Asianet Suvarna News Asianet Suvarna News

ದಲಿತರಿಗೆ ಸರ್ಕಾರದಿಂದ ಉಚಿತ ವಿವಾಹ ಯೋಜನೆ?

ಮುಜರಾಯಿ ಇಲಾಖೆ ಅನುಷ್ಠಾನಗೊಳಿಸಿದ ‘ಸಪ್ತಪದಿ’ ಮಾದರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ‘ಶುಭಲಗ್ನ’ ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

Free Marriage Scheme for Dalits by Karnataka Govt gvd
Author
Bangalore, First Published Jul 26, 2022, 5:00 AM IST

ಆತ್ಮಭೂಷಣ್‌

ಮಂಗಳೂರು (ಜು.26): ಮುಜರಾಯಿ ಇಲಾಖೆ ಅನುಷ್ಠಾನಗೊಳಿಸಿದ ‘ಸಪ್ತಪದಿ’ ಮಾದರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ‘ಶುಭಲಗ್ನ’ ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಈ ಕ್ರಾಂತಿಕಾರಿ ಯೋಜನೆ ಜಾರಿಯಾದರೆ ರಾಜ್ಯದ ಸುಮಾರು 28 ಲಕ್ಷ ಪರಿಶಿಷ್ಟ ಜಾತಿ(ಎಸ್‌ಸಿ), ಉಪಜಾತಿ ಕುಟುಂಬಗಳಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ. ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2020ರಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. ಆಗ ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಈ ಯೋಜನೆ ರೂಪಿಸಿದ್ದು, ಆಗಿನ ಸಿಎಂ ಯಡಿಯೂರಪ್ಪ ಅವರು ಯೋಜನೆಗೆ ಚಾಲನೆ ನೀಡಿದ್ದರು. 

ಈಗ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದು, ಈ ಇಲಾಖೆಯಲ್ಲೂ ಎಸ್‌ಸಿ ಸಮುದಾಯಕ್ಕೆ ನೆರವಾಗುವ ಈ ಬೃಹತ್‌ ಕಾರ್ಯಕ್ರಮ ರೂಪಿಸಲು ಹೊರಟಿದ್ದಾರೆ. ಈಗಾಗಲೇ ಪ್ರತಿ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ, ಉಪ ಜಾತಿಗಳ ಸಮಗ್ರ ವರದಿಯನ್ನು ತರಿಸಿಕೊಂಡಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಇನ್ನು ತಿಂಗಳಲ್ಲಿ ‘ಶುಭಲಗ್ನ’ ಅಂತಿಮಗೊಂಡು ಘೋಷಣೆಯಾಗಲಿದೆ.

ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮೋತ್ಸವ: ಸಚಿವ ಹಾಲಪ್ಪ ಆಚಾರ್‌

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 1.04 ಕೋಟಿ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.17.15ರಷ್ಟು. ಇದರಲ್ಲಿ ಶುಭಲಗ್ನ ಯೋಜನೆ ಜಾರಿಗೊಳಿಸಿದರೆ 28 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಪರಿಶಿಷ್ಟ ಜಾತಿಯ 101 ವಿವಿಧ ಉಪಜಾತಿಗಳಿಗೆ ಈ ಯೋಜನೆ ಪ್ರಯೋಜನವಾಗಲಿದೆ.

ಜಿಲ್ಲಾ ಕೇಂದ್ರಗಳಲ್ಲಿ ಶುಭಲಗ್ನ: ಸಪ್ತಪದಿ ವಿವಾಹ ಕಾರ್ಯಕ್ರಮವನ್ನು ದೇವಸ್ಥಾನಗಳಲ್ಲಿ ನಡೆಸಿದರೆ, ಶುಭಲಗ್ನ ಜಿಲ್ಲಾ ಕೇಂದ್ರದಲ್ಲಿ ಏರ್ಪಡಲಿದೆ. ಸಪ್ತಪದಿಯಲ್ಲಿ ಕುಟುಂಬವೊಂದಕ್ಕೆ .55000 ವಿವಾಹ ವೆಚ್ಚವಾಗಿ ನಿಗದಿಪಡಿಸಲಾಗಿದೆ. ಅದರಲ್ಲಿ ವರನಿಗೆ .5000 ಪ್ರೋತ್ಸಾಹಧನ, ವಧುವಿಗೆ .10 ಸಾವಿರ ಪ್ರೋತ್ಸಾಹಧನ, ವಧುವಿಗೆ ಚಿನ್ನಾಭರಣಕ್ಕೆ .40000 ನೀಡಲಾಗುತ್ತದೆ. ಶುಭಲಗ್ನದಲ್ಲಿ ಸಪ್ತಪದಿ ಮಾದರಿಯಲ್ಲಿ ಪ್ರೋತ್ಸಾಹಧನ ಅಲ್ಲದೆ ಭೋಜನ ವೆಚ್ಚ ಹೆಚ್ಚುವರಿಯಾಗಲಿದೆ. ಇದನ್ನು ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸುವುದರಿಂದ ವೆಚ್ಚ ತುಸು ಅಧಿಕವಾಗಲಿದ್ದು, ಇದನ್ನು ಯಾವ ರೀತಿ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ.

ಒಂದು ವರ್ಷಕ್ಕೆ ಒಂದು ಜಿಲ್ಲೆಯಲ್ಲಿ 100 ‘ಶುಭಲಗ್ನ’ ಏರ್ಪಟ್ಟರೂ .1.20 ಕೋಟಿನಂತೆ ಎಲ್ಲ ಜಿಲ್ಲೆಗಳಿಗೆ ಸುಮಾರು .40 ಕೋಟಿವರೆಗೆ ಬೇಕಾಗಬಹುದು. ವಿವಾಹದ ಸಂಖ್ಯೆ ಜಾಸ್ತಿಯಾದರೆ ವೆಚ್ಚವೂ ಹೆಚ್ಚಾಗುವ ಲೆಕ್ಕಾಚಾರ ಮಾಡಲಾಗಿದೆ. ಇದಕ್ಕಾಗಿ ಅನುದಾನ ಹೊಂದಾಣಿಕೆ ಮಾಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಶುಭಲಗ್ನ ಯೋಜನೆ ಹೇಗೆ?: ಪರಿಶಿಷ್ಟ ಜಾತಿಗಳಲ್ಲಿ ಒಂದೊಂದು ಉಪಜಾತಿಗಳಿಗೂ ಅವರದ್ದೇ ಆದ ವಿವಾಹ ಸಂಪ್ರದಾಯ ಇದೆ. ಹಾಗಾಗಿ ಹೀಗೆಯೇ ವಿವಾಹ ನಡೆಸಬೇಕು ಎಂದು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು. ಹೀಗಾಗಿ ಏಕರೂಪದಲ್ಲಿ ಸುಲಭವಾಗಿ ವಿವಾಹ ಕಾರ್ಯ ನೆರವೇರಿಸಲು ಇಲಾಖೆ ಉದ್ದೇಶಿಸಿದೆ. ಮೂಲಗಳ ಪ್ರಕಾರ ವಧೂವರರು ಪರಸ್ಪರ ಹಾರ ಬದಲಾಯಿಸಿ, ವಿವಾಹದ ಮಹತ್ವದ ಬಗ್ಗೆ ಹಿರಿಯರಿಂದ ಹಿತವಚನ, ಬಳಿಕ ಸ್ಥಳದಲ್ಲೇ ವಿವಾಹ ನೋಂದಣಿ. ಬಳಿಕ ಭೋಜನಕೂಟದೊಂದಿಗೆ ಸರಳವಾಗಿ ಮುಕ್ತಯಗೊಳಿಸುವ ಕುರಿತು ಚಿಂತನೆ ನಡೆಯುತ್ತಿದೆ.

Mandya: ಬೇಬಿ ಬೆಟ್ಟದಲ್ಲಿ ಏಳು ದಿನ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ ಒಂದೇ ದಿನಕ್ಕೆ ಅಂತ್ಯ

‘ಶುಭಲಗ್ನ’ ಯೋಜನೆಯಿಂದ ಎಸ್‌ಸಿ ಸಮುದಾಯದ ಕುಟುಂಬಗಳಿಗೆ ಬಹಳಷ್ಟುನೆರವಾಗಲಿದೆ. ಸರ್ಕಾರವೇ ವಿವಾಹ ಯೋಜನೆ ರೂಪಿಸುವುದರಿಂದ ಇಲಾಖೆ ವಿವಿಧ ಮೂಲಗಳಿಂದ ಹಣ ಹೊಂದಿಸಿ ಶೀಘ್ರವೇ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಸಚಿವ

Follow Us:
Download App:
  • android
  • ios