ಲಿ ಶೇ.24.1 ಅಂದರೆ, 34,221.49 ಕೋಟಿ ರೂಪಾಯಿಗಳನ್ನು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಡಲಾಗಿದೆ. ಕಳೆದ ವರ್ಷದ ಬಳಕೆಯಾಗದ 72.70 ಕೋಟಿ ರೂ.ಗಳನ್ನು ಇದಕ್ಕೆ ಸೇರಿಸಲಾಗಿದೆ. ಎಸ್‌ಸಿಗಳಿಗೆ 24,333 ಕೋಟಿ ಮತ್ತು ಎಸ್‌ಟಿಗಳಿಗೆ 9,961 ಕೋಟಿ ರೂ. ಮೀಸಲಿಡಲಾಗಿದೆ.
ಐದು ಗ್ಯಾರಂಟಿಗಳ ಕಾರಣದಿಂದ ಈ ವರ್ಷ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಫಲಾನುಭವಿಗಳ ಮೇಲೆ ಬೀರಿರುವ ಪರಿಣಾಮದ ಕುರಿತು ವರದಿ ಸಲ್ಲಿಸುವಂತೆ ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 'ಒಲ್ಲದ ಮನಸ್ಸಿನಿಂದಲೇ ಹಣ ಬಳಕೆ ಮಾಡಲು ಸಮ್ಮತಿ ಸೂಚಿಸಲಾಗಿದೆ' ಎಂದು ಹೇಳಿದ್ದಾರೆ.
