Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆ ತಗ್ಗಿದರೂ ಅನಾಹುತಕ್ಕೆ 4 ಸಾವು: ಇಂದೂ ಕೂಡ ಭಾರೀ ಮಳೆ

ಕೊಡಗಿನಲ್ಲಿ ಧಾರಾಕಾರ ಮಳೆ: ಸಂಚಾರ ಬಂದ್‌, ಡೋಣಿ ನದಿ ಪ್ರವಾಹಕ್ಕೆ ಬೆಳೆ ಹಾನಿ

Four People Died  Due to Rain Related Disaster in Karnataka grg
Author
Bengaluru, First Published Aug 6, 2022, 3:00 AM IST

ಬೆಂಗಳೂರು(ಆ.06):  ರಾಜ್ಯದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಅದರ ಪರಿಣಾಮ ಮಾತ್ರ ನಿಂತಿಲ್ಲ. ಅನಾಹುತಗಳು ಸಂಭವಿಸುತ್ತಲೇ ಇವೆ. ಶುಕ್ರವಾರ ಮಳೆ ಸಂಬಂಧಿ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದು, ಗೋಡೆ ಕುಸಿದು ಬಿದ್ದು ಜಾನುವಾರು ಕೂಡ ಮೃತಪಟ್ಟಿವೆ. ಈ ನಡುವೆ, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್‌’ ಸಾರಿರುವುದರಿಂದ ಆತಂಕ ಮುಂದುವರಿದಿದೆ.

ಕೊಡಗು, ಉತ್ತರಕನ್ನಡದ ಭಟ್ಕಳ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದಾಗಿ ಬಬಲೇಶ್ವರ, ತಾಳಿಕೋಟೆ, ದೇವರಹಿಪ್ಪರಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳೆಹಾನಿ ಸಂಭವಿಸಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಆಗಸ್ಟ್‌ 6ರ ಶನಿವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಬಂದ್‌ ಆಗಿದೆ. ಮತ್ತಷ್ಟು ಮಳೆ ಹೆಚ್ಚಾದಲ್ಲಿ ಮಡಿಕೇರಿ-ಭಾಗಮಂಡಲ ರಸ್ತೆ ಕೂಡ ಬಂದ್‌ ಆಗುವ ಸಾಧ್ಯತೆ ಎದುರಾಗಿದೆ.

ವಿಜಯಪುರದಲ್ಲಿ ಡೋಣಿ ನದಿ ಆರ್ಭಟಕ್ಕೆ ಕಂಗಾಲಾದ ಜನತೆ..!

ಇತ್ತ ಕರಾವಳಿಯ ಉತ್ತರ ಕನ್ನಡದ ಕಾರವಾರ, ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರದಲ್ಲಿ ಸಾಧಾರಣ ಮಳೆಯಾಗಿದ್ದು, ಹವಾಮಾನ ಇಲಾಖೆಯು ಶನಿವಾರ ಕರಾವಳಿಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಿದೆ. ಆ.7ರಂದು ಆರೇಂಜ್‌ ಅಲರ್ಟ್‌, ಬಳಿಕ ಆ.10ರವರೆಗೆ ಮೂರು ದಿನ ಹಳದಿ ಅಲರ್ಟ್‌ ನೀಡಲಾಗಿದೆ. ಇನ್ನು ಶುಕ್ರವಾರ ರಾಜ್ಯಾದ್ಯಂತ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇತ್ತು.

ತಂದೆ-ಮಗ ಸಾವು:

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರದ ರೆಂಬೆ ಬಿದ್ದು ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂತೇಮರಹಳ್ಳಿಯ ರಾಘವೇಂದ್ರ ಬಡಾವಣೆಯ ಎಚ್‌.ಪಿ.ರಾಜು(49) ಹಾಗೂ ಪುತ್ರ ಶರತ್‌ (15) ಮೃತರು. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇತ್ತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಭೂವನಹಳ್ಳಿ ವಡ್ಡರಹಟ್ಟಿಗ್ರಾಮದಲ್ಲಿ 4 ದಿನಗಳಿಂದ ಸುರಿದ ಮಳೆಗೆ ಮನೆ ಗೋಡೆ ಕುಸಿದು 13 ವರ್ಷದ ಬಾಲಕ ಪ್ರಜ್ವಲ್‌ ಮೃತಪಟ್ಟಿದ್ದಾನೆ.

20 ಅಡಿ ಆಳದಲ್ಲಿ ಕಾರು, ಡ್ರೈವರ್‌ ಶವ:

ಇನ್ನು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಕೊಂಡಜ್ಜಿ ಕ್ರಾಸ್‌ ಸಮೀಪ ಎರಡು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಕಾರು ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಆಳದಲ್ಲಿ ಇರುವುದು ಪತ್ತೆಯಾಗಿದೆ. ಬೋರ್‌ವೆಲ್‌ನೊಳಗೆ ಹಾಕುವ ಕ್ಯಾಮರಾವನ್ನು ನೀರಿನೊಳಗೆ ಬಿಟ್ಟು, ಕಾರು ಪತ್ತೆಹಚ್ಚಲಾಗಿದೆ. ಕಾರಿನೊಳಗೆ ಶವ ಇರುವುದು ಸಹ ಕ್ಯಾಮರಾ ಸಹಾಯದಿಂದ ತಿಳಿದುಬಂದಿದೆ.

ಕೊಡಗು: ‘ಇಂಥ ಜಲಸ್ಫೋಟ ಕಂಡಿಲ್ಲ, ಕೇಳಿಲ್ಲ..!’

ಮೂರು ಜಾನುವಾರು ಸಾವು:

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಗೋಡೆ ಕುಸಿದು ಮೂರು ಹಸುಗಳು ಬಲಿಯಾಗಿವೆ. ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕಿಕ್ಕೇರಿ ವ್ಯಾಪ್ತಿಯ ಕೋಟಹಳ್ಳಿಯಲ್ಲಿ 9 ಮನೆಗಳು ಕುಸಿದಿದ್ದು, ಹಲವು ಮನೆಗಳು ಕುಸಿಯುವ ಭೀತಿಯಲ್ಲಿವೆ. ನಾಗಮಂಗಲ ತಾಲೂಕಿನ ಗುಳಕಾಯಿಹೊಸಹಳ್ಳಿ ಸೇತುವೆ ಬಳಿ ಗುರುವಾರ ಮಧ್ಯಾಹ್ನ ನೀರಿನಲ್ಲಿ ಕೊಚ್ಚಿಹೋಗಿದ್ದ ಬೊಲೆರೋ ವಾಹನ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದು, ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಳ್ಳದಲ್ಲಿ ಕೊಚ್ಚಿ ಹೋಗಿದ್ದವರ ರಕ್ಷಣೆ:

ಬೀದರ್‌ ಜಿಲ್ಲೆ ಭಾಲ್ಕಿಯ ಸಾಯಗಾಂವನಲ್ಲಿ ಸೇತುವೆ ದಾಟುವಾಗ ಕೊಚ್ಚಿಕೊಂಡು ಹೋಗಿದ್ದ ಟ್ರ್ಯಾಕ್ಟರ್‌ನಲ್ಲಿದ್ದ ಮೂವರನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ್ದಾರೆ. ಹೊಲದಿಂದ ಮನೆಗೆ ಟ್ಟ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದ್ದು, ಟ್ರ್ಯಾಕ್ಟರ್ನಲ್ಲಿದ್ದವರು ಮರವೊಂದರ ಕೊಂಬೆ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ.
 

Follow Us:
Download App:
  • android
  • ios