ಬೆಂಗಳೂರು :  ಮದ್ಯಪಾನ ಮುಕ್ತ ಭಾರತದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ದಿನವಾದ ಅಕ್ಟೋಬರ್‌ 2ರ ವೇಳೆಗೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಬೇಕು. ಇದು ರಾಜ್ಯ ಸರ್ಕಾರಕ್ಕೆ ನಾವು ನೀಡುತ್ತಿರುವ ಅಂತಿಮ ಗಡುವು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರು ನಡೆಯುತ್ತಿದ್ದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ‘ಇಂದು ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನ. ಗಾಂಧೀಜಿಯವರು ಮದ್ಯಪಾನ ಮುಕ್ತ ಭಾರತದ ಕನಸು ಕಂಡಿದ್ದರು. 

ಇದಕ್ಕಾಗಿ ರಾಜ್ಯದಲ್ಲಿ ಮಹಿಳೆಯರು ಹೋರಾಟಕ್ಕೆ ಇಳಿದಿರುವುದು ಎಲ್ಲರಿಗೂ ಮಾದರಿಯಾಗುವ ವಿಚಾರ. ಉತ್ತಮ ಸಮಾಜಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರಿಗೆ ಸರ್ಕಾರ ಬೆಂಬಲ ನೀಡಬೇಕು. ಗಾಂಧೀಜಿ ಜಯಂತಿಯಾದ ಅಕ್ಟೋಬರ್‌ 2ರ ವೇಳೆಗೆ ಸರ್ಕಾರ ಮದ್ಯಪಾನ ನಿಷೇಧಿಸಬೇಕು’ ಎಂದು ಒತ್ತಾಯ ಮಾಡಿದರು.

‘ಎರಡು ಸಾವಿರ ಮಂದಿ ನೂರಾರು ಕಿ.ಮೀ. ಪಾದಯಾತ್ರೆ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವರು ಪಡುತ್ತಿರುವ ಶ್ರಮಕ್ಕೆ ಸರ್ಕಾರ ಬೆಲೆ ನೀಡಬೇಕು. ಹೋರಾಟದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ದಿನ ಬೆಳಗಾದರೆ ಜಗಳವಾಡುತ್ತಾ ಜನರ ಜ್ವಲಂತ ಸಮಸ್ಯೆ ಬಗ್ಗೆ ಅರಿವಿಲ್ಲದೆ ನಡೆದುಕೊಳ್ಳುವ ಸರ್ಕಾರಗಳು ಇನ್ನಾದರೂ ಕಣ್ಣು ತೆರೆಯಬೇಕು. ಜನರ ಹೋರಾಟವನ್ನು ಉಪೇಕ್ಷೆ ಮಾಡದೆ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದೆ ಸರ್ಕಾರದ ವಿರುದ್ಧವೇ ಹೋರಾಟ ಮಾಡಬೇಕುತ್ತದೆ’ ಎಂದು ಎಚ್ಚರಿಕೆ ನೀಡಿದರು.