ಬೆಂಗಳೂರು(ಆ.29): ಕಳೆದ ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ರಾಜ್ಯದ ಬಹುತೇಕ ಜಿಲ್ಲೆಗಳು ತತ್ತರಿಸಿದ್ದರೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಅಗತ್ಯ ನೆರವು ಮತ್ತು ಸೌಲಭ್ಯ ಕಲ್ಪಿಸುವುದರಲ್ಲಿ ವಿಫಲವಾಗಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.

ಶುಕ್ರವಾರ ಬೆಳಗಾವಿ, ವಿಜಯಪುರ, ಚಿಕ್ಕೋಡಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್‌ ಜಿಲ್ಲಾಧ್ಯಕರು ಮತ್ತು ಮುಖಂಡರ ಜತೆ ವಿಡಿಯೋ ಸಂವಾದ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ಕಳೆದ ವರ್ಷ ನೆರೆ ಹಾವಳಿಗೆ ಘೋಷಿಸಿದ್ದ ಪರಿಹಾರ ಇಂದಿಗೂ ಸಹ ತಲುಪಿಲ್ಲ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಜಿಲ್ಲೆಯ ಮುಖಂಡರು ಮಾತಿಗೆ ಪ್ರತಿಕ್ರಿಯಿಸಿದ ದೇವೇಗೌಡರು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಾವೇ ಖುದ್ದು ಮಾಹಿತಿ ನೀಡುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ದೇವೇಗೌಡರ ಪ್ರತಿಭಟನೆ ಆರಂಭ

ಕೊರೋನಾ ಸೋಂಕು ಸಮಸ್ಯೆ ಕಡಿಮೆಯಾದ ಬಳಿಕ ಬಹುತೇಕ ಜಿಲ್ಲೆಗಳಿಗೆ ತಾವು ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಭೇಟಿ ನೀಡಲಿದ್ದೇವೆ. ಅಲ್ಲಿನ ರೈತರ ಕಷ್ಟಕ್ಕೆ ಪರಿಹಾರ ಸೂತ್ರದ ಜತೆಗೆ ಪಕ್ಷ ಸಂಘಟನೆ ಮಾಡಲಾಗುವುದು. ಒಂದು ವರ್ಷದಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಪಕ್ಷದ ಮುಖಂಡರ ಜತೆ ಸೇರಿ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಕಷ್ಟದಲ್ಲಿರುವವರಿಗೆ ಸರ್ಕಾರ ತಕ್ಷಣ ಪರಿಹಾರ ಕೈಗೆತ್ತಿಗೊಳ್ಳಬೇಕು. ಕೊರೋನಾ ಸಮಸ್ಯೆಯಿಂದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅರಿಯಲು ಸಾಧ್ಯವಾಗದ ಕಾರಣಕ್ಕಾಗಿ ವಿಡಿಯೋ ಸಂವಾದದಲ್ಲಿ ಮಾಹಿತಿ ಪಡೆದುಕೊಳ್ಳಲಾಗಿದೆ. ತಮ್ಮ ಜೀವನದುದ್ದಕ್ಕೂ ರೈತರ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ರೈತರಿಗೆ ಅನ್ಯಾಯವಾಗಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ ಎಂದು ಹೇಳಿದರು. ವಿಡಿಯೋ ಸಂವಾದದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.