ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸಲು ಆರೋಗ್ಯ ಇಲಾಖೆ ಹೊಸ ಸಲಹಾ ಸೂಚಿ ಪ್ರಕಟಿಸಿದೆ. ಇದರ ಅನ್ವಯ, ಸಿರಿಧಾನ್ಯ ಆಧಾರಿತ ಆಹಾರ, ಹಣ್ಣು, ತರಕಾರಿ ಸಲಾಡ್‌ಗಳನ್ನು ನೀಡಬೇಕು ಮತ್ತು ಸಂಸ್ಕರಿತ, ಕರಿದ ಪದಾರ್ಥಗಳನ್ನು ನಿಷೇಧಿಸಲಾಗಿದೆ.

 ಬೆಂಗಳೂರು (ಏ.14): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸರ್ಕಾರಿ ಸಭೆ, ಕಾರ್ಯಕ್ರಮಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ಸಲುವಾಗಿ ಆರೋಗ್ಯ ಇಲಾಖೆ ಸಲಹಾ ಸೂಚಿ ಪ್ರಕಟಿಸಿದ್ದು, ‘ಸಿರಿಧಾನ್ಯ ಆಧಾರಿತ ಆಹಾರ, ಹಣ್ಣು ಹಾಗೂ ತರಕಾರಿ ಸಲಾಡ್‌ ಪೂರೈಸಬೇಕು. ಸಂಸ್ಕರಿತ ಆಹಾರ, ಕರಿದ ಪದಾರ್ಥಗಳನ್ನು ನೀಡಬಾರದು’ ಎಂದು ಹೇಳಿದೆ. ಸಭೆ, ಸಮಾರಂಭಗಳ ಜತೆಗೆ ಸರ್ಕಾರಿ ಕಚೇರಿಗಳಲ್ಲಿರುವ ಕ್ಯಾಂಟೀನ್‌, ಖಾನಾವಳಿಗಳಿಗೂ ಮಾರ್ಗಸೂಚಿ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನರ ಆರೋಗ್ಯದ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇಲಾಖೆಗಳ ಮುಖ್ಯಸ್ಥರು ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಬೇಕು. ಅರೋಗ್ಯಸೌಧದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಇದು ಕಡ್ಡಾಯ ಜಾರಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಫಾರಸುಗಳೇನು?:

ಒಳ ಸಭಾಂಗಣದಲ್ಲಿ ನಡೆಯಲಿರುವ ಸಭೆಗಳು ಹಾಗೂ ವಿರಾಮದ ವೇಳೆ ನೀಡುವ ಆಹಾರದಲ್ಲಿ ಸಿರಿಧಾನ್ಯವುಳ್ಳ ಲಘು ಉಪಾಹಾರ ನೀಡಬೇಕು. ಕಡಿಮೆ ಎಣ್ಣೆ, ಕಡಿಮೆ ಸಕ್ಕರೆ, ಹೆಚ್ಚು ನಾರುಳ್ಳ ಹಾಗೂ ಅಜಿನೊಮೋಟೊ ಬಳಸದ ಲಘು ಉಪಾಹಾರ ಒದಗಿಸಬೇಕು.

ಕತ್ತರಿಸಿದ ತಾಜಾ ಹಣ್ಣು ಹಾಗೂ ತರಕಾರಿಯಿಂದ ಸಿದ್ಧಪಡಿಸಿದ ಸಲಾಡ್ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ನೀಡಬೇಕು. ಬೇಯಿಸಿದ ಹುರಳಿಕಾಳು, ಬಟಾಣಿ, ಮೆಕ್ಕೆಜೋಳ ವಿತರಣೆ. ಉಪ್ಪು ರಹಿತ ಹುರಿದ ಬೀಜಧಾನ್ಯಗಳಾದ ಬಾದಾಮ್, ಆಕ್ರೋಟ್, ನೆಲಗಡಲೆ, ಕುಂಬಳಕಾಯಿ, ಸೂರ್ಯಕಾಂತಿ, ಕುಸುಬೆ, ಅಗಸೆ ಮುಂತಾದ ಹುರಿದ ಬೀಜಗಳನ್ನು ನೀಡಬಹುದು.

ಕಡಿಮೆ ಕೊಬ್ಬಿನಾಂಶ ಹಾಗೂ ಕಡಿಮೆ ಸಕ್ಕರೆಯುಳ್ಳ ಲಘು ಪಾನೀಯಗಳು, ಹಸಿರು ಚಹಾ, ಮಜ್ಜಿಗೆ ನೀಡಬಹುದು ಎಂದು ಹೇಳಲಾಗಿದೆ.

ಸರ್ಕಾರಿ ಕಾರ್ಯಕ್ರಮ, ಸಭೆ, ಪ್ರದರ್ಶನಗಳ ಮೆನು

ಸಿರಿಧಾನ್ಯವುಳ್ಳ ಪದಾರ್ಥಗಳನ್ನು ಸೇರಿಸುವುದು ಕಡ್ಡಾಯ. ಮಾಂಸಾಹಾರ ನೀಡುವುದಾದರೆ ಚೆನ್ನಾಗಿ ಬೇಯಿಸಿದ ಮಾಂಸ ಬಳಕೆ, ಅಕ್ಕಿ ಪದಾರ್ಥಗಳಲ್ಲಿ ಬಿಳಿ ಅಕ್ಕಿಯ ಬದಲು ಬ್ರೌನ್ ರೈಸ್ ಬಳಕೆ, ತರಕಾರಿ ಸಲಾಡ್, ಮೊಳಕೆ ಕಟ್ಟಿದ ಕಾಳು, ಕತ್ತರಿಸಿದ ಹಣ್ಣು ಅಥವಾ ಕಡಿಮೆ ಸಕ್ಕರೆಯುಳ್ಳ ಹಣ್ಣಿನ ರಸ ನೀಡಬೇಕು. ಸ್ಥಳೀಯವಾಗಿ ಸಂಸ್ಕರಿಸಿದ ಅಥವಾ ಕುದಿಸಿದ ನೀರನ್ನು ಗಾಜಿನ ಬಾಟಲ್‌ನಲ್ಲಿ ನೀಡಬೇಕು ಎಂದು ಹೇಳಲಾಗಿದೆ.