ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದ ಮೂಲಕ ಪ್ರವಾಸಿಗರಿಗೆ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಈ ಚಟುವಟಿಕೆಹಳಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಉಲ್ಲಂಘನೆ ಮತ್ತು ಹುಲಿ ಮೀಸಲಿನ ಭದ್ರತೆಗೆ ಧಕ್ಕೆ ಆಗುತ್ತಿದೆ.
ಚಾಮರಾಜನಗರ (ಜೂ. 13): ರಾಜ್ಯದ ಹೆಮ್ಮೆಯ ಹುಲಿ ಮೀಸಲು ಬಂಡೀಪುರ ಮತ್ತೆ ಹೊಸ ವಿವಾದದ ಕೇಂದ್ರಬಿಂದುವಾಗಿದೆ. ಈ ಬಾರಿ ವಿವಾದಕ್ಕೆ ಕಾರಣ ಆಗಿರುವುದು 'ಫ್ರೆಂಡ್ಸ್ ಆಫ್ ಬಂಡೀಪುರ' ಎಂಬ ಅರಣ್ಯ ಇಲಾಖೆ ನಡೆಸುತ್ತಿರುವ ವಿಶೇಷ ಪ್ರವಾಸಿ ಕಾರ್ಯಕ್ರಮ. ಹುಲಿ ಸಂರಕ್ಷಿತ ಪ್ರದೇಶದ ಅತಿ ಸೂಕ್ಷ್ಮ ಭಾಗಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೂಲಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಪರಿಸರ ಜಾಗೃತಿ ಹೆಸರಿನಲ್ಲಿ ಅಪಾಯಕರ ಪ್ರವೇಶ?
'ಫ್ರೆಂಡ್ಸ್ ಆಫ್ ಬಂಡೀಪುರ' ಎಂಬ ಹೆಸರಿನಲ್ಲಿ ಕಳೆದ ಎಂಟು ತಿಂಗಳಿಂದ ಅರಣ್ಯ ಇಲಾಖೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಪ್ರವಾಸಿಗರು, ಮಕ್ಕಳಿಗೆ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಉದ್ದೇಶವಿದೆ. ಮೂರು ದಿನ, ಎರಡು ರಾತ್ರಿ ನಡೆಯುವ ಈ ಶಿಬಿರದಲ್ಲಿ ಇಲಾಖೆ ಸಣ್ಣ ಕಟ್ಟೆಗಳಲ್ಲಿ ವಾಸ್ತವ್ಯ, ಮೂರು ಬಾರಿ ಜಂಗಲ್ ಸಫಾರಿ, ತಜ್ಞರ ಉಪನ್ಯಾಸಗಳು ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತಿದೆ.
ಆದರೆ ಈ ಚಟುವಟಿಕೆಗಳು ಎನ್‌ಟಿಸಿಎ ವಿಧಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿವೆ ಎನ್ನಲಾಗಿದೆ. ಟೈಗರ್ ರಿಸರ್ವ್‌ನ ಗಸ್ತು ಶಿಬಿರಗಳು, ಕಾವಲು ಗೋಪುರಗಳು ಇತ್ಯಾದಿಗಳನ್ನು ಪ್ರವಾಸೋದ್ಯಮಕ್ಕೆ ಬಳಸುವಂತಿಲ್ಲ ಎಂಬ ನಿರ್ದಿಷ್ಟ ನಿರ್ಬಂಧವಿದೆ. ಇವು ಬೇಟೆಗಾರರಿಂದ ಸಂರಕ್ಷಿತವಾಗಬೇಕಾದ ಪ್ರದೇಶಗಳು. ಇಲ್ಲಿಗೆ ಜನರು ಪ್ರವೇಶ ನಿರ್ಬಂಧಿಸಿದ್ದರೂ ಹೀಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಕಳ್ಳಬೇಟೆ ಶಿಬಿರಗಳಿಗೆ ಪ್ರವೇಶ: ಭದ್ರತೆಗೆ ಧಕ್ಕೆ
ಅರಣ್ಯಾಧಿಕಾರಿಗಳು 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದ ಭಾಗವಾಗಿ ಪ್ರವಾಸಿಗರನ್ನು ಕೋರ್ ಟೈಗರ್ ಹ್ಯಾಬಿಟಾಟ್‌ನ ಒಳಗಿರುವ ಕಳ್ಳಬೇಟೆ ತಡೆ ಶಿಬಿರಗಳಿಗೆ ಕರೆದುಕೊಂಡು ಹೋಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಇಂತಹ ಚಟುವಟಿಕೆಗಳ ವಿಡಿಯೋವನ್ನು ಇಲಾಖೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು, ಹುಲಿ ಮೀಸಲಿನ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸಿದೆ ಎಂಬ ಆರೋಪವಿದೆ. ಅರಣ್ಯ ಇಲಾಖೆಯ ಸೂಕ್ಷ್ಮ ಗಸ್ತು ಮಾರ್ಗಗಳು, ಪ್ರಾಣಿಗಳ ಚಲನೆ, ಗಸ್ತು ತಂತ್ರಜ್ಞಾನಗಳ ಕುರಿತು ನೀಡುವ ಮಾಹಿತಿ ಅರಣ್ಯದ ಭದ್ರತೆಯ ವಿರುದ್ಧ ಉಪಯೋಗವಾಗುವ ಸಾಧ್ಯತೆ ಉಂಟು. ಪ್ರವಾಸಿಗರ ಸೋಗಿನಲ್ಲಿ ಬೇಟೆಗಾರರು ಈ ಮಾಹಿತಿಯನ್ನು ಪಡೆದುಕೊಂಡು ದುರುಪಯೋಗ ಮಾಡುವ ಅಪಾಯ ಹೆಚ್ಚಾಗಿದೆ.
ದೇವಾಲಯದ ಸುತ್ತ ಸಂಚಾರಿ ಅವಕಾಶ:
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವಸ್ಥಾನದ ಆವರಣ ದಾಟಬಾರದೆಂಬ ಕಟ್ಟುನಿಟ್ಟಾದ ಆದೇಶವಿದ್ದರೂ, 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದ ಭಾಗವಾಗಿ ಪ್ರವಾಸಿಗರಿಗೆ ಹುಲ್ಲುಗಾವಲು ಸುತ್ತ ಸಂಚಾರ ಅವಕಾಶ ಕಲ್ಪಿಸಿರುವುದು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಸ್ತುತ ಈ ಎಲ್ಲಾ ಚಟುವಟಿಕೆಗಳಲ್ಲಿ ಅರಣ್ಯ ಇಲಾಖೆಯೊಂದಿಗೇ ನಿಯಮ ಉಲ್ಲಂಘನೆ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಎನ್‌ಟಿಸಿಎ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಪರಿಸರ ಸಂರಕ್ಷಣೆ ಎಂಬ ಹೆಸರಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಗಳು ವಾಸ್ತವದಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಭದ್ರತೆಗೆ ಧಕ್ಕೆ ತರುತ್ತಿರುವುದು ಸ್ಪಷ್ಟವಾಗಿದೆ.
