ಬೆಂಗಳೂರು(ಜು.22): ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚಾದ ಬಳಿಕ ಅನ್ಯ ಕಾರಣದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಕೊರೋನಾ ಸೋಂಕಿನಿಂದ ಮೃತರಾದವರ ಶವಸಂಸ್ಕಾರಕ್ಕೆ ಪ್ರತ್ಯೇಕ ನಾಲ್ಕು ಚಿತಾಗಾರಗಳನ್ನು ನಿಗದಿಪಡಿಸಿದೆ.

ಅಂತ್ಯಕ್ರಿಯೆ ನಗರದ ಸ್ಮಶಾನಗಳಲ್ಲಿ ಜಾಗ ಇಲ್ಲ, ಬಿಬಿಎಂಪಿ ಚಿತಾಗಾರ ದುರಸ್ತಿಯಲ್ಲಿವೆ. ಹೀಗಾಗಿ, ಅಂತ್ಯಕ್ರಿಯೆ ಸಮಸ್ಯೆ ಉಂಟಾಗುತ್ತಿರುವುದರ ಕುರಿತು ಮಂಗಳವಾರ ‘ಕನ್ನಡಪ್ರಭ’ದಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿಯ 12 ಚಿತಾಗಾರದ ಪೈಕಿ ಯಲಹಂಕದ ಮೇಡಿ ಅಗ್ರಹಾರ, ಬೊಮ್ಮನಹಳ್ಳಿಯ ಕೂಡ್ಲು, ಕೆಂಗೇರಿಯ (ರಾಜರಾಜೇಶ್ವರಿ ನಗರ- ಯಶವಂತಪುರ ರಸ್ತೆ) ಹಾಗೂ ಮಹದೇವಪುರದ ಪಣತ್ತೂರು ಚಿತಾಗಾರಗಳನ್ನು ಕೊರೋನಾ ಸೋಂಕಿತರ ಶವ ಸಂಸ್ಕಾರಕ್ಕೆ ಮಾತ್ರ ಬಳಸಿಕೊಳ್ಳಲಾಗುವುದು. ಸದ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಾಗುತ್ತಿದೆ. ಅವಶ್ಯಕತೆ ಇದ್ದರೆ ಬೆಳಗ್ಗೆ 7ರಿಂದಲೇ ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸೋಂಕಿತ ಮೃತದೇಹ ಅಂತ್ಯಕ್ರಿಯೆಗೆ ಜಾಗವೇ ಇಲ್ಲ..! 10 ಚಿತಾಗಾರದಲ್ಲಿ ಶವಗಳ ಸಾಲು

ಇನ್ನು ಬೆಂಗಳೂರು ನಗರ ಜಿಲ್ಲಾಡಳಿತ ಕೊರೋನಾ ಸೋಂಕಿನಿಂದ ಮೃತ ಅಂತ್ಯಕ್ರಿಯೆಗೆ ನಗರದ ಎಂಟು ಗ್ರಾಮಗಳಲ್ಲಿ ಗುರುತಿಸಿರುವ 35 ಎಕರೆ ಸ್ಮಶಾನ ಭೂಮಿಯನ್ನು ತಕ್ಷಣ ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದ್ದು, ಅಲ್ಲಿಯೂ ಅಂತ್ಯಕ್ರಿಯೆ ನೆರವೇರಿಸುವ ಕಾರ್ಯ ಶೀಘ್ರವಾಗಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಬಿಬಿಎಂಪಿಯ 12 ಚಿತಾಗಾರಗಳ ಪೈಕಿ ಮೈಸೂರು ರಸ್ತೆಯ ಚಿತಾಗಾರ ಹೊರತು ಪಡಿಸಿ ಉಳಿದ 11 ಚಿತಾಗಾರ ಕಾರ್ಯನಿರ್ವಹಿಸುತ್ತಿವೆ. ದುರಸ್ತಿಯಲ್ಲಿರುವ ಮೈಸೂರು ರಸ್ತೆಯ ಚಿತಾಗಾರ 10 ದಿನದಲ್ಲಿ ಸಿದ್ಧಗೊಳ್ಳಲಿದೆ. ಸದ್ಯ ನಗರದ ಚಿತಾಗಾರದಲ್ಲಿ ದಿನಕ್ಕೆ ಕೊರೋನಾ ಮತ್ತು ಕೊರೊನೇತರ 65 ಶವಗಳನ್ನು ಸಂಸ್ಕಾರ ಮಾಡಲಾಗುತ್ತಿದೆ. ಒಂದು ಚಿತಾಗಾರದಲ್ಲಿ ದಿನಕ್ಕೆ 16 ಶವಗಳಂತೆ ಬಿಬಿಎಂಪಿಯ ಎಲ್ಲ ಚಿತಾಗಾರದಲ್ಲಿ 192 ಶವ ಸಂಸ್ಕಾರ ಮಾಡಬಹುದಾಗಿದೆ. ಕಳೆದ ಜೂನ್‌ ತಿಂಗಳಲ್ಲಿ ಒಟ್ಟು 1,948 ಶವ ಸಂಸ್ಕಾರ ಮಾಡಲಾಗಿದೆ. ಅಂತ್ಯಕ್ರಿಯೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗ್ಳೂರಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ, ಸಚಿವರಿಗೆ ಸಮಸ್ಯೆ ಬಗೆಹರಿಸುವ ಧಾವಂತವಿಲ್ಲ..!

ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆಗೆ ನಿಗದಿಪಡಿಸಿದ ಚಿತಾಗಾರಗಳು

ವಲಯ- ಚಿತಾಗಾರ
ಯಲಹಂಕ-ಮೇಡಿ ಅಗ್ರಹಾರ
ಬೊಮ್ಮನಹಳ್ಳಿ-ಕೂಡ್ಲು
ಆರ್‌.ಆರ್‌.ನಗರ-ಕೆಂಗೇರಿ
ಮಹದೇವಪುರ- ಪಣತ್ತೂರು

ಸಾಮಾನ್ಯ ಮೃತದೇಹಗಳ ಅಂತ್ಯಕ್ರಿಯೆ ಚಿತಾಗಾರ

ವಲಯ-ಚಿತಾಗಾರ
ಪಶ್ಚಿಮ-ಹರಿಚಂದ್ರಘಾಟ್‌
ದಕ್ಷಿಣ- ವಿಲ್ಸನ್‌ ಗಾರ್ಡನ್‌
ದಕ್ಷಿಣ-ಬನಶಂಕರಿ
ಯಲಹಂಕ-ಹೆಬ್ಬಾಳ

ಪೂರ್ವ-ಕಲ್ಲಹಳ್ಳಿ ಆರ್‌.ಆರ್‌.ನಗರ-ಪೀಣ್ಯ ಅಂತ್ಯಕ್ರಿಯೆ ಬುಕ್ಕಿಂಗ್‌

ಅಂತ್ಯಕ್ರಿಯೆ ಬಿಬಿಎಂಪಿ ವೆಬ್‌ಸೈಟ್‌ ಮೂಲಕ ನೇರವಾಗಿ ಹತ್ತಿರದ ಚಿತಾಗಾರವನ್ನು ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಬಿಬಿಎಂಪಿ ಸಹಾಯವಾಣಿ ಸಂಖ್ಯೆ 08022660000 ಕರೆ ಮಾಡಿ ಮೃತರ ಮಾಹಿತಿ ನೀಡಿ ಬುಕ್ಕಿಂಗ್‌ ಮಾಡಬಹುದಾಗಿದೆ.

ಸ್ಮಶಾನದಲ್ಲಿ 10 ಅಡಿ ಆಳದ ಗುಂಡಿ ಆಗೆಯುವ ಸಮಸ್ಯೆ

ಕೊರೋನಾ ಸೋಂಕಿತ ಮೃತದೇಹಗಳನ್ನು 10 ಅಡಿ ಆಳ ಗುಂಡಿ ತೆಗೆದು ಅಂತ್ಯಕ್ರಿಯೆ ಮಾಡಬೇಕು. ಬಿಬಿಎಂಪಿಯಲ್ಲಿ 150 ಸ್ಮಶಾನಗಳು ಇದ್ದರೂ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಗುಂಡಿ ತೆಗೆಯುವುದು ಕಷ್ಟ. ಸ್ಮಶಾನದ ಒಳಗಡೆ ಹೋಗಿ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯಲು ಆಗದು. ಹಾಗಾಗಿ ಹೊಸ ಸ್ಮಶಾನಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೇಳಿದರು.