ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಇಬ್ಬರು ಮಕ್ಕಳು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. 500 ರೂ. ಖರ್ಚಾದ ನಂತರ ಮನೆಗೆ ಮರಳಿದ್ದಾರೆ. ಶಾಲೆ ಮತ್ತು ಮನೆಯಲ್ಲಿನ ಬೈಗುಳದಿಂದ ಬೇಸತ್ತು ಮನೆ ಬಿಟ್ಟು ಹೋಗಿದ್ದರು.

ಬೆಂಗಳೂರು (ಜ.28): ಕಳೆದ ಗುರುವಾರ ಇಬ್ಬರು ಮಕ್ಕಳು ಮನೆಯಿಂದ ಆಟವಾಡಲು ಹೊರಗೆ ಹೋಗಿದ್ದಾನ ನಾಪತ್ತೆ ಆಗಿದ್ದರು. ಮಕ್ಕಳನ್ನು ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರ ಕೈಗೂ ಸಿಗದ ಮಕ್ಕಳು, ಮನೆಯಿಂದ ತೆಗೆದುಕೊಂಡು ಹೋಗಿದ್ದ 500 ರೂ. ಹಣ ಖಾಲಿಯಾದ ನಂತರ ವಾಪಸ್ ಮನೆಗೆ ಬಂದಿದ್ದಾರೆ.

ಈ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ನಡೆದಿದೆ. ಶಾಲೆಯಲ್ಲಿ ಟೀಚರ್ ಬೈತಾರೆ, ಮನೆಗೆ ಬಂದರೆ ಅಮ್ಮ ಬೈತಾರೆ ನಮಗೆ ನೆಮ್ಮದಿಯೇ ಇಲ್ಲವೆಂದು ಮಕ್ಕಳು ಮನೆ ಬಿಟ್ಟು ಹೋಗುವ ಎಡವಟ್ಟಿನ ಕೆಲಸ ಮಾಡಿದ್ದಾರೆ. ತಾಯಿಯ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಆದರೆ, ಹೋಗುವಾಗ ಯಾವುದಕ್ಕೂ ಖರ್ಚಿಗೆ ಇರಲೆಂದು 500 ರೂಪಾಯಿ ತೆಗೆದುಕೊಂಡು ಹೋಗಿದ್ದರು. ಈ ಹಣ ಖಾಲಿ ಆದಮೇಲೆ ವಾಪಸ್ ಬಂದಿದ್ದಾರೆ. ಇದರಿಂದ ಮಕ್ಕಳು ನಾಪತ್ತೆ ಆಗಿದ್ದಾರೆಂದು ತೀವ್ರ ಆತಂಕಕ್ಕೆ ಒಳಗಾಗಿದ್ದ ತಂದೆ ತಾಯಿ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಗುರುವಾರದಂದು ಇಬ್ಬರು ಮಕ್ಕಳು ಶಾಲೆಗೆ ಹೋಗಿಬಂದು ಮನೆಯಲ್ಲಿ ಬ್ಯಾಗ್ ಇಟ್ಟು ಆಟವಾಡಲು ಹೋದವರು ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಪೈಕಿ ಒಬ್ಬನಿಗೆ 15 ವರ್ಷ, ಮತ್ತೊಬ್ಬನಿಗೆ 14 ವರ್ಷ. ಈ ಇಬ್ಬರೂ ಕಣ್ಮರೆಯಾದ ನಂತರ ಮನೆಯವರು ಮಕ್ಕಳ ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಸಿದ್ದಾರೆ. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹುಡುಕಿದ್ದಾರೆ. ಎಲ್ಲಿಯೂ ಮಕ್ಕಳ ಸುಳಿವು ಸಿಗದಿದ್ದಾಗ ದಿಕ್ಕು ತೋಚದೆ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಇನ್ನು ಮಿಸ್ಸಿಂಗ್ ಕೇಸ್ ಸಂಬಂದವಾಗಿ ಶುಕ್ರವಾರ FIR ಕೂಡ ದಾಖಲು ಆಗಿತ್ತು.

ಇದನ್ನೂ ಓದಿ: ಮಕ್ಕಳಿಗೆ ಚಿನ್ನಾಟ ಹೆತ್ತವರಿಗೆ ಪ್ರಾಣ ಸಂಕಟ; ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ!

ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಎಷ್ಟು ಹುಡುಕಿದ್ದಾರೋ ಗೊತ್ತಿಲ್ಲ, ಆದರೆ ನಿನ್ನೆ ರಾತ್ರಿ ವೇಳೆಗೆ ಇಬ್ಬರೂ ಮಕ್ಕಳು ವಾಪಸ್ ಮನೆಗೆ ಬಂದಿದ್ದಾರೆ. ಒಟ್ಟು 4 ದಿನಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಊಟ ಮಾಡುತ್ತಾ, ಅಲ್ಲಿಯೇ ಮಲಗಿ ಕಾಲ ಕಳೆದಿದ್ದಾರೆ. ಇಬ್ಬರು ಮಕ್ಕಳ ಪೈಕಿ 15 ವರ್ಷದ ಬಾಲಕನಿಗೆ ತಾಯಿ ಮೇಲೆ ಕೋಪವಿತ್ತು. ನನ್ ತಾಯಿ ದಿನಾಲೂ ಹೊಡಿತಾರೆ, ಓದು ಅಂತಾರೆ ಎಂದು ಬೇಸರಗೊಂಡು ಮನೆ ಬಿಟ್ಟು ಹೋಗಬೇಕು ಎಂದು ಸ್ನೇಹಿತಬ ಬಳಿ ಹೇಳಿಕೊಂಡಿದ್ದಾನೆ. ಆಗ ಅವನ ಸ್ನೇಹಿತನೂ ಕೂಡ ನನಗೂ ಮನೆ ಸರಿಯಾಗ್ತಿಲ್ಲ. ನಮ್ಮನೇಲಿ ಅಣ್ಣ ಮತ್ತು ತಂಗಿ ಮೇಲೆ ಹೆಚ್ಚಿನ ಪ್ರೀತಿ ತೋರಿಸುತ್ತಾರೆ ನನ್ನ ಕಂಡರೆ ಅವರಿಗೆ ಇಷ್ಟವಿಲ್ಲ ಎಂದಿದ್ದನು. ಹೀಗಾಗಿ, ಇಬ್ಬರೂ ಮನೆ ಬಿಟ್ಟು ಹೋಗೋಣ ಎಂದು ತೀರ್ಮಾನಿಸಿದ್ದರು.

ಇಬ್ಬರೂ ಮಾತನಾಡಿಕೊಂಡು ಗುರುವಾರ ಶಾಲೆ ಮುಗಿಸಿಕೊಂಡು ಮನೆಗೆ ಬಂದ ನಂತರ ಇಬ್ಬರೂ ಸಂಜೆ ವೇಳೆಗೆ ಆಟವಾಡಲು ಹೊರಗೆ ಬಂದು ಮನೆ ಬಿಟ್ಟು ಹೋಗಿದ್ದಾರೆ. ಹೋಗುವಾಗ 500 ರೂ. ತೆಗೆದುಕೊಂಡು ಹೋಗಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಾಲ ಕಳೆದಿದ್ದಾರೆ. ಮೂರು ದಿನದಲ್ಲಿ 500 ರೂ. ಖರ್ಚಾಗಿದೆ. ನಂತರ, ಹಸಿವಾದಾಗ ಊಟ ಸಿಗದೇ ಪರದಾಡುತ್ತಾ ಅಪ್ಪ, ಅಮ್ಮನ ನೆನಪಾಗಿ ಮನೆಗ ವಾಪಸ್ ಬಂಡಿದ್ದಾರೆ. ಒಟ್ಟಾರೆ, ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ.

ಇದನ್ನೂ ಓದಿ:  ಶಕ್ತಿ ಯೋಜನೆ ಅವಾಂತರ: ಫ್ರೀ ಬಸ್ ಹತ್ತಿ ನಾಪತ್ತೆಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ!