Karnataka budget 2025 highlights: ಮಾಜಿ ಶಾಸಕ ಪರಣ್ಣ ಮನವಳ್ಳಿ ಕಾಂಗ್ರೆಸ್ ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದಾರೆ. ಇದು ಕೇವಲ ಒಂದು ಸಮುದಾಯವನ್ನು ಓಲೈಸುವಂತಿದೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಕಂಪ್ಲಿ (ಮಾ.11): ಕಾಂಗ್ರೆಸ್ ಸರ್ಕಾರದ ಬಜೆಟ್ ಬರೀ ಹಾಳೆಗೆ ಸೀಮಿತವಾಗಿರುವುದೋ ಹೊರೆತು ಕಾರ್ಯ ರೂಪಕ್ಕೆ ಬರುವುದಲ್ಲ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪರಣ್ಣ ಮನವಳ್ಳಿ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದೇ ಸಮುದಾಯವನ್ನು ಓಲೈಕೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಗುಡಿ ಗುಂಡಾಂತರಗಳ ಅಭಿವೃದ್ಧಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಹಾಗೂ ಅನುದಾನ ಜಾರಿಗೊಳಿಸುವ ಯಾವುದೇ ಕಾರ್ಯಗಳಾಗಿಲ್ಲದಿರುವುದು ಖಂಡನೀಯವಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳ ಜಾರಿಗೊಳಿಸದೇ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು.
ಇದನ್ನೂ ಓದಿ: ಬಜೆಟ್‌ನಲ್ಲಿ ಮುಸ್ಲಿಂರಿಗೆ ಆದ್ಯತೆ ನೀಡಿದರೆ ನಾನು ವಿರೋಧಿಸುವುದಿಲ್ಲ: ಶ್ರೀರಾಮುಲು
ತುಂಗಭದ್ರಾ ಜಲಾಶಯ ನಮ್ಮ ಜೀವ ನಾಡಿಯಾಗಿದ್ದು, ನಮ್ಮ ಭಾಗದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನವಲಿ ಜಲಾಶಯ ನಿರ್ಮಾಣಕ್ಕೆ 1.5ಕೋಟಿ ಹಣ ವನ್ನು ಡಿಪಿ ಆರ್ ಇರಿಸಿ ಸಕಲ ಸಿದ್ಧತೆ ಮಾಡಿದ್ದರು. ಆದರೆ ಈಗಿನ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತೆಲಂಗಾಣ ಹಾಗೂ ಆಂಧ್ರಪ್ರದೇಶ ಸಿಎಂ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳುತ್ತಾ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಹೊರೆತು ಕಾರ್ಯ ರೂಪಕ್ಕೆ ತರಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಕೊಪ್ಪಳ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಆದಾಯ ಹೊಂದಿದ ತಾಲೂಕು ಎಂದರೆ ಅದು ಗಂಗಾವತಿ. ಇದು ಜಿಲ್ಲೆಯಾಗಲು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿದೆ. ಅಲ್ಲದೇ ಹನುಮಂತ ನೆಲೆಸಿದ ನಾಡಗಿದೆ. ನೂತನ ಜಿಲ್ಲೆ ನಿರ್ಮಾಣ ವಿಚಾರ ಬಂದಾಗ ಈ ಕುರಿತು ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.
