ಮಳೆಯಿಂದ ಬೆಳೆಹಾನಿ: ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಪರಿಹಾರ..!
ಪ್ರಭಾವಿ ಜನಪ್ರತಿನಿಧಿಗಳಿದ್ದರೂ ತಪ್ಪಿಲ್ಲ ಬಾದಾಮಿ ತಾಲೂಕಿನ ರೈತರ ಭವಣೆ
ಭೀಮಸೇನ ದೇಸಾಯಿ
ಕೆರೂರ(ಅ.18): ಬಾದಾಮಿ ತಾಲೂಕಿನಲ್ಲಿ ರೈತರ ಭವಣೆ ತಪ್ಪುತ್ತಿಲ್ಲ. ರೈತರಿಗೆ ಸೂಕ್ತ ಬೆಳೆಹಾನಿ ಪರಿಹಾರ ಸಿಗುತ್ತಿಲ್ಲ. ಒಬ್ಬರು ವಿಪಕ್ಷನಾಯಕರು ಇನ್ನೊಬ್ಬರು ಆಡಳಿತ ಪಕ್ಷದ ಪ್ರಭಾವಿ ಸಚಿವರು ತಾಲೂಕಿನ ಜನಪ್ರತಿನಿಧಿಗಳಾಗಿದ್ದು, ಈ ಬಾರಿಯ ಅತಿವೃಷ್ಟಿಯಿಂದ ಆದ ಅಪಾರ ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಬೆಳೆಹಾನಿಗೆ ಸಂಬಂಧಿಸಿ ಅಗತ್ಯವಿರುವ ಎಲ್ಲ ಕಾಗದಪತ್ರಗಳನ್ನು ನೀಡಿದ್ದರೂ ಇನ್ನೂ ಬೆಳೆಹಾನಿ ಸಿಕ್ಕಿಲ್ಲ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ:
ಗೋವಿನಜೋಳ, ಈರುಳ್ಳಿ, ಮೆಣಸಿನಕಾಯಿ, ಹೆಸರು, ಸಜ್ಜೆ, ಹತ್ತಿ, ಸೋಯಾಬಿನ್ ಸೇರಿ ಅನೇಕ ಬೆಳೆಗಳನ್ನು ಬಿತ್ತಿ ಫಲಕ್ಕಾಗಿ ಕಾಯುತ್ತಿದ್ದಾಗ ಅತಿವೃಷ್ಟಿಯಿಂದ ರೈತರ ತುತ್ತಿನ ಚೀಲಕ್ಕೆ ಕೊಳ್ಳಿ ಇಟ್ಟಂತಾಗಿದೆ. ಬೆಳೆ ಬೆಳೆಯಲು ಎಕರೆ ಒಂದಕ್ಕೆ ಕನಿಷ್ಠ . 20 ಸಾವಿರದಿಂದ .25 ಸಾವಿರದವರೆಗೆ ರೈತರು ವೆಚ್ಚ ಮಾಡಿದ್ದಾರೆ. ಇದೀಗ ಮಳೆಹಾನಿಗೊಳಗಾಗಿ ಬಿತ್ತನೆಗೆ ವ್ಯಯಿಸಿದ ದುಡ್ಡು ಕೂಡ ರೈತರ ಕೈಸೇರದಂತಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೆರವು ನೀಡಿ ಕೈಹಿಡಿಯಬೇಕು. ಇಲ್ಲದಿದ್ದರೆ ಸಾಲದ ಹೊರೆ ಉರುಳಾಗುವುದು ನಿಶ್ಚಿತ ಎಂಬ ಮಾತುಗಳು ರೈತರಲ್ಲಿ ಕೇಳಿಬರುತ್ತಿವೆ.
Chamarajanagar: ಅತಿವೃಷ್ಟಿ ವಿಧಿಯಾಟದ ಮುಂದೆ ಮಂಡಿಯೂರಿದ ರೈತ
ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಬೆಳೆ ಪರಿಹಾರವೆಂದು ಖಾತೆಯೊಂದಕ್ಕೆ ಎಕರೆಗೆ .4000ದಿಂದ .8000 ಮಾತ್ರ ಒದಗಿಸುತ್ತದೆ. ಇದು ತೀರಾ ಅವೈಜ್ಞಾನಿಕವಾಗಿದ್ದು, ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪ್ರತಿ ಎಕರೆಗೆ ಕನಿಷ್ಠ .10 ಸಾವಿರ ಪರಿಹಾರ ಒದಗಿಸಿದರೆ ರೈತ ಬದುಕಲು ಸಾಧ್ಯ ಎಂದು ರೈತರು ಹೇಳಿದ್ದಾರೆ.
ಈಗ ಹಿಂಗಾರು ಬಿತ್ತನೆ ನಡೆಯಬೇಕಿದ್ದು, ಸೂಕ್ತ ಪರಿಹಾರ ಒದಗಿಸಿದರೆ ರೈತರಿಗೆ ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಜನಪ್ರತಿನಿಧಿಗಳಾದ ಸಚಿವ ಮುರುಗೇಶ ನಿರಾಣಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ತಂದು ನೆರವು ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಧಾರವಾಡ: ವರುಣನ ಆರ್ಭಟಕ್ಕೆ ನೀರು ಪಾಲಾದ ಬೆಳೆ: ಕಣ್ಣೀರಿಟ್ಟ ಅನ್ನದಾತ..!
ರೈತರು ಬಿತ್ತನೆಯಿಂದ ಬೆಳೆಬರುವವರೆಗೂ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಇನ್ನೇನು ಇಳುವರಿ ಕೈಸೇರುವ ಹೊತ್ತಲ್ಲಿ ಮಳೆಯಿಂದಾಗಿ ಬೆಳೆ ಕಳೆದುಕೊಂಡು ದಿಕ್ಕುತೋಚದಂತಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಪರಿಹಾರ ಒದಗಿಸಿ ರೈತರನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಸಹಕರಿಸಬೇಕು ಅಂತ ನೊಂದ ರೈತರಾದ ರಂಗನಾಥ ದೇಸಾಯಿ, ಉಮೇಶ ಕೊಣ್ಣೂರ, ದಾನಪ್ಪ ಕಿರಗಿ, ಹಾಯತಸಾಬ್ ಕೊತವಾಲ, ಹನಮಂತ ಹೊಸಮನಿ ತಿಳಿಸಿದ್ದಾರೆ.
ರೈತರು ಬಿತ್ತಿದ ಕ್ಷೇತ್ರ ಎಷ್ಟೇ ಇರಲಿ, ಕನಿಷ್ಠ 1ಎಕರೆ ಹಾಗೂ ಗರಿಷ್ಠ 2ಹೆಕ್ಟೇರ್ ಕೃಷಿಭೂಮಿಗೆ ಮಾತ್ರ ಪರಿಹಾರ ಒದಗಿಸಲು ಸರ್ಕಾರದ ನಿಯಮವಿದೆ. ಬೆಳೆ ಹಾನಿ ಕ್ಷೇತ್ರವನ್ನು ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಅಂತ ಕೆರೂರ ಪ್ರಥಮದರ್ಜೆ ಕಂದಾಯ ನಿರೀಕ್ಷಕ ಎಂ.ಬಿ.ಮಲಕನ್ನವರ ತಿಳಿಸಿದ್ದಾರೆ.