ಬೆಂಗಳೂರು (ಏ.01):  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದು, ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ವೇಳೆ ದೇವೇಗೌಡ ಅವರಿಗೆ ಎದೆಯಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಾಣಿಸಿಕೊಂಡ ಕಾರಣ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗೆ ಚನ್ನಮ್ಮ ಅವರು ಹಾಸನ ಹೊಳೆನರಸೀಪುರದ ನರಸಿಂಹಸ್ವಾಮಿ ಜಾತ್ರೆಗೆ ತೆರಳಿದ್ದರು. ಕಳೆದ ಕೆಲ ದಿನದಿಂದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಬುಧವಾರ ಬೆಳಗ್ಗೆ ದೇವೇಗೌಡ ಮತ್ತು ಚನ್ನಮ್ಮ ಅವರು ಮನೆಯಲ್ಲಿಯೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡರು.

ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ, ಪತ್ನಿ ಚೆನ್ನಮ್ಮಗೆ ಕೊರೋನಾ! ...

ಈ ವೇಳೆ ಇಬ್ಬರಿಗೂ ಕೋವಿಡ್‌ ವರದಿಯು ಪಾಸಿಟಿವ್‌ ಎಂದು ಬಂದಿದೆ. ತಕ್ಷಣ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಯಿತು. ಆರ್‌ಟಿಪಿಸಿಆರ್‌ ಪರೀಕ್ಷೆ ಮತ್ತು ಸಿಟಿ ಸ್ಕ್ಯಾನ್‌ ಮಾಡಲಾಯಿತು. ಆಗ ದೇವೇಗೌಡರ ವರದಿ ನೆಗೆಟಿವ್‌ ಬಂದಿದ್ದು, ಎದೆಯಲ್ಲಿ ಸಣ್ಣ ಪ್ರಮಾಣದ ಸಮಸ್ಯೆ ಕಾಣಿಸಿದೆ.

 ನಿಖರವಾದ ಸಮಸ್ಯೆ ಏನೆಂಬುದನ್ನು ತಜ್ಞ ವೈದ್ಯರು ಪರೀಕ್ಷಿಸುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಚನ್ನಮ್ಮ ಅವರ ಕೋವಿಡ್‌ ವರದಿ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ದೇವೇಗೌಡ ಅವರಿಗೆ 3-4 ದಿನದ ಬಳಿಕ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ   ಮಾಡಲಾಗುತ್ತದೆ. ಅದರ ವರದಿಯ ಬಳಿಕ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.