ದೇಶದ ಐಕ್ಯತೆಗೆ ಧಕ್ಕೆ ತರಲು ಮತಾಂಧ ಶಕ್ತಿಗಳ ಪ್ರಯತ್ನ: ಎಚ್‌.ಡಿ. ದೇವೇಗೌಡ

ದೇಶದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಧರ್ಮಗಳ ನಡುವಿನ ಸಾಮರಸ್ಯ ಹಾಳು ಮಾಡಲು, ದೇಶದ ಐಕ್ಯತೆಯನ್ನು ಕೆಡಿಸಲು ಕೆಲ ಮತಾಂಧಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.

former pm hd devegowda talks over azaan issue in sindhanur gvd

ಸಿಂಧನೂರು (ಮೇ.09): ದೇಶದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಧರ್ಮಗಳ ನಡುವಿನ ಸಾಮರಸ್ಯ ಹಾಳು ಮಾಡಲು, ದೇಶದ ಐಕ್ಯತೆಯನ್ನು ಕೆಡಿಸಲು ಕೆಲ ಮತಾಂಧ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಆರೋಪಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಜಾನ್‌ (Azaan) ವಿರುದ್ಧ ನಡೆಯುತ್ತಿರುವ ಸುಪ್ರಭಾತ (Suprabhata) ಅಭಿಯಾನದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. 

ಹಿಂದೂ ದೇವಾಲಯಗಳಲ್ಲಿ ಬೆಳಗಿನ ಜಾವ ಸುಪ್ರಭಾತ, ಮುಸ್ಲಿಮರ ಮಸೀದಿಗಳಲ್ಲಿ ಬೆಳಗಿನ ಜಾವ ಅಜಾನ್‌ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ಆಯಾ ಧರ್ಮದವರು ತಮ್ಮ ಆಚರಣೆಗಳನ್ನು ವಿಧಿವತ್ತಾಗಿ ಮಾಡುತ್ತಾ ಬಂದಿದ್ದಾರೆ. ಆದರೆ ದೇಶದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ದೇಶದ ಐಕ್ಯತೆಯನ್ನು ಹಾಳು ಮಾಡಲು ಕೆಲ ಮತಾಂಧಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

Janata Jaladhare: ಮೇ 13ರಂದು ನೆಲಮಂಗಲ ಬಳಿ ಜೆಡಿಎಸ್‌ ಬೃಹತ್ ಜಲಧಾರೆ ಸಮಾವೇಶ

ಶಾಂತಿ ಸ್ಥಾಪಿಸಬೇಕಿದೆ: ಮಾಜಿ ಪ್ರಧಾನಿಗಳಾದ ವಾಜಪೇಯಿ, ಮನಮೋಹನಸಿಂಗ್‌, ನರಸಿಂಹ ರಾವ್‌ ಅವರ ಕಾಲದಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ದೇಶದ ಜನರ ನೆಮ್ಮದಿಯನ್ನು ಹಾಳು ಮಾಡಲು ಕಲುಷಿತ ವಾತಾವರಣವನ್ನು ಸೃಷ್ಟಿಸಿ ಧರ್ಮ ಧರ್ಮಗಳ ಮಧ್ಯೆ ಸಾಮರಸ್ಯ ಹಾಳು ಮಾಡಲು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇದಕ್ಕೆ ರಾಜಕಾರಣಿಗಳು ಸೊಪ್ಪು ಹಾಕಬಾರದು. ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳಾಗಿವೆ. ಅವರು ದೇಶದಲ್ಲಿ ಅಶಾಂತಿ ವಾತಾವರಣಕ್ಕೆ ಅವಕಾಶ ಕೊಡದೆ ಶಾಂತಿ ಸ್ಥಾಪನೆ ಮಾಡಬೇಕಿದೆ. 

ನೂರಾರು ಜಾತಿ, ಧರ್ಮಗಳನ್ನು ಹೊಂದಿರುವ ಭಾರತ ಎಲ್ಲರನ್ನು ಪ್ರೀತಿಸುವ, ಗೌರವಿಸುವ ಮೊದಲಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂದು ಸಲಹೆ ನೀಡಿದರು. ಪಿಎಸ್‌ಐ ನೇಮಕಾತಿ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು ತಮ್ಮ 60 ವರ್ಷದ ರಾಜಕೀಯ ಅನುಭವದಲ್ಲಿ ಯಾವುದೇ ದಾಖಲೆಗಳಿಲ್ಲದೆ ಆರೋಪಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿರುವ ಮಾಹಿತಿ ತಮಗೆ ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶೇ.40 ಪರ್ಸಂಟೇಜ್‌ ಸರ್ಕಾರ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸುತ್ತಿರುವುದು ತಮಗೆ ಗೊತ್ತಿಲ್ಲ. ತಮ್ಮ ಕಾಲದಲ್ಲಿ ಕುಮಾರಸ್ವಾಮಿ, ರೇವಣ್ಣನವರ ಆಡಳಿತದಲ್ಲಿ ಪರ್ಸಂಟೇಜ್‌ ರಾಜಕೀಯ ಇರಲಿಲ್ಲ ಎಂದು ತಿಳಿಸಿದರು. 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಎಂದು ಬಸವರಾಜ ಪಾಟೀಲ್‌ ಯತ್ನಾಳ ಹೇಳಿರುವ ಕುರಿತು ಮತ್ತು ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಕೈಮುಗಿದು ಇದಕ್ಕೆ ಉತ್ತರಿಸುವುದಿಲ್ಲ ಎಂದು ಹೇಳಿದರು.

Hassan Politics: ದೇವೇಗೌಡ್ರದ್ದು ದಲಿತ ವಿರೋಧಿ ಕುಟುಂಬ: ಶಾಸಕ ಪ್ರೀತಂ ಗೌಡ

ದೇಶದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ಅಧಿಕಾರಕ್ಕಾಗಿ ಜನರ ಮಧ್ಯೆ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿ ಕಲಹಕ್ಕೆ ಕಾರಣವಾಗುತ್ತಿವೆ. ಜೆಡಿಎಸ್‌ ಪ್ರಾದೇಶಿಕ ಪಕ್ಷವಾಗಿದ್ದು, ಜನರ ಸಮಸ್ಯೆಗಳ ನಾಡಿ ಮಿಡಿತ ಅರಿತುಕೊಂಡಿದೆ. ಪಕ್ಷದಲ್ಲಿ ಕೆಲ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಅವುಗಳನ್ನು ಬಗೆಹರಿಸಲಾಗುವುದು. ಇನ್ನು ಜಿ.ಟಿ.ದೇವೇಗೌಡ, ಬಸವರಾಜ ಹೊರಟ್ಟಿ ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ. ಪಕ್ಷದಿಂದ ಹೋಗುವವರನ್ನು ಕಟ್ಟಿಹಾಕಲು ಆಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Latest Videos
Follow Us:
Download App:
  • android
  • ios