ರಸ್ತೆಗಳ ಅಭಿವೃದ್ಧಿ ಯೋಜನೆಯಲ್ಲಿ ಅಕ್ರಮ’ ರಸ್ತೆ ನಿರ್ಮಾಣಕ್ಕೆ 335 ಕೋಟಿ, ನಿರ್ವಹಣೆಗೆ 785 ಕೋಟಿ ನಿಗದಿ ಇದು ಹಣ ಲೂಟಿ ಯೋಜನೆ: ರಾಮಲಿಂಗಾರೆಡ್ಡಿ

ಬೆಂಗಳೂರು(ಡಿ.05): ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ (ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌) ಹನ್ನೆರಡು ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹನ್ನೆರಡು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ .335 ಕೋಟಿ ವೆಚ್ಚವಾದರೆ, ರಸ್ತೆ ನಿರ್ವಹಣೆಗೆ ವಾರ್ಷಿಕವಾಗಿ .150 ಕೋಟಿಯಂತೆ ಒಟ್ಟು ಐದು ವರ್ಷಕ್ಕೆ .785.31 ಕೋಟಿ ನಿಗದಿಪಡಿಸಲಾಗಿದೆ. ನಿಯಮಾನುಸಾರ ಕಾಮಗಾರಿ ನಡೆಸಿದ ಗುತ್ತಿಗೆದಾರರು ನಿಗದಿತ ವರ್ಷದವರೆಗೆ ನಿರ್ವಹಣೆಯನ್ನೂ ಮಾಡಬೇಕು. ಆದರೆ, ನಿರ್ವಹಣೆಗೂ ಸರ್ಕಾರವೇ ಹಣ ನಿಗದಿ ಮಾಡಿಕೊಡುತ್ತಿರುವುದರ ಹಿಂದೆ ಯಾರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶವಿದೆ ಎಂದು ಪ್ರಶ್ನಿಸಿದರು.

ದೇಶದೆಲ್ಲೆಡೆ ನಿರ್ಮಿಸಿರುವ ರಸ್ತೆಗಳಿಗೆ ಪ್ರತೀ ಬಾರಿ ಅಭಿವೃದ್ಧಿ ಕಾಮಗಾರಿ ನಡೆಸಿದಾಗ ಮುಂದಿನ ಎರಡು ವರ್ಷ ದೋಷ ಬಾಧ್ಯತಾ ಅವಧಿ ಇರುತ್ತದೆ. ಇದಕ್ಕೆ ಬೆಂಗಳೂರಿನ ರಸ್ತೆಗಳು ಹೊರತಲ್ಲ. ಆ ಪ್ರಕಾರ ಇಲ್ಲಿಯೂ ಅಭಿವೃದ್ಧಿಪಡಿಸಿದ ರಸ್ತೆಗಳ ನಿರ್ವಹಣೆಯನ್ನು ಗುತ್ತಿಗೆದಾರರು ಮಾಡಬೇಕು. ಹೀಗಿದ್ದರೂ ಅಭಿವೃದ್ಧಿಪಡಿಸಿದ ರಸ್ತೆಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ನೀಡುತ್ತಿರುವುದು ಏಕೆ? ಇದು ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವ ಹುನ್ನಾರ. ಈ ರಸ್ತೆ ಕಾಮಗಾರಿಯನ್ನು ಬಿಬಿಎಂಪಿಯಿಂದ ಕಸಿದು ಕೆಆರ್ಡಿಸಿಎಲ್‌ಗೆ ನೀಡಿರುವುದರ ಹಿಂದೆ ಇರುವ ಶಕ್ತಿ ಯಾವುದು. ಇದರಲ್ಲಿ ಅಕ್ರಮ ನಡೆದಿದೆ ಎಂದು ದೂರಿದರು.

ಬಿಜೆಪಿ ಅನುಕೂಲಕ್ಕೆ ವಾರ್ಡ್‌ ವಿಂಗಡಣೆ

ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆಯನ್ನು ಅವೈಜ್ಞಾನಿಕವಾಗಿ ಮತ್ತು ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ರಾಮಲಿಂಗಾರೆಡ್ಡಿ ಕಿಡಿ ಕಾರಿದರು.

ಬಿಬಿಎಂಪಿ ಪ್ರತ್ಯೇಕ ಕಾಯಿದೆ ಅಡಿ ಪಾಲಿಕೆ ವಾರ್ಡುಗಳ ಗರಿಷ್ಠ ಮಿತಿಯನ್ನು 243ಕ್ಕೆ ಏರಿಕೆ ಮಾಡಲಾಗಿದೆ. ಇದು ಸರಿಯಲ್ಲ. ಲೋಕಸಭೆ, ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡನೆ ಮಾದರಿಯಲ್ಲಿ ಬಿಬಿಎಂಪಿ ವಾರ್ಡುಗಳ ಪುನರ್‌ ವಿಂಗಡನೆಗೂ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಒಂದು ಸಮಾಲೋಚನೆ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಪಿ.ಆರ್‌.ರಮೇಶ್‌, ರಾಮಚಂದ್ರಪ್ಪ, ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಂಜುನಾಥರೆಡ್ಡಿ, ಜಿ.ಪದ್ಮಾವತಿ, ಚಂದ್ರಶೇಖರ್‌ ಮತ್ತಿತರರಿದ್ದರು.

‘ಸಿಎಂ ಕೈಲಾಗದಿದ್ದರೆ ಉಸ್ತುವಾರಿ ನೇಮಿಸಲಿ’

ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಈವರೆಗೆ ಕೇವಲ ಎರಡು ಬಾರಿ ಮಾತ್ರ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಅದು ಕೂಡ ಅಲ್ಪಾವಧಿಯಲ್ಲಿ ಪ್ರದಕ್ಷಿಣೆ ನಡೆಸಿ ಮುಗಿಸಿದ್ದಾರೆ. ಮುಖ್ಯಮಂತ್ರಿಗಳು ಹೆಚ್ಚಿನ ಸಮಯವನ್ನು ಬೆಂಗಳೂರಿಗೆ ನೀಡಬೇಕು. ಇದು ಸಾಧ್ಯವಾಗದಿದ್ದರೆ, ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದರು.hi traff