ಬೆಂಗಳೂರು [ಮಾ.20]:  ಕಳೆದ 2015ನೇ ಸಾಲಿನಲ್ಲಿ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಡಿಜಿಟಲ್‌ ಮೌಲ್ಯಮಾಪನದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಲಾಗುತ್ತಿದ್ದು, ಕೆಲವು ಅಭ್ಯರ್ಥಿಗಳಿಗೆ ಮೂರಕ್ಕೂ ಹೆಚ್ಚು ವಿಷಯಗಳಿಗೂ ಏಕ ರೂಪದ ಅಂಕಗಳನ್ನು ನೀಡಿರುವುದು ಭಾರೀ ಸಂಶಯಕ್ಕೆ ಕಾರಣವಾಗಿದೆ.

ಈ ಪರೀಕ್ಷೆ ಬರೆದ ಕೆಲ ನಿರ್ದಿಷ್ಟಅಭ್ಯರ್ಥಿಗಳಿಗೆ ಹಲವು ವಿಷಯಗಳಲ್ಲಿ ಒಂದೇ ರೀತಿಯ ಅಂಕ ಬಂದಿದೆ. ಉದಾಹರಣೆಗೆ ನಿರ್ದಿಷ್ಟಅಭ್ಯರ್ಥಿಯೊಬ್ಬನಿಗೆ ‘ಸಾಮಾನ್ಯ ಅಧ್ಯಯನ’ ‘ಐಚ್ಛಿಕ ಪತ್ರಿಕೆ-1’ ಮತ್ತು ‘ಐಚ್ಛಿಕ ಪತ್ರಿಕೆ-2’ ಈ ಎರಡು ವಿಷಯಗಳಲ್ಲೂ ತಲಾ 107 ಅಂಕ ದೊರಕಿದೆ. ಇದೇ ರೀತಿ ಮತ್ತೊಬ್ಬ ಅಭ್ಯರ್ಥಿಗೆ ಸಾಮಾನ್ಯ ಅಧ್ಯಯನ-1, ಸಾಮಾನ್ಯ ಅಧ್ಯಯನ -2 ಹಾಗೂ ಐಚ್ಚಿಕ ಕನ್ನಡ ವಿಷಯ ಪತ್ರಿಕೆ ಈ ಮೂರು ವಿಷಯಗಳ ಪರೀಕ್ಷೆಯಲ್ಲೂ ತಲಾ 132 ಅಂಕವೇ ಬಂದಿದೆ. ಇದು ಹೇಗೆ ಸಾಧ್ಯ ಎಂದು ಈ ಅಕ್ರಮದಿಂದ ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಈ ಅಭ್ಯರ್ಥಿಗಳ ಪ್ರಕಾರ ಮೌಲ್ಯಮಾಪನ ನಡೆಸಲು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದು, ಈ ಸಂಸ್ಥೆಯು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದು ಈ ಎಲ್ಲಾ ಸಮಸ್ಯೆಗಳಿಗೂ ಮೂಲ. ಲಿಖಿತ ಪರೀಕ್ಷೆಯಲ್ಲಿ ಮೂರಕ್ಕಿಂತ ಹೆಚ್ಚು ವಿಷಯಗಳಲ್ಲಿ ಒಂದೇ ರೀತಿಯಲ್ಲಿ ಮಾರ್ಕ್ಸ್‌ ಪಡೆಯವುದು ಅಸಂಭವ. ಈ ಅಂಶವೇ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಮೇಲುನೋಟಕ್ಕೆ ಸಾಬೀತುಪಡಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ. ಹೀಗಾಗಿ ಫಲಿತಾಂಶ ತಡೆಹಿಡಿಯಬೇಕು ಎಂದು ಕೋರಿ ಅನೇಕ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಕ್ರಮ ನಡೆದಿರುವುದು ಹೇಗೆ:

ಮುಖ್ಯ ಪರೀಕ್ಷೆಯ ಎಲ್ಲ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಡಿಜಿಟಲ್‌ ಮೌಲ್ಯಮಾಪನ ಮಾಡಲಾಗುತ್ತದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾ‌ನ್‌ ಮಾಡಿ ಆನ್‌ಲೈನ್‌ ಮೂಲಕ ಮೌಲ್ಯಮಾಪಕರಿಗೆ ರವಾನಿಸಲಾಗುತ್ತದೆ. ಮೌಲ್ಯಮಾಪಕರು ಕೆಪಿಎಸ್‌ಸಿ ಒದಗಿಸಿರುವ ಯೂಸರ್‌ ನೇಮ್‌ಗಳಿಗೆ ಹೊಸ ಪಾಸ್‌ವರ್ಡ್‌ಗಳನ್ನು ಸೃಷ್ಟಿಸಿ ಮೌಲ್ಯಮಾಪನ ಮಾಡಬೇಕು. ಆದರೆ, ಕೆಲವು ಮೌಲ್ಯಮಾಪಕರಿಗೆ ಕೆಪಿಎಸ್‌ಸಿ ಪರೀಕ್ಷಾ ವಿಭಾಗವೇ ಪಾಸ್‌ವರ್ಡ್‌ ಒದಗಿಸಿದೆ. ಈ ಪಾಸ್‌ವರ್ಡ್‌ ಕೆಪಿಎಸ್‌ಸಿ ಬಳಿಯೂ ಇರುವುದು ಅಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ನೊಂದ ಅಭ್ಯರ್ಥಿಗಳು ಆರೋಪಿಸುತ್ತಾರೆ.

ಗಮನಿಸಿ: ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ.

ಕೆಪಿಎಸ್‌ಸಿ ಬಳಿಯೇ ಪಾಸ್‌ವರ್ಡ್‌ ಇದ್ದುದರಿಂದ, ಮೌಲ್ಯಮಾಪಕರು ನಮೂದಿಸಿದ ಅಂಕಗಳನ್ನು ತಿಳಿದುಕೊಳ್ಳಲು ಮತ್ತು ತಿರುಚಲು ಅವಕಾಶ ಮಾಡಿಕೊಟ್ಟಿದೆ. ಹೊಸ ಪಾಸ್‌ವರ್ಡ್‌ಗಳನ್ನು ತಾವಾಗಿಯೇ ಅಳವಡಿಸಿಕೊಂಡ ಮೌಲ್ಯಮಾಪಕರ ಪೈಕಿ ಕೆಲವರು, ಮೌಲ್ಯಮಾಪನ ಕಾರ್ಯ ಮುಗಿದ ಬಳಿಕ ಅದನ್ನು ಅಳಿಸಿಲ್ಲ. ಇದು ಕೂಡಾ ಅಂಕ ಬದಲಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ದೂರುತ್ತಾರೆ.

ಟೆಂಡರ್‌ ಕರೆಯದೆ ಗುತ್ತಿಗೆ:

ಉತ್ತರ ಪತ್ರಿಕೆಗಳನ್ನು ಡಿಜಿಟಲ್‌ ಮೌಲ್ಯಮಾಪನ ಮಾಡಲು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆದರೆ, ಈ ಬಗ್ಗೆ ಗುತ್ತಿಗೆ ನೀಡಿರುವ ಸಂಬಂಧ ಯಾವುದೇ ಮಾಹಿತಿ ಇಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯಿದೆ (ಕೆಟಿಪಿಪಿ) ಪ್ರಕಾರ ಗುತ್ತಿಗೆ ನೀಡುವುದು ಕಡ್ಡಾಯವಾಗಿದೆ. ಆದರೆ, ಈ ಪದ್ಧತಿಯನ್ನು ಕೆಪಿಎಸ್‌ಸಿ ಅನುಸರಿಸಿಲ್ಲ. ಬದಲಾಗಿ ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿ ಅಕ್ರಮಗಳನ್ನು ಎಸಗಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಡಿಜಿಟಲ್‌ ಮೌಲ್ಯಮಾಪನಕ್ಕೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯುವ ಅಗತ್ಯವಿರಲಿಲ್ಲ. 2015ನೇ ಸಾಲಿನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮ ನಡೆಯಲು ಆಸ್ಪದವೂ ಇಲ್ಲ. ಒಂದು ವೇಳೆ ಅಕ್ರಮ ನಡೆದಿರುವ ಸಂಬಂಧ ಸಾಕ್ಷ್ಯ ನೀಡಿದಲ್ಲಿ ನಾನೇ ತನಿಖೆಗೆ ವಹಿಸುತ್ತೇನೆ.

- ಜಿ.ಸತ್ಯವತಿ, ಕೆಪಿಎಸ್‌ಸಿ ಕಾರ್ಯದರ್ಶಿ