ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್ ಮತ್ತು ಮಂಜುನಾಥ್ ಕುಟುಂಬಗಳಿಗೆ ಉಚಿತ ಶಿಕ್ಷಣ, ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ಭರತ್ ಕುಟುಂಬಕ್ಕೆ 10 ಲಕ್ಷ ರೂ. ಹಣ ಸಂಗ್ರಹಿಸಿ ನೀಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಆರ್‌ವಿ ಕಾಲೇಜು ಮತ್ತು ಟ್ರಾನ್ಸೆಂಡ್ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಾಗುವುದು. ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.

ಬೆಂಗಳೂರು (ಏ.28): ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಇಸ್ಲಾಮಿಕ್ ಉಗ್ರರ ಗುಂಡೇಟಿಗೆ ಬಲಿಯಾದ ಕನ್ನಡಿಗರಾದ ಬೆಂಗಳೂರಿನ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಜೊತೆಗೆ, ಅವರ ಕುಟುಂಬಕ್ಕೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದುವರೆದು, ಭರತ್ ಭೂಷಣ್ ಅವರ ಕುಟುಂಬಕ್ಕೆ ಬೆಂಗಳೂರಿನ ಜನರಿಂದ ಸಂಗ್ರಹಿಸಲಾದ 10 ಲಕ್ಷ ರೂ. ಹಣ ನೆರವು ನೀಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದ ಮಂಜುನಾಥ್ ಅವರ ಮಗ ಪಿಯುಸಿ ಓದುತ್ತಿದ್ದಾನೆ. ಅವನ ವಿಧ್ಯಾಭ್ಯಾಸ ತಾಯಿ ನೋಡ್ಕೊಬೇಕು. ಇನ್ನು ಬೆಂಗಳೂರಿನ ಭರತ್ ಅವರಿಗೆ 3 ವರ್ಷದ ಮಗ ಇದ್ದಾನೆ. ಅವರಿಗೂ ಉತ್ತಮ ವಿದ್ಯಾಭ್ಯಾಸ ಮಾಡಿಸಬೇಕಿದೆ. ಆದರೆ, ರಾಜ್ಯ ಸರ್ಕಾರ ಅವರಿಗೆ ಕನಿಷ್ಟ 1 ಕೋಟಿ ರೂ. ಪರಿಹಾರ ನೀಡಬೇಕಿತ್ತು. ಆದರೆ, 10 ಲಕ್ಷ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ. ಆದರೆ, ಪಕ್ಕದ ರಾಜ್ಯದ ವ್ಯಕ್ತಿ ಕಾಡಾನೆ ತುಳಿದು ಸಾವನ್ನಪ್ಪಿದರೆ 15 ಲಕ್ಷ ರೂ. ಪರಿಹಾರ ಕೊಡಲು ಮುಂದಾಗಿದ್ದರು. ನಮ್ಮ ರಾಜ್ಯ ಸರ್ಕಾರ ಮುಸ್ಲಿಂ ಓಟಿಗೆ ಮಾರಿಕೊಂಡಿದೆ. ಇವರಿಂದ ಜಾಸ್ತಿ ಏನು ನಿರೀಕ್ಷೆ ಮಾಡೋಕೆ ಆಗಲ್ಲ ಎಂದು ಕಿಡಿಕಾರಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜನರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ. ಒಟ್ಟಾರೆಯಾಗಿ 20 ಲಕ್ಷ ರೂ. ಹಣ ಸಂಗ್ರಹವಾಗಿದೆ. ಈ ಮೂಲಕ ಹಿಂದು ಸಮಾಜ‌ವೇ ಉಗ್ರರ ಗುಂಡೇಟಿನಿಂದ ಹುತಾತ್ಮರಾದ ಹಿಂದೂಗಳ ಕುಟುಂಬಕ್ಕೆ ಬೆಂಬಲವಾಗಿ ನಿಂತಿದೆ. ಸರ್ಕಾರ ನೀಡಿದ ಪರಿಹಾರಕ್ಕಿಂತ ಜಾಸ್ತಿ ಹಣವನ್ನು ನಾವು ಅವರ ಕುಟುಂಬಕ್ಕೆ ಕೊಡುತ್ತಿದ್ದೇವೆ. ಹುತಾತ್ಮರಾದ ಭರತ್ ಅವರ ಕುಟುಂಬಕ್ಕೆ ನಾಡಿದ್ದು 10,00,001 ರೂಪಾಯಿ (ಸರ್ಕಾರದಿಂದ 10 ಲಕ್ಷ ಪರಿಹಾರ) ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ

ಇನ್ನು ಹುತಾತ್ಮರಾದ ಶಿವಮೊಗ್ಗದ ಮಂಜುನಾಥ ರಾವ್ ಅವರ ‌ಮಗನಿಗೆ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಆಗಿರುವ ಆರ್‌ವಿ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಕೊಡ್ತಾ ಇದ್ದೇವೆ. ಜೊತೆಗೆ, ಭರತ್ ಭೂಷಣ್ ಅವರ ಮಗುವಿಗೆ ಬೆಂಗಳೂರಿನ ಪ್ರತಿಷ್ಠಿತ ಟ್ರಾನ್ಸೆಂಡ್ ಶಾಲೆಯಲ್ಲಿ ಉಚಿತವಾಗಿ ಸಿಬಿಎಸ್‌ಇ ಪಠ್ಯಕ್ರಮದ ಶಿಕ್ಷಣ ಕೊಡಿಸಲಾಗುವುದು. ಭರತ್ ಅವರ ಮಗನಿಗೆ 1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಟ್ರಾನ್ಸೆಂಡ್ ಶಿಕ್ಷಣ ಸಂಸ್ಥೆ ಒಪ್ಪಿಕೊಂಡಿದೆ. ಇನ್ನು ಮುಂದಿನ 11 ವರ್ಷಗಳವರೆಗೆ ಭರತ್ ಹಾಗೂ ಮಂಜುನಾಥ ಅವರ ಕುಟುಂಬಕ್ಕೆ ಆಸ್ಪತ್ರೆ ಖರ್ಚುಗಳನ್ನು ಫ್ರೀಯಾಗಿ ನೋಡಿಕೊಳ್ಳಲಾಗುತ್ತದೆ ಎಂದು ಮಹಾವೀರ್ ಜೈನ್ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಕಾಂಗ್ರೆಸ್‌ಗೆ ದರಿದ್ರ ಸ್ಥಿತಿ: 

ಪೆಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು ಹಿಂದುಗಳನ್ನು ಹುಡುಕಿ ಕೊಂದಿದ್ದಾರೆ. ಭಯೋತ್ಪಾದಕರು ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದು ಎಂಬುದು ಕ್ಲಿಯರ್ ಇದೆ. ಅವರು ಪ್ರವಾಸಕ್ಕೆ ಬಂದಿರುವ ಎಲ್ಲಾರನ್ನು ಕೊಂದಿಲ್ಲ. ಹಿಂದುಗಳನ್ನ ಮಾತ್ರ ಹುಡುಕಿ ಕೊಂದಿದ್ದಾರೆ. ಇದನ್ನು ಮೃತರ ಕುಟುಂಬದವರೆ ಹೇಳಿದ್ದಾರೆ. ಆದರೇ ನಮ್ಮ ರಾಜ್ಯದಲ್ಲಿ ಮೃತರ ಕುಟುಂಬಸ್ಥರ ಹೇಳಿಕೆಯನ್ನೂ ಒಪ್ಪಿಕೊಳ್ಳದವರು ಇದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಹೈದರಾಬಾದ್‌ನ ಮುಸ್ಲಿಂ ನಾಯಕ ಅಸಾದುದ್ದಿನ್ ಓವೈಸಿ ಕೂಡ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇದು ಸರಿ ಅಲ್ಲ ಎಂದಿದ್ದಾರೆ. ಆದರೆ, ನಮ್ಮ ರಾಜ್ಯದ ಕಾಂಗ್ರೆಸ್ ಎಷ್ಟು ದರಿದ್ರ ಸ್ಥಿತಿಗೆ ತಲುಪಿದೆ ಎಂದರೆ ಕಾಂಗ್ರೆಸ್ ನಾಯಕರು ಇದನ್ನು ಒಪ್ಪುತ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸಿದ್ಧರಾಮಯ್ಯ 'ಯುದ್ಧ ಬೇಡ' ಹೇಳಿಕೆ ಪಾಕಿಸ್ತಾನದಲ್ಲಿ ಟ್ರೆಂಡ್; ನಾನು ಹೇಳಿದ್ದು ಹಂಗಲ್ಲ ಎಂದ ಸಿಎಂ!

ತಿಮ್ಮಾಪುರ ಅವರೇ ಸಾರ್ವಜನಿಕ ಜೀವನದಲ್ಲಿ ಇರಬೇಡಿ: ತಿಮ್ಮಾಪುರ್‌ಗೆ ಚಡ್ಡಿ ಬಿಚ್ಚಿ ಚೆಕ್ ಮಾಡಬೇಕಿತ್ತು. ಹೌದು ಅವರು ಐಡಿ ಕಾರ್ಡ್ ನೋಡಿ ಹೊಡೆದಿಲ್ಲ. ತಿಮ್ಮಾಪುರ ನೀವು ಸಾರ್ವಜನಿಕ ಜೀವನದಲ್ಲಿ ಇರಬೇಡಿ, ಮನೆಯಲ್ಲಿ ಇರಿ. ನಿಮಗೆ ಮಂಜುನಾಥ ಹಾಗೂ ಭರತ್ ಕುಟುಂಬದ ಮುಂದೆ ಹೋಗಿ ನಿಂತು ಹೇಳೊದಕ್ಕೆ ಧೈರ್ಯ ಇದೆಯಾ.? ಎಂದು ಪ್ರಶ್ನೆ ಮಾಡಿದರು. ಇನ್ನು ಸಿದ್ದರಾಮಯ್ಯ ಅವರ ಯುದ್ಧ ಬೇಡ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ಹಾಗಾದರೆ ವಿಧಾನಸೌಧಕ್ಕೆ ಕರೆದುಕೊಂಡು ಬಂದು ಅವರಿಗೆ ಕರ್ನಾಟಕ ರತ್ನ ನೀಡಬೇಕಾ? ಈ ಸೆಕ್ಯಲರ್‌ಗಳಿಗೆ ತಮ್ಮ‌ಮನೆ‌ ಬಾಗಿಲಿಗೆ ಬರೋ ತನಕ ಅರ್ಥ ಆಗೋದಿಲ್ಲ ಎಂದು ವಾಗ್ದಾಳಿ ಮಾಡಿದರು.

ರೈಲ್ವೆ ಪರೀಕ್ಷೆಗೆ ತಾಳಿ ತೆಗೆಸಿರುವ ವಿವಾದ: ಮಂಗಲ ಸೂತ್ರ ಹಾಕದೇ ಪರೀಕ್ಷೆ ಬರೆಯಬೇಕು ಎಂಬ ರೂಲ್ ಮಾಡಿದ್ದು ಸೆಕ್ಯುಲರ್ ಅಧಿಕಾರಿಗಳು. ಈ ಕಾಂಗ್ರೆಸ್ 70 ವರ್ಷ ಆಳಿದ ಕಾಂಗ್ರೆಸ್‌ನ ಬುದ್ದಿ ಅಧಿಕಾರಿಗಳಿಗೂ ಬಂದಿದೆ. ಅಂತಹ ಅಧಿಕಾರಿಗಳು ‌ಮಂತ್ರಿಗಳ ಗಮನಕ್ಕೂ ತರದೆ ನಿಯಮ ಮಾಡುತ್ತಾರೆ. ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಲಿದೆ. ಈಗಾಗಲೇ ರೈಲ್ವೆ ರಾಜ್ಯಖಾತೆ ಸಚಿವ ವಿ. ಸೋಮಣ್ಣ ಅವರ ಜೊತೆ ಮಾತನಾಡಲಾಗಿದೆ ಎಂದರು.