Surapura: ಸ್ವಾತಂತ್ರ್ಯ ಸೇನಾನಿ ಸುರಪುರದ ವೆಂಕಟಪ್ಪನಾಯಕ
ದಕ್ಷಿಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ್ದ ವೆಂಕಟಪ್ಪನಾಯಕನನ್ನು ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದಲೇ ಸುರಪುರಕ್ಕೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿ ಕ್ಯಾಂಬೆಲ್ ಹೈದರಾಬಾದ್ ರೆಸಿಡೆಂಟನಿಗೆ..‘ವೆಂಕಟಪ್ಪನಾಯಕನನ್ನು ಕೊಲ್ಲದಿದ್ದರೆ ದಕ್ಷಿಣ ಭಾರತದಲ್ಲಿ ನಾವು ತಳವೂರಲು ಸಾಧ್ಯವಿಲ್ಲ’ ಎಂದು ಹೇಳಿದ್ದ. ನಂತರ ನಾಯಕನನ್ನು ಹತ್ಯೆಗೈದ ಬ್ರಿಟಿಷರು, ಜನರು ಬಂಡೇಳುತ್ತಾರೆ ಎಂಬ ಕಾರಣಕ್ಕೆ ಸ್ವತಃ ಅರಸನೇ ಆತ್ಮಹತ್ಯೆ ಮಾಡಿಕೊಂಡ ಎಂದು ಸುಳ್ಳುಸುದ್ದಿ ಹರಡಿದರು.
- ಡಾ.ಅಮರೇಶ ಯತಗಲ್
ಯಾದಗಿರಿ ಜಿಲ್ಲೆಯ ಸುರಪುರ ಸಂಸ್ಥಾನದ ಪ್ರಸಿದ್ಧ ಅರಸ ನಾಲ್ವಡಿ ವೆಂಕಟಪ್ಪನಾಯಕ ಕ್ರಿ.ಶ. 1843 ರಿಂದ 1858 ರವರೆಗೆ ಆಳ್ವಿಕೆ ಮಾಡಿದ್ದಾನೆ. ಭಾರತದಲ್ಲಿ ಕ್ರಿ.ಶ.1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಗಾಳಿ ಜೋರಾಗಿ ಬೀಸುತ್ತಿತ್ತು. ಆಗ ದಕ್ಷಿಣ ಭಾರತದ ರಾಜರನ್ನೆಲ್ಲ ಒಗ್ಗೂಡಿಸಿ, ಬ್ರಿಟಿಷರನ್ನು ಕಾಲ್ತೆಗೆಸಬೇಕೆಂಬ ಮಹಾದಾಸೆಯನ್ನು ವೆಂಕಟಪ್ಪ ನಾಯಕ ಹೊಂದಿದ್ದನು.
ಜಮಖಂಡಿ, ಆನೆಗೊಂದಿ, ನರಗುಂದ, ಹುನಗುಂದ, ಶಿರಹಟ್ಟಿ, ಅಕ್ಕಲಕೋಟೆ, ಕೊಲ್ಲಾಪುರ, ಬಳ್ಳಾರಿ, ಮೀರಜ್, ಜತ್, ಮುಧೋಳ, ಧಾರವಾಡ, ಕಲಾದಗಿ, ರಾಯಚೂರು ಮುಂತಾದ ಭಾಗದ ಅರಸರು ವೆಂಕಟಪ್ಪ ನಾಯಕನನ್ನು ಹೋರಾಟದ ನೇತೃತ್ವವಹಿಸಿಕೊಳ್ಳಲು ಕೋರಿಕೊಂಡರು. ಆಗ ವೆಂಕಟಪ್ಪ ನಾಯಕ ತನ್ನ ಅಧೀನದ ಸೈನಿಕರಿಗೆ ವ್ಯವಸ್ಥಿತವಾದ ತರಬೇತಿಯನ್ನು ನೀಡಿದನಲ್ಲದೇ, ತನ್ನ ಸೈನ್ಯಕ್ಕೆ ಶೂರ ಬೇಡರನ್ನು, ಅರಬ್‌ರನ್ನು, ರೋಹಿಲ್‌ರನ್ನು ಸೇರಿಸಿಕೊಂಡನು. ಅಂದು ಸುರಪುರವು ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರದ ಪ್ರಮುಖ ತಾಣವಾಯಿತು. ಇದನ್ನು ಅರಿತ ಬ್ರಿಟಿಷರು, ವೆಂಕಟಪ್ಪ ನಾಯಕನನ್ನು ಸದೆಬಡೆಯಲು ಆಲೋಚಿಸಿದರು. ಸುರಪುರವನ್ನು ಆಕ್ರಮಿಸಬೇಕೆಂಬ ತಂತ್ರಗಳನ್ನು ಹೂಡಲು ಪ್ರಯತ್ನಿಸಿ, ಈತನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಹತ್ತಿದರು. ಆದರೆ ತಕ್ಷಣವೇ ಅದು ಫಲಿಸಲಿಲ್ಲ.
ಡಾಲ್‌ಹೌಸಿಗೆ ತಿರುಗಿಬಿದ್ದ ವೆಂಕಟಪ್ಪ ನಾಯಕ
ವೆಂಕಟಪ್ಪನಾಯಕ(Venkatappanayaka)ನ ಅನೇಕ ಕಾರ್ಯತಂತ್ರಗಳನ್ನು ಗಮನಿಸಿದ ಬ್ರಿಟಿಷರು ಬೆಳಗಾವಿಯ 29ನೇ ನಂಬರಿನ ದಳದಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಿ ಸೈನ್ಯದಲ್ಲಿ ದಂಗೆಯನ್ನು ಎಬ್ಬಿಸಲು ವೆಂಕಟಪ್ಪನಾಯಕ ಮಹಿಪಾಲಸಿಂಗನೆಂಬ ಗೂಢಾಚಾರನನ್ನು ಕಳುಹಿಸಿದಾಗ, ಈತನನ್ನು ಗುರುತಿಸಿದ ಬ್ರಿಟಿಷರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ, ಇದಕ್ಕೆ ವೆಂಕಟಪ್ಪನಾಯಕನೇ ಕಾರಣವೆಂದು ಗೊತ್ತಾಯಿತು.
ಫೆಬ್ರುವರಿ 7, 1858 ರಂದು ವೆಂಕಟಪ್ಪನಾಯಕನ ಮೇಲೆ ಯುದ್ಧ ಸಾರಿದರು. ಕ್ಯಾಪ್ಟನ್ ವಿಂಡ್‌ಹ್ಯಾಂ ಎಂಬ ಬ್ರಿಟಿಷ್ ಸೈನ್ಯದ ಕ್ಯಾಪ್ಟನ್ ಸುರಪುರದಿಂದ 5 ಕಿ.ಮೀ. ಅಂತರದಲ್ಲಿರುವ ರುಕ್ಮಾಪುರ ದಿಬ್ಬದ ಮೇಲೆ ಶಿಬಿರವನ್ನು ಹಾಕಿದನು. ನಂತರ ಹೆಚ್ಚಿನ ಪ್ರಮಾಣದ ಬ್ರಿಟಿಷ್ ಸೈನ್ಯವು ಬಂದು ಅವರನ್ನು ಸೇರಿಕೊಂಡಿತು. ಸುರಪುರ ಸೈನ್ಯ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡಿತು. ಬ್ರಿಟಿಷ್ ಸೈನಿಕರನೇಕರು ಗಾಯಗೊಂಡರು. ಸುದ್ದಿಯು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯಿತು. ಮರುದಿನವೇ ಬ್ರಿಟಿಷರ ಮೇಜರ್ ಹ್ಯಾಗ್ಸನ ನೇತೃತ್ವದ ಸೈನ್ಯ ವಿಂಡಹ್ಯಾಂನ ಸೈನ್ಯಕ್ಕೆ ಬಂದು ಸೇರಿಕೊಂಡಿತು. ಆಗ ಸೇನಾಪತಿ ಕ್ಯಾಪ್ಟನ್ ಜಾಜ್‌ರ್ ನ್ಯೂಬರಿ ಸುರ ಪುರದ ಮೇಲೆ ದಾಳಿ ಮಾಡಿದನು.ಆತ ವೆಂಕಟಪ್ಪ ನಾಯಕನ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿದನು. ಈತನ ಸಮಾಧಿಯು ರುಕ್ಮಾಪುರದ ಹತ್ತಿರ ಇದೆ. ಆಗ ಬ್ರಿಟಿಷರು ಮದ್ರಾಸ್ ಹಾಗೂ ಲಿಂಗಸೂಗೂರುಗಳಲ್ಲಿ ಬೀಡುಬಿಟ್ಟಿದ್ದ ಸೈನ್ಯವನ್ನು ಕರೆಸಿಕೊಂಡು ಸುರಪುರದ ಮೇಲೆ ದಾಳಿ ಮಾಡಿದರು. ಸುರಪುರದ ಕೆಲ ಅತೃಪ್ತ ಅಧಿಕಾರಿಗಳು, ಬ್ರಿಟಿಷರ ಹಣದ ಆಸೆಗೆ ಬಲಿಯಾಗಿ, ವೆಂಕಟಪ್ಪನಾಯಕನಿಗೆ ಮೋಸ ಮಾಡಿದರು. ಗುಪ್ತಮಾರ್ಗಗಳ ಮಾಹಿತಿ ನೀಡಿದರು. ಸುರಪುರ ಸಂಪೂರ್ಣ ಬ್ರಿಟಿಷರ ವಶವಾಯಿತು.
ವೆಂಕಟಪ್ಪನಾಯಕ ಹೈದರಾಬಾದ್‌ಗೆ ತೆರಳಿದನು. ಸುರಪುರ ಸೈನ್ಯವನ್ನು ಇನ್ನಷ್ಟುಸಂಘಟಿಸಬೇಕು, ಬ್ರಿಟಿಷರನ್ನು ಕಾಲ್ತೆಗೆಸಬೇಕೆಂಬ ಛಲದಿಂದ ಅರಬ್ ರೋಹಿಲ್‌ರನ್ನು ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುತ್ತಿದ್ದ, ಇದನ್ನು ಗಮನಿಸಿದ ಹೈದರಾಬಾದ್ ನಿಜಾಮನ ಮಂತ್ರಿ ಸಾಲಾರಜಂಗ್ ಹಾಗೂ ವನಪರ್ತಿಯ ಅರಸ ರಾಮೇಶ್ವರರಾವ್ ಕೂಡಲೇ ವೆಂಕಟಪ್ಪ ನಾಯ ಕನನ್ನು ಬಂಧಿಸಿ, ಬ್ರಿಟಿಷ್ ರೆಸಿಡೆಂಟನಿಗೆ ಒಪ್ಪಿಸಿದರು. ಈತನನ್ನು ಸಿಕಂದ್ರಾಬಾದ್ ಜೈಲಿನಲ್ಲಿಡಲಾಯಿತು. ಬ್ರಿಟಿಷ್ ಬ್ರಿಗೇಡಿಯರ್‌ನ ನೇತೃತ್ವದ ಮಿಲಿಟರಿ ಅಧಿಕಾರಿಗಳ ನ್ಯಾಯಾ ಲಯದಲ್ಲಿ ವಿಚಾರಣೆಯಾಯಿತು. ಮರಣದಂಡನೆಯನ್ನು ವಿಧಿಸಿತು. ಕೊನೆಗೆ ರೆಸಿಡೆಂಟ್ ಡ್ಯಾವಿಡ್‌್ಸನ್‌ನ ಕೋರಿಕೆಯಂತೆ ಆಜನ್ಮ ಕಾರಾವಾಸಕ್ಕೆ ಶಿಕ್ಷೆಯನ್ನು ಬದಲಿಸಿದನು. ಗೌರ್ನರ್ ಜನರಲ್ 4 ವರ್ಷ ಸೆರೆಮನೆವಾಸವೆಂದು ನಿಗದಿಗೊಳಿಸಿದನು.
ಬ್ರಿಟಿಷ್ ಸೈನಿಕರ ಸರ್ಪಗಾವಲು, ಲೆಫ್ಟಿನೆಂಟ್ ಪಿಕ್‌ಟಾಟ್‌ನ ನೇತೃತ್ವದಲ್ಲಿ ಮದ್ರಾಸ್ ಹತ್ತಿರದ ಚಂಗಾಲಪೇಟೆಗೆ ವೆಂಕಟಪ್ಪನಾಯಕನನ್ನು ಕರೆದುಕೊಂಡು ಹೋಗುವಾಗ, ಸಿಕಂದ್ರಾಬಾದ್‌ನಿಂದ ಹುಸೇನಸಾಗರದಿಂದ 6 ಮೈಲು ದೂರದಲ್ಲಿರುವ ಅಂಬರಪೇಟೆಯಲ್ಲಿ ಬಿಡಾರ ಹೂಡಿದರು. ಬಿಡಾರದಲ್ಲಿ ಲೆಪ್ಟಿಂನೆಂಟ್ ಪಿಕ್‌ಟಾಟ್ ರಿವಾಲ್ವರ್ ಅಲ್ಲಿಯೇ ಇಟ್ಟು ಮುಖ ತೊಳೆಯಲು ಹೋದನು. ಆತ ಮರಳಿ ಬರುವಷ್ಟರಲ್ಲಿಯೇ ವೆಂಕಟಪ್ಪನಾಯಕ ರಕ್ತದ ಮಡುವಿನಲ್ಲಿ ಬಿದ್ದಿದ್ದ, ಗುಂಡು ಆತನ ಹೊಟ್ಟೆಯಿಂದ-ಬೆನ್ನಿನೊಳಗಿಂದ ಹೊರ ಬಂದಿತ್ತು. ಸ್ವತಃ ಅರಸನೇ ಆತ್ಮಹತ್ಯೆ ಮಾಡಿಕೊಂಡ ಎಂದು ಬ್ರಿಟಿಷರು ಸುಳ್ಳುಸುದ್ದಿ ಹಬ್ಬಿಸಿದರು.
ಕೆಲವು ಇತಿಹಾಸ ತಜ್ಞರು, ಆತ್ಮಹತ್ಯೆಯ ಕುರಿತು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ರೀತಿಯ ಆಧಾರಗಳನ್ನು ನೀಡಿಲ್ಲ. ಆದರೆ ಮೆಡೋಸ್ ಟೇಲರ್‌ನ ಕೃತಿಯಲ್ಲಿಯ ಕೆಲವು ಹೇಳಿಕೆಗಳು ಹಾಗೂ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ಜನಪದ ಸಾಹಿತ್ಯದ ಮೂಲಕ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನ ಕೊಲೆಯಾಗಿದೆ ಎಂಬುದಕ್ಕೆ ಪುಷ್ಟಿನೀಡುವ ಅಂಶಗಳು ಸಾಕಷ್ಟಿವೆ. ವೆಂಕಟಪ್ಪನಾಯಕನು ಕುತೂಹಲದಿಂದ ರಿವಾಲ್ವರ್‌ನ್ನು ತಿರುಗಿಸಿದ ಗುಂಡು ಹಾರಿತು, ಅಸುನೀಗಿದ ಎಂಬ ಮಾತು ಸತ್ಯಕ್ಕೆ ದೂರವಾದುದು. ಸುರಪುರ ಸಂಸ್ಥಾನದ ಸಂಸ್ಕಾರದಲ್ಲಿ ಬೆಳೆದ ಅರಸನಿಗೆ ರಿವಾಲ್ವರ್ ಪರಿಚಯವಿರಲಿಲ್ಲವೆ ? ಎಂಬ ಪ್ರಶ್ನೆ ಕಾಡುವುದು ಸಹಜ.
ಮೆಡೋಸ್ ಟೇಲರ್ ವೆಂಕಟಪ್ಪ ನಾಯಕನ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತು, ಡಾ. ಸೆಲ್ಲರ್ಸ್, ರಾಮರಾವ್ ಮುಂತಾದ ವಿದ್ವಾಂಸರಿಂದ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ. ಆ ಸಂದರ್ಭದಲ್ಲಿ ಕುದುರೆ ಸವಾರಿ, ನಾವಿ ಪ್ರಯಾಣ, ಗರಡಿ, ಕತ್ತಿವರಸೆ, ಬಂದೂಕು ವಿದ್ಯೆ, ಯುದ್ಧಕಲೆ ಮುಂತಾದವನ್ನು ಕಲಿಸಲಾಗಿತ್ತು.ಆಧುನಿಕ ತಾಂತ್ರಿಕ ಯುದ್ಧ ಸಾಮಗ್ರಿಗಳು ಪರಿಚಯವಿರುವಾಗ ವೆಂಕಟಪ್ಪನಾಯಕನಿಗೆ ರಿವಾಲ್ವರ್ ಹೊಸದಾಗಿ ಕಂಡಿತೇ? ಅಲ್ಲದೇ ಆ ಸಂದರ್ಭದಲ್ಲಿ ಹೈದರಾಬಾದ್, ಲಿಂಗಸೂಗೂರು, ದೇವದುರ್ಗ ಮುಂತಾದ ಸ್ಥಳಗಳಿಂದ ಬರುತ್ತಿದ್ದ ಬ್ರಿಟಿಷ್ ಮೇಲಾಧಿಕಾರಿಗಳ ಜೊತೆಗೆ ಸದಾ ಇರುತ್ತಿದ್ದ ವೆಂಕಟಪ್ಪನಾಯಕನಿಗೆ ಈ ರಿವಾಲ್ವರ್ ಕುತೂಹಲ ಹುಟ್ಟಿಸಿದ್ದೇಕೆ? ಈತನ ಸಾವಿನ ಕುರಿತಾದ ಟೇಲರ್ ನ ಹೇಳಿಕೆಯಲ್ಲಿಯೂ ಸತ್ಯವನ್ನು ಮರೆಮಾಚುವ ಯತ್ನ ನಡೆದಿದೆ. ಶಿಕ್ಷೆಯನ್ನು ಹೊರತುಪಡಿಸಿ ಅರಸನ ಸ್ಥಳಾಂತರ, ಸಾವು, ಪಂಚನಾಮೆ ಮಾಡಿದ್ದು ಮುಂತಾದ ಘಟನೆಗಳಲ್ಲಿ ಪ್ರತ್ಯಕ್ಷದರ್ಶಿಯಾಗಿರದೇ ಇರಬಹುದಾದರೂ ಅಲ್ಲಿ ನಡೆದ ಪ್ರತಿಯೊಂದೂ ಘಟನೆಗಳು ಈತನಿಗೆ ತಿಳಿಯುತ್ತಿರಲಿಲ್ಲವೆಂದಲ್ಲ. ಆದರೆ ಅವುಗಳ ಕುರಿತಾಗಿ ಈತ ಪ್ರಸ್ತಾಪವನ್ನೇ ಮಾಡಲಿಲ್ಲ.
ಕೊಲೆಗಾರರೇ ವೆಂಕಟಪ್ಪ ನಾಯಕನ ಶವವನ್ನು ಪಂಚನಾಮೆ ಮಾಡಿದ್ದು, ಅರಸನು ಹಾಕಿಕೊಂಡ ಗುಂಡು ಹೊಟ್ಟೆಯೊಳಗಿಂದ ಬೆನ್ನಲ್ಲಿ ತೇಲಿದೆ ಇದು ಆತ್ಮಹತ್ಯೆ ಎಂದು ವರದಿ ನೀಡಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಅರಸ ಆತ್ಮಹತ್ಯೆ ಮಾಡಿಕೊಳ್ಳಬೇಕಾದಾಗ ತಲೆ ಇಲ್ಲವೆ ಹೃದಯಕ್ಕೆ ಗುಂಡು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದು ವ್ಯವಸ್ಥಿತ ಸಂಚಿನ ಕೊಲೆಯೇ ಹೊರತು ಆತ್ಮಹತ್ಯೆ ಅಲ್ಲ. ಇದಕ್ಕೆ ಅನೇಕ ಬ್ರಿಟಿಷ್ ಅಧಿಕಾರಿಗಳ ಹೇಳಿಕೆಗಳೇ ಇಂಬು ನೀಡುತ್ತವೆ. ಅವರು ಒಪ್ಪಿ ಕೊಂಡಿರುವ ಕುರಿತಾದ ದಾಖಲೆಗಳಿವೆ.
ಬ್ರಿಟಿಷರು ವೆಂಕಟಪ್ಪನಾಯಕನನ್ನು ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ ಸುರಪುರಕ್ಕೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿ ಕ್ಯಾಂಬೆಲ್ ಹೈದರಾಬಾದ್ ರೆಸಿಡೆಂಟನಿಗೆ ವರದಿ ನೀಡಿದ್ದುದು ಹೀಗೆ, ವೆಂಕಟಪ್ಪನಾಯಕನನ್ನು ನಾಶಗೊಳಿಸದೇ ಇದ್ದರೆ, ದಕ್ಷಿಣ ಭಾರತದಲ್ಲಿ ನಾವು ತಳವೂರಲು ಸಾಧ್ಯವಿಲ್ಲ. ಆತನನ್ನು ಕೊಂದಿದ್ದುದು ಗೊತ್ತಾದರೆ ಜನರು ಬಂಡೇಳುತ್ತಾರೆ. ಆದುದರಿಂದ ವಿಚಾರಣೆಯ ನಾಟಕವಾಡಿ, ಅರಸನನ್ನು ಕೊಲೆ ಮಾಡಿ, ಸಹಾನುಭೂತಿಗಾಗಿ ಆತ್ಮಹತ್ಯೆಯ ನಾಟಕವಾಡಿದರು.ದಕ್ಷಿಣ ಮಹಾರಾಷ್ಟ್ರದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯದ ಯೋಜನೆಗಳಿದ್ದವೆಂದು ಈತನ ವಿಚಾರಣೆಯಿಂದ ತಿಳಿಯುತ್ತದೆ. ಅಲ್ಲದೆ ಮೀರತ್, ಕೊಲ್ಲಾಪುರ, ನರಗುಂದ, ಕೊಪ್ಪಳ, ರಾಯಚೂರು, ಸುರಪುರ ಮುಂತಾದ ಸ್ಥಳಗಳು ಬಂಡಾಯದ ಕೇಂದ್ರಗಳಾಗಿದ್ದವೆಂಬುದು ಸತ್ಯ.
ಝಾನ್ಸಿ, ಅವಧ್, ಗ್ವಾಲಿಯರ್, ಕಾನ್ಪುರ ಮುಂತಾದ ಉತ್ತರ ಭಾರತದ ಪ್ರದೇಶಗಳಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾವು ಏರಿತ್ತು. ಆಗ ಉತ್ತರ ಭಾರತದಲ್ಲಿ ನಾನಾಸಾಹೇಬ ಭಾರತದ ಸ್ವಾತಂತ್ರ್ಯ ಹೋರಾಟದ ಮುಖಂಡತ್ವ ವಹಿಸಿಕೊಂಡಂತೆ, ದಕ್ಷಿಣ ಭಾರತದಲ್ಲಿ ಸುರಪುರದ ನಾಲ್ವಡಿ ವೆಂಕಟಪ್ಪನಾಯಕನೇ ತಮ್ಮ ಮುಖಂಡನೆಂಬುದು ಸಂಸ್ಥಾನಿಕರು ಭಾವಿಸಿಕೊಂಡ ಅಂಶ ಬ್ರಿಟಿಷರಿಗೆ ತಿಳಿದಿತ್ತು. ಈ ಭಾಗದಲ್ಲಿ ಮುಂದೊಂದು ದಿನ ಭಯಂಕರ ಸಂಗ್ರಾಮವಾಗಬಹುದು ಹೀಗಾಗಿ ಈಗಲೇ ಈತನನ್ನು ಕೊಲೆಗೈಯ್ದರೆ ಮುಂದಿನ ದಿನಗಳಲ್ಲಿ ತಮ್ಮ ಸ್ಥಾನ ಸುರಕ್ಷಿತವಾಗುತ್ತದೆಂಬ ಯೋಚನೆಯನ್ನು ಬ್ರಿಟಿಷರು ಮಾಡಿ ಕೊಲೆ ಮಾಡಿರಲೇಬೇಕು. ಗಲ್ಲು ಶಿಕ್ಷೆಯನ್ನು ಕಡಿಮೆಗೊಳಿಸಿ, 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಸಹಾನುಭೂತಿಯನ್ನು ತೋರಿಸಿದ್ದುದು ಕೇವಲ ಬ್ರಿಟಿಷರ ಕಪಟನಾಟಕವಷ್ಟೆ. ಏಕೆಂದರೆ ಅವರಿಗೆ ಮುಂದೆ ಈತನನ್ನು ಕೊಲೆ ಮಾಡುವ ತಂತ್ರ ಹೂಡಿದ ಯೋಜನೆ ತಯಾರಾಗಿತ್ತಾದ್ದರಿಂದ ಇಂತಹ ನಾಟಕವನ್ನಾಡಿದರೂ ಅಷ್ಟೆ.
ನಾಲ್ವಡಿ ವೆಂಕಟಪ್ಪನಾಯಕ ಸಾವನ್ನಪ್ಪಿದ ಸಿಕಂದರಾಬಾದ್‌ನಿಂದ ಹುಸೇನಸಾಗರದಿಂದ ಪೂರ್ವಕ್ಕೆ ಆರು ಮೈಲಿ ದೂರದಲ್ಲಿದ್ದ ಅಂಬರಪೇಟೆಯಲ್ಲಿ. ಅಲ್ಲಿ ಈತನ ಸಮಾಧಿ ಇಲ್ಲ. ಇದರ ಕುರಿತಾಗಿ ಅಲ್ಲಿ ನೋಡಲು ಯಾವ ನಾಮಫಲಕವೂ ಇಲ್ಲ. ಅದನ್ನೇ ಬಾಗ (ತೋಟ) ಪ್ರದೇಶವೆಂದು ಹೇಳುತ್ತಾರೆ. ಈಗ ಇದು ಆಂಧ್ರ ಸರಕಾರದ ಪೊಲೀಸ್ ಟ್ರೇನಿಂಗ್ ಕ್ಯಾಂಪ್ ಆಗಿ ಮಾರ್ಪಾಡಾಗಿದೆ. ಸುರಪುರದಲ್ಲಿಯೂ ವೆಂಕಟಪ್ಪನಾಯಕನ ಸಮಾಧಿ ಇಲ್ಲ. ಆದರೆ ಸಂಸ್ಥಾನದ ಪದ್ಧತಿಯಂತೆ ಒಬ್ಬ ಸೈನಿಕ ಸತ್ತರೆ ಸಮಸ್ತ ರಾಜ ಗೌರವಗಳಿಂದ ಅಂತಿಮ ಸಂಸ್ಕಾರ ನಡೆಯುತ್ತದೆ.
ಅದರಂತೆ ಒಬ್ಬ ಅರಸನ ಅಂತ್ಯಸಂಸ್ಕಾರವು ಅನೇಕ ವಿಧಿ-ವಿಧಾನಗಳನ್ನು ಒಳಗೊಂಡಿದ್ದು, ಸಮಸ್ತ ರಾಜಗೌರವಗಳೊಂದಿಗೆ, ಅಂತ್ಯ ಸಂಸ್ಕಾರವಾಗಬೇಕಾಗಿದ್ದ ಕುರಿತಾಗಿ ಬ್ರಿಟಿಷ್ ಆಡಳಿತಾಧಿಕಾರಿಗಳಾಗಲೀ, ಮೆಡೋಸ್ ಟೇಲರ್‌ನಾಗಲಿ ಮೌನಿಯಾಗಿದ್ದುದನ್ನು ನೋಡಿದರೆ, ಬ್ರಿಟಿಷರ ಕಪಟ ನಾಟಕ ಅರಿವಾಗದೇ ಇರದು. ಆದರೆ ಮೆಡೋಸ್ ಟೇಲರ್ ವೆಂಕಟಪ್ಪನಾಯಕನ ಚಿಕ್ಕಪ್ಪ ಪಿಡ್ಡನಾಯಕನ ಶವಸಂಸ್ಕಾರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದ. ಆದರೆ ವೆಂಕಟಪ್ಪನಾಯ ಕನ ಕುರಿತಾಗಿ ಮಾಹಿತಿ ನೀಡದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಈತನ ಅಂತ್ಯಸಂಸ್ಕಾರವನ್ನು ಅಜ್ಞಾತ ರೀತಿಯಲ್ಲಿ ನೆರವೇರಿಸಿದುದೇಕೆ ? ಇಂಥ ಅನೇಕ ಪ್ರಶ್ನೆಗಳು ನಮ್ಮನ್ನು ಕಾಡದೇ ಇರವು. ಸುರಪುರದ ಸ್ವತಂತ್ರ ಸೇನಾನಿ ನಾಲ್ವಡಿ ವೆಂಕಟಪ್ಪನಾಯಕ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಹೇಡಿಯಾಗಿರಲಿಲ್ಲ. ಧೈರ್ಯದಿಂದ ಎದುರಿಸುವ ಶಕ್ತಿ ಆತನಲ್ಲಿದ್ದಿತ್ತು.
ಕರ್ನಾಟಕದಲ್ಲಿ ಮತ್ತೆ ಮೋದಿ ಹವಾ: ಇಂದು ಯಾದಗಿರಿ, ಕಲಬುರಗಿಗೆ ಇಂದು ಪ್ರಧಾನಿ ಭೇಟಿ
ಅಲ್ಲದೆ ಕರ್ನಾಟಕ ಸರಕಾರ ಆಂಧ್ರಪ್ರದೇಶದ ಅಂಬರಪೇಟೆಯ ಮೈದಾನದಲ್ಲಿ ಸುರಪುರದ ನಾಲ್ವಡಿ ವೆಂಕಟಪ್ಪನಾಯಕನ ಸ್ಮಾರಕವನ್ನು ನಿರ್ಮಿಸುವ ಅವಶ್ಯಕತೆ ಇದೆ. ಕರ್ನಾಟಕದ ಸುರಪುರ ತಾಲ್ಲೂಕಿನ ನಾರಾಯಣಪುರ ಸರ್ಕಾರಿ ಗಾರ್ಡನ್‌ನಲ್ಲಿ ವೆಂಕಟಪ್ಪನಾಯಕನ ಪ್ರತಿಮೆಗೆ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯ ವರು ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ.