ಟ್ಯೂಷನ್‌ಗೆ ಹೋಗದ್ದಕ್ಕೆ ಪೋಷಕರು ಬೈದಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿ ಮತ್ತು 9 ವರ್ಷದ ತಮ್ಮ ಬೆಂಗಳೂರಿನಿಂದ ಮನೆಬಿಟ್ಟು ಹೋಗಿದ್ದಾರೆ. ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣವನ್ನು ಬಳಸಿಕೊಂಡು ಶಿವಮೊಗ್ಗ, ಚಿತ್ರದುರ್ಗ ಸುತ್ತಾಡಿದ ಮಕ್ಕಳನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ.

ಬೆಂಗಳೂರು (ಫೆ.4): ಸಿಲಿಕಾನ್ ಸಿಟಿ ಬೆಂಗಳೂರಿನ ಮಾರತ್ತಹಳ್ಳಿಯ ಅಶ್ವತ್ಥನಗರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕಿ ಮತ್ತು ಆಕೆಯ 9 ವರ್ಷದ ತಮ್ಮನಿಗೆ ಪೋಷಕರು 'ಟ್ಯೂಷನ್‌ಗೆ ಹೋಗಲ್ವಾ? ಎಂದು ಬೈದಿದ್ದಕ್ಕೆ ಅನಾಹುತ ನಿರ್ಧಾರ ಮಾಡಿಬಿಟ್ಟಿದ್ದಾರೆ. ಓದಿನ ವಿಚಾರಕ್ಕೆ ಪೋಷಕರು ಬೈದಿದ್ದರಿಂದ ಮನನೊಂದ ಮಕ್ಕಳಿಬ್ಬರು, ಯಾರಿಗೂ ತಿಳಿಸದಂತೆ ಕಳೆದ ಫೆಬ್ರವರಿ 1ರ ಸಂಜೆ 3 ಗಂಟೆ ಸುಮಾರಿಗೆ ಮನೆಯಿಂದ ಕಾಲ್ಕಿತ್ತಿದ್ದಾರೆ. ಮಕ್ಕಳ ನಾಪತ್ತೆಯಿಂದ ಕಂಗಾಲಾದ ಪೋಷಕರು ಕೂಡಲೇ ಹೆಚ್‌ಎಎಲ್ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಫ್ರೀ ಬಸ್ ಗ್ಯಾರಂಟಿ: 'ಆಧಾರ್' ಹಿಡಿದು ಶಿವಮೊಗ್ಗ-ಚಿತ್ರದುರ್ಗ ಟ್ರಿಪ್!

ಮನೆ ಬಿಟ್ಟ 13 ವರ್ಷದ ಬಾಲಕಿಯ ಬುದ್ಧಿವಂತಿಕೆ ಪೊಲೀಸರನ್ನೇ ಬೆರಗುಗೊಳಿಸಿದೆ. ಸರ್ಕಾರದ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದು ಬಾಲಕಿಗೆ ತಿಳಿದಿತ್ತು. ತಕ್ಷಣ ತನ್ನ ಬಳಿಯಿದ್ದ ಆಧಾರ್ ಕಾರ್ಡ್ ಹಿಡಿದುಕೊಂಡು, ತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾಳೆ. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪುಟ್ಟ ಮಕ್ಕಳು ಯಾವುದೇ ಹಣವಿಲ್ಲದೆ, ಕೇವಲ ಆಧಾರ್ ಕಾರ್ಡ್ ಬಲದಿಂದ ರಾಜಾರೋಷವಾಗಿ ಸುತ್ತಾಟ ನಡೆಸಿದ್ದಾರೆ!

ಸೋಷಿಯಲ್ ಮೀಡಿಯಾ ಪವರ್: ಮಕ್ಕಳನ್ನ ಪತ್ತೆ ಹಚ್ಚಿದ ಪೊಲೀಸರು!

ಪ್ರಕರಣ ದಾಖಲಾಗುತ್ತಿದ್ದಂತೆ ಹೆಚ್‌ಎಎಲ್ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವುದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಮಕ್ಕಳ ಫೋಟೋ ನೋಡಿದ್ದ ಚಿತ್ರದುರ್ಗದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮಕ್ಕಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

9 ವರ್ಷದ ತಮ್ಮನಿಗೆ ಟಿಕೆಟ್ ಇಲ್ಲ, ಕಂಡಕ್ಟರ್‌ ಕಣ್ಣಿಗೂ ಬಿದ್ದಿಲ್ಲ!

ಬಾಲಕಿಗೆ ಉಚಿತ ಪ್ರಯಾಣವಿದ್ದರೂ, 9 ವರ್ಷದ ಬಾಲಕನಿಗೆ ಟಿಕೆಟ್ ಪಡೆಯದೆ ಪ್ರಯಾಣಿಸಿರುವುದು ಬಸ್ ನಿರ್ವಾಹಕರ ಕಣ್ಣಿಗೂ ಬಿದ್ದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಒಟ್ಟಿನಲ್ಲಿ ಸರ್ಕಾರದ ಉಚಿತ ಯೋಜನೆಗಳು ಜನಸಾಮಾನ್ಯರಿಗೆ ಮಾತ್ರವಲ್ಲ, ಮನೆ ಬಿಟ್ಟು ಓಡಿಹೋಗುವ ಮಕ್ಕಳಿಗೂ ಸಹಾಯವಾಗುತ್ತಿರುವುದು ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳನ್ನು ಮರಳಿ ಪಡೆದ ಪೋಷಕರು ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ.