ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮೇ 30, 2025 ರಿಂದ ಭಕ್ತರಿಗೆ ಬೆಳಗಿನ ಉಪಹಾರ ಪ್ರಸಾದವನ್ನು ನೀಡಲಿದೆ. ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಉಪಹಾರ ಲಭ್ಯವಿರುತ್ತದೆ. ಭವಿಷ್ಯದಲ್ಲಿ 3,000 ಜನರಿಗೆ ಏಕಕಾಲದಲ್ಲಿ ಊಟ ನೀಡಲು ನೂತನ ಭೋಜನ ಶಾಲೆ ನಿರ್ಮಾಣವಾಗಲಿದೆ.

ದಕ್ಷಿಣ ಕನ್ನಡ (ಮೇ 29): ರಾಜ್ಯದ ಪ್ರಸಿದ್ಧ ಮತ್ತು ಶ್ರೀಮಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆಯಿಂದ (ಮೇ 30, 2025 ರಿಂದ) ಎಲ್ಲ ಭಕ್ತರಿಗೆ ಬೆಳಗಿನ ಉಪಹಾರ ಪ್ರಸಾದವನ್ನು ವಿತರಣೆ ಮಾಡಲಾಗುತ್ತದೆ. ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮಾತ್ರ ಪ್ರಸಾದವಾಗಿ ನೀಡಲಾಗುತ್ತಿತ್ತು. ಇದೀಗ ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ದೇಗುಲದ ಷಣ್ಮುಖ ಭೋಜನ ಶಾಲೆಯಲ್ಲಿ ಉಪಾಹಾರವನ್ನೂ ಕೊಡಲು ನಿರ್ಧರಿಸಲಾಗಿದೆ. ಬೆಳಗ್ಗೆ ಮೂರ್ನಾಲ್ಕು ಬಗೆಯ ತಿಂಡಿಗಳೊಂದಿಗೆ ಕಷಾಯವನ್ನು ಭಕ್ತರಿಗೆ ನೀಡಲಾಗುತ್ತದೆ.

ಈ ಯೋಜನೆಯು ಮುಜರಾಯಿ ಇಲಾಖೆಯ ಅನುಮೋದನೆಯೊಂದಿಗೆ ಜಾರಿಗೆ ಬಂದಿದೆ. ದೇವಸ್ಥಾನಕ್ಕೆ ಪ್ರತಿದಿನ 10,000ಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಿದ್ದು, ಹಬ್ಬ ಹಾಗೂ ರಜೆ ದಿನಗಳಲ್ಲಿ ಈ ಸಂಖ್ಯೆ 20,000ಕ್ಕೂ ಅಧಿಕವಾಗುತ್ತದೆ. ಅಶ್ಲೇಷ ಬಲಿ ಪೂಜೆಗಾಗಿ ಮುಂಜಾನೆ ಬರುವ ಭಕ್ತರಿಗೆ ಉಪಹಾರ ಸೇವೆ ಅನುಕೂಲವಾಗಲಿದೆ. ಈ ಬೆಳಗಿನ ಉಪಹಾರ ಸೇವೆಯು ಭಕ್ತರಿಗೆ ಹೆಚ್ಚಿನ ಅನುಕೂಲತೆ ಒದಗಿಸುವ ನಿರೀಕ್ಷೆಯಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಈ ಯೋಜನೆಯು ಭಕ್ತರಿಗೆ ಹೆಚ್ಚಿನ ಅನುಕೂಲತೆ ಒದಗಿಸಲು ರೂಪುಗೊಂಡಿದೆ. ಇದಕ್ಕೆ ಪೂರಕವಾಗಿ, ಭವಿಷ್ಯದಲ್ಲಿ ಏಕಕಾಲದಲ್ಲಿ 3,000 ಮಂದಿ ಕುಳಿತು ಭೋಜನ ಸ್ವೀಕರಿಸಬಹುದಾದ ನೂತನ ಭೋಜನ ಶಾಲೆಯ ನಿರ್ಮಾಣದ ಯೋಜನೆಯೂ ಇದೆ. ಈಗಾಗಲೇ ನೂತನ ಭೋಜನ ಶಾಲೆಯ ಕಟ್ಟದ ಮಾಸ್ಟರ್ ಪ್ಲಾನ್ ಮತ್ತು ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ಮುಂದಿನ 3-4 ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಭಕ್ತರ ಸೇವೆಗೆ ಮುಕ್ತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಸಂಬಂಧಿತ ಮಾಹಿತಿ:

ದೇವಸ್ಥಾನದ ಸಮಯಗಳು: ದೇವಸ್ಥಾನವು ಪ್ರತಿದಿನ ಬೆಳಿಗ್ಗೆ 5:00 ಗಂಟೆಗೆ ತೆರೆಯಲಾಗುತ್ತದೆ. ರಾತ್ರಿ 9:30 ಗಂಟೆಗೆ ಮುಚ್ಚಲಾಗುತ್ತದೆ. ಅನ್ನ ಪ್ರಸಾದವು ಮಧ್ಯಾಹ್ನ 11:30 ರಿಂದ 2:00 ಗಂಟೆಯವರೆಗೆ ಮತ್ತು ರಾತ್ರಿ 7:30 ರಿಂದ 9:30 ಗಂಟೆಯವರೆಗೆ ಲಭ್ಯವಿರುತ್ತದೆ. ಇದೀಗ ನಾಳೆಯಿಂದ ಅಧಿಕೃತವಾಗಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಉಪಾಹಾರ ಕೂಡ ವಿತರಣೆ ಮಾಡಲಾಗುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2024-25 ಹಣಕಾಸು ವರ್ಷದಲ್ಲಿ ₹155.95 ಕೋಟಿ ಆದಾಯ ದಾಖಲಿಸಿ, ಕರ್ನಾಟಕದ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.